ಸೋಮವಾರಪೇಟೆ, ಜು. 5: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕೊರ್ಲಳ್ಳಿ-ಶುಂಠಿಮಂಗಳೂರು ಮುಖ್ಯರಸ್ತೆ ಕೆಸರಿನ ಕೊಂಪೆಯಾಗಿದ್ದು, ವಾಹನ, ಜನ ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಮಳೆ ನೀರು ರಸ್ತೆಯ ಗುಂಡಿಗಳಲ್ಲಿ ನಿಂತಿದ್ದು, ಗ್ರಾಮಸ್ಥರು ನಡೆದಾಡಲೂ ಸಹ ಅಸಾಧ್ಯವಾದಂತಹ ಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ನಿರ್ವಹಿಸಿದ ಕಾಮಗಾರಿ ಕಳಪೆಯಾದ ಪರಿಣಾಮ ರಸ್ತೆಯ ಬಹುಪಾಲು ಗುಂಡಿಮಯವಾಗಿದೆ. ಗುಣಮಟ್ಟದ ಕಾಮಗಾರಿ, ಚರಂಡಿಯ ಕೊರತೆ ಯಿಂದಾಗಿ ಸ್ಥಳೀಯರು ಮಳೆಗಾಲ ದಲ್ಲಿ ಇನ್ನಿಲ್ಲದ ಬವಣೆ ಎದುರಿಸುತ್ತಿದ್ದಾರೆ. ತಮ್ಮ ತೋಟ, ಗದ್ದೆಗಳಿಗೆ ತೆರಳಲು, ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಪ್ರಮುಖವಾಗಿ ಅವಲಂಭಿಸಿರುವ ಈ ರಸ್ತೆ ಇದೀಗ ಕೆಸರುಮಯವಾಗಿದೆ. ಗೌಡಳ್ಳಿ ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಈ ವ್ಯಾಪ್ತಿಯ ಗ್ರಾಮಸ್ಥರು ಆಗ್ರಹಿಸಿದ್ದಾರೆ.