ಮಡಿಕೇರಿ, ಜು.30 : ಕೆಲವು ದಲಿತ ಸಂಘಟನೆಗಳು ಸತ್ಯಾಸತ್ಯತೆ ಗಳನ್ನು ತಿಳಿಯದೆ ಸಂಘ ಪರಿವಾರ ಹಾಗೂ ಬಿಜೆಪಿಯನ್ನು ಗುರಿಯಾಗಿರಿಸಿ ಕೊಂಡು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಕಾಂಗ್ರೆಸ್ ಏಜೆಂಟರಂತೆ ವರ್ತಿಸುತ್ತಿವೆ ಎಂದು ಜಿಲ್ಲಾ ಬಿಜೆಪಿ ಆರೋಪಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ವಕ್ತಾರ ರತ್ನಾಕರ ಶೆಟ್ಟಿ ಕಣ್ಣಂಗಾಲ ಗ್ರಾ.ಪಂ. ಅಧ್ಯಕ್ಷೆ ಈಶ್ವರಿ ಅವರ ಮೇಲೆ ಗೋಪಾಲಕೃಷ್ಣ ಅವರಿಂದ ನಡೆದ ದೌರ್ಜನ್ಯ ಪ್ರಕರಣವನ್ನು ಪ್ರಸ್ತಾಪಿಸಿದರು.

ದಲಿತ ಸಂಘಟನೆಯೊಂದರ ಪ್ರಮುಖ ನಿರ್ವಾಣಪ್ಪ ಎಂಬವರು ಈಶ್ವರಿ ಅವರ ಮೇಲಿನ ದೌರ್ಜನ್ಯಕ್ಕೆ ಸಂಘ ಪರಿವಾರ ಕಾರಣವೆಂದು ಆರೋಪಿಸಿದ್ದಾರೆ. ಇದು ನಿರಾಧಾರ ಹೇಳಿಕೆಯಾಗಿದ್ದು, ಗೋಪಾಲಕೃಷ್ಣ ಅವರು ಕಾಂಗ್ರೆಸ್ ಬೆಂಬಲಿತ ಸದಸ್ಯರಾಗಿದ್ದಾರೆ. ಆದರೆ ಸತ್ಯಾಸತ್ಯತೆ ತಿಳಿಯದೆ ಸಂಘಟನೆಯ ಕೆಲವರು ಸಂಘ ಪರಿವಾರ ಹಾಗೂ ಬಿಜೆಪಿ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುತ್ತಿರುವದು ಖಂಡನಾರ್ಹ ವೆಂದರು. ಗೋಪಾಲಕೃಷ್ಣ ಅವರ ವಿರುದ್ಧ ಈ ಹಿಂದೆಯೂ ಅನೇಕ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿದೆ ಎಂದು ರತ್ನಾಕರ್ ಶೆಟ್ಟಿ ಆರೋಪಿಸಿದರು.

ಗುಜರಾತ್‍ನಲ್ಲಿ ದಲಿತರ ಮೇಲೆ ಇತರ ಧರ್ಮೀಯರಿಂದಲೂ ಹಲ್ಲೆ ನಡೆದಿದ್ದರೂ ಇದನ್ನು ನಿರ್ವಾಣಪ್ಪ ಅವರು ಯಾಕೆ ಖಂಡಿಸುತ್ತಿಲ್ಲ ಎಂದು ಪ್ರಶ್ನಿಸಿದರು. ಬಿಎಸ್‍ಪಿ ನಾಯಕಿ ಮಾಯಾವತಿ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ದಯಾಶಂಕರ್‍ಸಿಂಗ್ ವಿರುದ್ಧ ಬಿಜೆಪಿ ಕಾನೂನು ಕ್ರಮ ಕೈಗೊಂಡಿರುವ ದಲ್ಲದೇ ಪಕ್ಷದಿಂದಲೂ ವಜಾ ಗೊಳಿಸಿದೆ ಮತ್ತು ಆತನ ಬಂಧನವೂ ಆಗಿದೆ. ದಲಿತ ಸಂಘಟನೆಗಳು ಸಂಘ ಪರಿವಾರದ ವಿರುದ್ಧ ಇಲ್ಲಸಲ್ಲದ ಹೇಳಿಕೆಗಳನ್ನು ನೀಡುವದನ್ನು ಬಿಟ್ಟು ಸತ್ಯಾಸತ್ಯತೆಯನ್ನು ತಿಳಿಯಲು ಮುಂದಾಗಲಿ ಎಂದು ರತ್ನಾಕರ ಶೆಟ್ಟಿ ಒತ್ತಾಯಿಸಿದರು.

ಮೈಸೂರು ಜಿಲ್ಲಾಧಿಕಾರಿ ಶಿಖಾ ಅವರ ಮೇಲೂ ಕಾಂಗ್ರೆಸ್ ಮರಿ ಪುಡಾರಿಗಳಿಂದ ಮಾನಸಿಕ ಆಘಾತ ಉಂಟಾಗಿದೆ ಎಂದು ಆರೋಪಿಸಿದ ಅವರು ದಲಿತ ಸಂಘಟನೆಗಳು ಈ ಘಟನೆಯನ್ನು ಯಾಕೆ ಖಂಡಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ದೇವಟ್ ಪರಂಬು ವಿವಾದದ ಕುರಿತು ಕಾಂಗ್ರೆಸ್‍ನ ಪ್ರಮುಖರು ಬಿಜೆಪಿ ಶಾಸಕರ ಸ್ಪಷ್ಟನೆಯನ್ನು ಬಯಸಿದೆ. ಆದರೆ ದೇವಟ್ ಪರಂಬು ಸರ್ಕಾರಿ ಜಾಗವಾಗಿರುವದರಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿರುವದರಿಂದ ಕಾಂಗ್ರೆಸಿಗರೇ ಮೊದಲು ತಮ್ಮ ನಿಲುವನ್ನು ಪ್ರಕಟಿಸಬೇಕೆಂದು ರತ್ನಾಕರ ಶೆಟ್ಟಿ ಅಭಿಪ್ರಾಯಪಟ್ಟರು. ಶಾಸಕರುಗಳ ನಿರ್ಧಾರಕ್ಕಿಂತ ರಾಜ್ಯ ಸರ್ಕಾರದ ಜವಾಬ್ದಾರಿ ಇಲ್ಲಿ ದೊಡ್ಡದಾಗಿದೆ ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ರಘು ನಾಣಯ್ಯ, ರಾಜ್ಯ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಜೋಕಿಂ ರಾಡ್ರಿಗಸ್ ಹಾಗೂ ಎಸ್‍ಇ ಮೋರ್ಚಾದ ಅಧ್ಯಕ್ಷ ಸತೀಶ್ ಕುಮಾರ್ ಉಪಸ್ಥಿತರಿದ್ದರು.