ಗುಡ್ಡೆಹೊಸೂರು, ಸೆ. 23: ಚಿಕ್ಲಿಹೊಳೆ ಜಲಾಶಯದ ನಾಲಾ ಹಚ್ಚುಕಟ್ಟುದಾರರ ರೈತ ಹಿತರಕ್ಷಣಾ ಸಮಿತಿ ಸಭೆ ಗುಡ್ಡೆಹೊಸೂರಿನ ನಂದಿನಿ ಸಭಾಂಗಣದಲ್ಲಿ ಸಮಿತಿ ಅಧ್ಯಕ್ಷ ಜಿ.ಎಂ. ಮಣಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಈ ಸಂದರ್ಭ ಒಟ್ಟು ನಾಲಾ ವ್ಯಾಪ್ತಿಯ 29 ಕಿ.ಮೀ. ಎಡದಂಡೆ ಮತ್ತು ಬಲ ದಂಡೆಯ ದುರಸ್ತಿ ಕಾಮಗಾರಿಯ ಬಗ್ಗೆ ಚರ್ಚಿಸಲಾಯಿತು. ಜಲಾಶಯದಲ್ಲಿ ಹೂಳು ತುಂಬಿದ್ದು ಅದನ್ನು ತೆಗೆಯಬೇಕಾಗಿದೆ. ಹೊಸದಾಗಿ ನಿರ್ಮಾಣವಾದ ಬಲದಂಡೆ ನಾಲೆಯು ಒಟ್ಟು 19 ಕಿ.ಮೀ.ಗೆ ಇದುವರೆಗೂ ನೀರು ಹರಿಸುವ ಕಾರ್ಯ ಮಾತ್ರ ನಡೆಯಲಿಲ್ಲ. ಈ ನಾಲೆಗೆ ಖರ್ಚು ಮಾಡಿರುವ ಕೋಟಿ ಹಣಕ್ಕೆ ಲೆಕ್ಕವೇ ಇಲ್ಲದಂತಾಗಿದೆ. ಜಲಾಶಯ ಮತ್ತು ನಾಲಾ ವ್ಯಾಪ್ತಿಯನ್ನು ಸರಿಯಾಗಿ ನಿರ್ವಹಣೆ ಮಾಡಿದಲ್ಲಿ ಬೇಸಿಗೆಯಲ್ಲೂ ರೈತರು ವಿವಿಧ ಬೆಳೆಗಳನ್ನು ಬೆಳೆದು ಆರ್ಥಿಕವಾಗಿ ಮುಂದುವರಿಯಬಹುದು. ನಾಲಾ ವ್ಯಾಪ್ತಿಯ ಎಲ್ಲಾ ಕೆರೆಗಳಿಗೂ ನೀರು ಹರಿಸುವಂತೆ ಈ ಸಂದರ್ಭ ಇಲಾಖಾಧಿಕಾರಿಗಳನ್ನು ಒತ್ತಾಯಿಸಲಾಯಿತು.
ಮುಖ್ಯವಾಗಿ ಬಾಳುಗೊಡುವಿನ ದೆವ್ವದಕೇರೆ, ಬೊಳ್ಳುರು ಕೆರೆ, ಮಾದಪಟ್ಟಣದ ಕಾಟಿಕೆರೆ ನೀರು ಹರಿಸುವಂತೆ ಆಗ್ರಹಿಸಲಾಯಿತು. ಮುಂದಿನ ಬಾರಿ ಹೆಚ್ಚುವರಿ ನೀರನ್ನು ಕಾವೇರಿ ನದಿಗೆ ಬಿಡದೆ ನಾಲೆಗಳಿಗೆ ಹರಿಸುವಂತೆ ಸಭೆಯಲ್ಲಿ ತೀರ್ಮಾನಿಸಲಾಯಿತು.
ಮುಂದಿನ ದಿನಗಳಲ್ಲಿ ಸಿ.ಎಂ. ಬಳಿ ತೆರಳಿ ನಾಲೆಗಳ ಕಾಮಗಾರಿಗೆ ಹಣ ಬಿಡುಗಡೆಗೆ ಮನವಿ ಮಾಡುವಂತೆ ನಿರ್ಣಯ ಕೈಗೊಳ್ಳಲಾಯಿತು.
ಸಭೆಯಲ್ಲಿ ಇಂಜಿನಿಯರ್ ಕಿರಣ್, ಜಗದೀಶ್ ಮತ್ತು ಸಮಿತಿ ಕಾರ್ಯದರ್ಶಿ ಕುಡೆಕ್ಕಲ್ ಗಣೇಶ್ ವೀರರಾಜು, ತಿಮ್ಮಯ್ಯ, ಪರ್ಲಕೋಟಿ ಅಶೋಕ (ನಂದ), ಜಿ.ಎಂ. ವಿಶು ಕುಮಾರ್, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ಎಲ್. ವಿಶ್ವ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಬಿ.ಸಿ. ಮಲ್ಲಿಕಾರ್ಜುನ, ಜಗದೀಶ್, ಜಿ.ಟಿ. ರವಿ ಮುಂತಾದವರು ಹಾಜರಿದ್ದು ಸಲಹೆ ಸೂಚನೆ ನೀಡಿದರು.
- ಕುಡೆಕ್ಕಲ್ ಗಣೇಶ್.