ಮಡಿಕೇರಿ, ಜು. 21: ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಕೆ.ಜೆ. ಜಾರ್ಜ್ ಅವರನ್ನು ಬಂಧಿಸಬೇಕು ಮತ್ತು ಅವರ ಆಸ್ತಿ ಮೂಲದ ಬಗ್ಗೆ ಆದಾಯ ತೆರಿಗೆ ಅಧಿಕಾರಿಗಳು ತನಿಖೆ ನಡೆಸಬೇಕೆಂದು ಜಾತ್ಯತೀತ ಜನತಾದಳ ಕೊಡಗು ಘಟಕ ಒತ್ತಾಯಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಜಿಲ್ಲಾ ವಕ್ತಾರ ಪಿ.ಎಸ್. ಭರತ್ ಕುಮಾರ್, ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಸಾವಿಗೆ ಕೆ.ಜೆ. ಜಾರ್ಜ್ ಅವರ ರಾಜೀನಾಮೆ ಸೇರಿದಂತೆ ಮೂವರು ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿರುವದು ಮಾತ್ರ ಪರಿಹಾರವಲ್ಲವೆಂದು ಅಭಿಪ್ರಾಯ ಪಟ್ಟರು. ಕೆ.ಜೆ. ಜಾರ್ಜ್ ಅವರನ್ನು ಬಂಧಿಸಬೇಕು. ಜಾರ್ಜ್ ಅವರು ಅಲ್ಪ ಕಾಲದಲ್ಲಿ ಸಂಪಾದಿಸಿದ ಕೋಟ್ಯಾಂತರ ರೂಪಾಯಿ ಆಸ್ತಿಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಕೇಂದ್ರ ಆದಾಯ ತೆರಿಗೆ ಅಧಿಕಾರಿಗಳು ಜಾರ್ಜ್ ಅವರ ಆದಾಯದ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆಗೆ ಒಳಪಡಿಸಬೇಕು ಮತ್ತು ಹಿರಿಯ ಅಧಿಕಾರಿಗಳಾದ ಪ್ರಣಬ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ಅವರನ್ನು ಅಮಾನತು ಮಾಡಬೇಕೆಂದು ಒತ್ತಾಯಿಸಿ ತಾ. 29 ರಂದು ಜಿಲ್ಲಾ ಜೆಡಿಎಸ್ ವತಿಯಿಂದ ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.

ಈ ಬೇಡಿಕೆಗಳು ಈಡೇರುವವರೆಗೆ ಜೆಡಿಎಸ್ ಹೋರಾಟವನ್ನು ಮುಂದುವರೆಸಲಿದೆ. ಜಾರ್ಜ್ ಅವರ ರಾಜೀನಾಮೆಗಾಗಿ ಒತ್ತಾಯಿಸಿ ಜೆಡಿಎಸ್ ರಾಜ್ಯ ವರಿಷ್ಠ ಹೆಚ್.ಡಿ. ಕುಮಾರಸ್ವಾಮಿ ಅವರ ನೇತೃತ್ವದಲ್ಲಿ ವಿಧಾನಸಭೆಯಲ್ಲಿ ಆಹೋರಾತ್ರಿ ಧರಣಿ ನಡೆಸಿದಂತೆ ಜಾರ್ಜ್ ಅವರ ಬಂಧನಕ್ಕಾಗಿ ಒತ್ತಾಯಿಸಿ ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲಾಧಿಕಾರಿಗಳ ಕಚೇರಿ ಎದುರು ಆಹೋರಾತ್ರಿ ಧರಣಿ ನಡೆಸಲಾಗುವದು.

ಜಾರ್ಜ್ ಅವರನ್ನು ಬಂಧಿಸ ದಿದ್ದಲ್ಲಿ ಮತ್ತು ಹಿರಿಯ ಅಧಿಕಾರಿಗಳನ್ನು ಅಮಾನತುಗೊಳಿ¸ Àದಿದ್ದಲ್ಲಿ ಐಎಎಸ್ ಅಧಿಕಾರಿ ಡಿ.ಕೆ. ರವಿ ಅವರ ಪ್ರಕರಣದಲ್ಲಿ ಸಾಕ್ಷ್ಯಗಳನ್ನು ನಾಶಪಡಿಸಿದಂತೆ ಡಿವೈಎಸ್‍ಪಿ ಎಂ.ಕೆ. ಗಣಪತಿ ಅವರ ಪ್ರಕರಣದಲ್ಲೂ ಸಾಕ್ಷ್ಯಗಳನ್ನು ನಾಶ ಪಡಿಸುವ ಸಾಧ್ಯತೆಗಳಿದೆ. ತನಿಖೆ ವೇಳೆ ಹಸ್ತಕ್ಷೇಪ ಮಾಡುವ ಎಲ್ಲಾ ಮುನ್ಸೂಚನೆಗಳೂ ಇವೆ. ಸಿಐಡಿ ತನಿಖೆ, ನ್ಯಾಯಾಂಗ ತನಿಖೆ ಎನ್ನುವ ಕಾಲಹರಣದ ಅಜೆಂಡಾದ ಮೂಲಕ ಸಾಕ್ಷ್ಯಗಳನ್ನು ನಾಶಪಡಿಸುವ ಹುನ್ನಾರ ನಡೆಯುತ್ತಿದೆ ಎಂದು ಭರತ್ ಕುಮಾರ್ ಆರೋಪಿಸಿದರು.

ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಮನ್ಸೂರ್ ಆಲಿ ಮಾತನಾಡಿ, ಪಿಎಸ್‍ಐ ಅವರಿಂದ ನಿಷ್ಪಕ್ಷಪಾತ ತನಿಖೆ ನಡೆಸಲು ಸಾಧ್ಯವಿಲ್ಲವೆಂದು ಅವರು ಅಭಿಪ್ರಾಯಪಟ್ಟರು.

ಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಬೆಲ್ಲು ನಂಜಪ್ಪ, ಮಹಮ್ಮದ್ ಅಬ್ರಾರ್ ಹಾಗೂ ಮುಕ್ಕಾಟಿರ ಲೋಕೇಶ್ ಉಪಸ್ಥಿತರಿದ್ದರು.