ಮಡಿಕೇರಿ, ಜು. 30: ಮಹದಾಯಿ ಯೋಜನೆಗೆ ಸಂಬಂಧಿಸಿದಂತೆ ಇಂದು ಕರೆದಿದ್ದ ಕರ್ನಾಟಕ ಬಂದ್‍ಗೆ ರಾಜ್ಯದ ಇತರೆಡೆಗಳಲ್ಲಿ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇತ್ತೀಚೆಗಷ್ಟೆ ಡಿ.ವೈ.ಎಸ್.ಪಿ. ಗಣಪತಿ ಆತ್ಮಹತ್ಯೆ ಪ್ರಕರಣ ವಿರೋಧಿಸಿ ನಡೆದ ಕೊಡಗು ಬಂದ್ ಹಾಗೂ ರಾಜ್ಯದಲ್ಲಿ ನಡೆದಿದ್ದ ಕೆ.ಎಸ್.ಆರ್.ಟಿ.ಸಿ. ನೌಕರರ ಮುಷ್ಕರದಿಂದಾಗಿ ಕೊಡಗು ಜಿಲ್ಲೆಯಲ್ಲಿ ಈ ಬಂದ್ ಕರೆಗೆ ನೇರ ಬೆಂಬಲ ಘೋಷಿಸಿರಲಿಲ್ಲ. ಬದಲಿಗೆ ರಾಜ್ಯದ ಹಿತರಕ್ಷಣೆಯ ಹೋರಾಟಕ್ಕೆ ಬೆಂಬಲ ಮಾತ್ರ ವ್ಯಕ್ತಪಡಿಸಲಾಗಿದ್ದ ಹಿನ್ನೆಲೆ ಕೊಡಗು ಜಿಲ್ಲೆ ಇಂದು ಸಹಜ ಸ್ಥಿತಿಯಲ್ಲಿತ್ತು. ಅಪರಾಹ್ನದ ತನಕ ಜಿಲ್ಲೆಯಲ್ಲಿ ಯಾವದೇ ಕೆ.ಎಸ್.ಆರ್. ಟಿ.ಸಿ. ಬಸ್‍ಗಳು ಸಂಚರಿಸದೇ ಇದ್ದದ್ದು ಹೊರತು ಪಡಿಸಿದರೆ ಉಳಿದಂತೆ ಜಿಲ್ಲೆಯಲ್ಲಿನ ಜನಜೀವನ ಎಂದಿನಂತಿತ್ತು.

ಮಹದಾಯಿ ನ್ಯಾಯಾಧಿಕರಣದ ಮಧ್ಯಂತರ ತೀರ್ಪು ವಿರೋಧಿಸಿ ಕರ್ನಾಟಕ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಪ್ರತಿಭಟಿಸಿ ಕನ್ನಡ ಪರ ಸಂಘಟನೆಗಳು ಕರೆಕೊಟ್ಟಿರುವ ಕರ್ನಾಟಕ ಬಂದ್‍ಗೆ ಕೊಡಗು ಜಿಲ್ಲೆಯಲ್ಲಿ ಯಾವದೇ ಬಿಸಿ ತಟ್ಟಲಿಲ್ಲ. ಆದರೆ ಕುಶಾಲನಗರದಲ್ಲಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಕೊಡಗು ಜಿಲ್ಲೆಯಲ್ಲಿ ವ್ಯಾಪಾರ ವಹಿವಾಟುಗಳು ನಿರಂತರವಾಗಿ ಸಾಗಿದರೆ, ಖಾಸಗಿ

ಬಸ್‍ಗಳು, ಆಟೋ ರಿಕ್ಷಾಗಳು ಹಾಗೂ ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು. ಆದರೆ ರಾಜ್ಯ ರಸ್ತೆ ಸಾರಿಗೆ ಬಸ್‍ಗಳು ರಸ್ತೆಗಿಳಿಯಲಿಲ್ಲ. ಜಿಲ್ಲೆಯಲ್ಲಿ ಖಾಸಗಿ ಬಸ್ ಮಾಲೀಕರ ಸಂಘ ಮತ್ತು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಸಂಘಟನೆಗಳು ಜಿಲ್ಲೆಯಲ್ಲಿ ಇತ್ತೀಚೆಗೆ ಕೊಡಗು ಬಂದ್ ಆಚರಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ಬಂದ್‍ಗೆ ಬೆಂಬಲವಿಲ್ಲ. ಕರ್ನಾಟಕ ಬಂದ್ ಪರೋಕ್ಷ ಬೆಂಬಲ ನೀಡಲಾಗುವದು. ಮಹದಾಯಿ ಸಮಸ್ಯೆಗೆ ಸಂಬಂಧಿಸಿ ದಂತೆ ಸರ್ಕಾರಕ್ಕೆ ಎರಡೂ ಸಂಘಟನೆ ಗಳು ಲಿಖಿತ ಮನವಿ ಮಾಡುವದಾಗಿ ಹೇಳಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲಿ ಬಂದ್‍ಗೆ ಯಾವದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.

ಶಾಲಾ-ಕಾಲೇಜುಗಳು, ಸರ್ಕಾರಿ ಕಚೇರಿಗಳು ಹಾಗೂ ಖಾಸಗಿ ಸಂಸ್ಥೆಗಳು ಎಂದಿನಂತೆ ಯಾವದೇ ಅಡೆತಡೆಗಳಿಲ್ಲದೆ ಕರ್ತವ್ಯ ನಿರ್ವಹಿಸಿ ದವು. ಖಾಸಗಿ ಬಸ್‍ಗಳು, ಆಟೋ ರಿಕ್ಷಾಗಳು ಹಾಗೂ ಖಾಸಗಿ ವಾಹನಗಳು ಕೂಡ ಎಂದಿನಂತೆ ಸಂಚರಿಸಿದವು. ಆದರೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕನ್ನಡ ಪರ ಸಂಘಟನೆಗಳು ಹಾಗೂ ರೈತ ಸಂಘಟನೆಗಳು ಬಂದ್ ಆಚರಿಸುತ್ತಿರುವದರಿಂದ ಸಾರಿಗೆ ಬಸ್‍ಗಳು ಸಂಚರಿಸಿದರೆ ಸಂಘಟಕರು ತಡೆಯೊಡ್ಡಿ ಹಾನಿ ಪಡಿಸಬಹುದೆಂಬ ಅಪಾಯದ ಹಿನ್ನೆಲೆಯಲ್ಲಿ ಸಾರಿಗೆ ಬಸ್‍ಗಳನ್ನು ರಸ್ತೆಗಿಳಿಸಲಿಲ್ಲ.

ಮಡಿಕೇರಿ ಸಾರಿಗೆ ಬಸ್ ನಿಲ್ದಾಣದಿಂದ ಇಂದು ಬೆಳಿಗ್ಗೆ 6 ಗಂಟೆಗೂ ಮುನ್ನ ಬೇರೆ ಡಿಪೋಗಳಿಗೆ ಸೇರಿದ ಬಸ್‍ಗಳು ಸಂಚರಿಸಿದ್ದು ಬಿಟ್ಟರೆ ಮಡಿಕೇರಿ ಡಿಪೋದ ಒಂದೇ ಒಂದು ಬಸ್ ರಸ್ತೆಗಿಳಿಯಲ್ಲಿಲ್ಲ. ಬಸ್ ನಿಲ್ದಾಣ ದಲ್ಲಿ ದೂರದೂರಿಗೆ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಯಾವಾಗಲೂ ಗಿಜಿಗಿಡುತ್ತಿತ್ತು. ಆದರೆ ಇಂದು ಬೆಳಿಗ್ಗೆಯಿಂದಲೇ ಪ್ರಯಾಣಿಕರ ಸಂಖ್ಯೆ ತುಂಬಾ ವಿರಳವಾಗಿತ್ತು. ಸುಳ್ಯ, ಧರ್ಮಸ್ಥಳ, ಸುಬ್ರಹ್ಮಣ್ಯಕ್ಕೆ ತೆರಳುವ ಕೆಲವು ಪ್ರಯಾಣಿಕರನ್ನು ಬಿಟ್ಟರೆ ಬಸ್ ನಿಲ್ದಾಣ ಬಣಗುಡುತ್ತಿತ್ತು. ಇದರಿಂದಾಗಿ ಬಸ್ ನಿಲ್ದಾಣದ ಸಿಬ್ಬಂದಿಗಳು ನಿಲ್ದಾಣದ ಸ್ವಚ್ಛತೆಯಲ್ಲಿ ತೊಡಗಿದ್ದುದು ಕಂಡು ಬಂತು.