ಮಡಿಕೇರಿ, ಸೆ. 14: ಭಾಗಮಂಡಲದಲ್ಲಿ ಮಳೆಗಾಗಿ ಪರ್ಜನ್ಯ ವೃಷ್ಠಿ ಯಜ್ಞ ನಡೆಯುತ್ತಿದೆ. ಇದರ ಫಲವಾಗಿ ನಿನ್ನೆ ಮಧ್ಯಾಹ್ನದಿಂದ ದಿಢೀರಾಗಿ ಎಲ್ಲೆಡೆ ಮಳೆ ಸುರಿಯಲಾರಂಭಿಸಿದೆ. ನಿನ್ನೆ ರಾತ್ರಿಯಿಂದ ಬೆಳಗ್ಗಿನವರೆಗೆ ನಿರಂತರ ಮಳೆಯಾಗಿದೆ. ಮಳೆ ಎಂದಿನಂತಾಗಿರದೆ ಕೆಂಪು ಮಿಶ್ರಿತ ನೀರಿನ ಮಳೆ ಸುರಿದಿದೆ. ಎಲ್ಲ ಕಡೆ ಇದು ಗಮನಕ್ಕೆ ಬಂದಿದ್ದರೂ, ಭಾಗಮಂಡಲ ಸುತ್ತ - ಮುತ್ತ, ಮಡಿಕೇರಿ ಬಳಿಯ ತಾಳತ್‍ಮನೆಯಲ್ಲಿ ಕೆಂಪು ಮಳೆ ಸುರಿದಿರುವದು ಗೋಚರವಾಗಿದೆ.

ಭಾಗಮಂಡಲದ ಸೂರ್ತಲೆ ಜಯಂತ್, ನಿಡ್ಯಮಲೆ ಪ್ರಕಾಶ್ ಅವರ ಮನೆಯ ಅಂಗಳದಲ್ಲಿದ್ದ ಪಾತ್ರೆಗಳಲ್ಲಿ ಕೆಂಪು ನೀರು ಸಂಗ್ರಹವಾಗಿದೆ. ಅಂಗಳದಲ್ಲೂ ಕೆಂಪು ನೀರಿನ ಕಲೆಗಳು ಗೋಚರಿಸಿವೆ. ಇತ್ತ ತಾಳತ್‍ಮನೆಯ ರಾಜ್‍ಕುಮಾರ್ ಹಾಗೂ ಆನಂದ ಎಂಬವರುಗಳ ಮನೆಯ ಅಂಗಳದಲ್ಲಿ ಇರಿಸಲಾಗಿದ್ದ ಡ್ರಂಗಳಲ್ಲೂ ಕೆಂಪು ನೀರು ಸಂಗ್ರಹವಾಗಿರುವದು ಗೋಚರಿಸಿದೆ. ಕೆಂಪು ನೀರಿನ ಮಳೆ ಯಜ್ಞದ ಪ್ರತಿಫಲವೇ ಎಂದು ಅವರುಗಳು ಪ್ರಶ್ನಿಸಿದ್ದಾರೆ?