ಮಡಿಕೇರಿ, ಅ. 22: ಕೃಷಿಯಲ್ಲಿ ತೋರಿದ ಪರಿಶ್ರಮ ಹಾಗೂ ಸಾಧನೆಯನ್ನು ಪರಿಗಣಿಸಿ ಜಿಲ್ಲೆಯ ಮೂವರು ಕೃಷಿಕರಿಗೆ ಶಿವಮೊಗ್ಗದ ಕೃಷಿ ಮತ್ತು ತೋಟಗಾರಿಕಾ ವಿಶ್ವ ವಿದ್ಯಾನಿಲಯ ಪ್ರಶಸ್ತಿ ನೀಡಿ ಗೌರವಿಸಿದೆ.

ಇಬ್ನಿವಳವಾಡಿಯ ಸುಬ್ಬಯ್ಯ, ಕುಂದದ ಗಂಗಮ್ಮ ಹಾಗೂ ನಲ್ಲೂರಿನ ಗಣೇಶ್ ತಿಮ್ಮಯ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಶಿವಮೊಗ್ಗದಲ್ಲಿ ಇತ್ತೀಚೆಗೆ ಕೃಷಿ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಉದ್ಘಾಟನೆ ದಿನ ಇವರುಗಳನ್ನು ಗೌರವಿಸಲಾಯಿತು.

ಕೃಷಿ ಮೇಳವನ್ನು ಉದ್ಘಾಟಿಸಿದ ರಾಜ್ಯ ಕೃಷಿ ಸಚಿವ ಕೃಷ್ಣ ಬೈರೇಗೌಡ ಹಾಗೂ ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರುಗಳು ಸಾಧಕರನ್ನು ಸನ್ಮಾನಿಸಿದರು.

ಕೃಷಿ ಮೇಳದಲ್ಲಿ ಕೊಡಗು ಜಿಲ್ಲೆಯ ಅತ್ಯುತ್ತಮ ಕೃಷಿ ಪ್ರಶಸ್ತಿಯನ್ನು ಮಡಿಕೇರಿ ಸಮೀಪದ ಇಬ್ನಿವಳವಾಡಿ ಗ್ರಾಮದ ಆರೇಂಜ್ ಕಿಂಗ್ ಎಂದೇ ಖ್ಯಾತವೆತ್ತ ಪೊನ್ನಚೆಟ್ಟೀರ ಸುಬ್ಬಯ್ಯ ಅರವರಿಗೆ ನೀಡಲಾಯಿತು. ಕೊಡಗು ಜಿಲ್ಲೆಯಲ್ಲಿ ಕಿತ್ತಳೆ ಬೆಳೆಯು ನಶಿಸುತ್ತಿರುವ ಸಂದರ್ಭದಲ್ಲಿ ಇದರ ಪುನಶ್ಚೇತನ ಸಾದ್ಯವೆಂದು ಅದನ್ನು ಸವಾಲಾಗಿ ಸ್ವೀಕರಿಸಿ ಬೆಳೆದು ತೋರಿಸಿರುತ್ತಾರೆ. ಇವರು ಒಟ್ಟು 1400 ಕಿತ್ತಳೆ ಗಿಡಗಳನ್ನು ಉತ್ತಮವಾಗಿ ಬೆಳೆದು ಸರಾಸರಿ 40 ಕೆ.ಜಿ.ಯಂತೆ ಕಿತ್ತಳೆ ಹಣ್ಣುಗಳನ್ನು ನಿರಂತರವಾಗಿ ಕಟಾವು ಮಾಡುತ್ತಿದ್ದಾರೆ. ಈಗಾಗಲೇ ಇವರ ತೋಟದಲ್ಲಿ ತೋಟಗಾರಿಕಾ ಇಲಾಖೆ ವತಿಯಿಂದ ರೈತರಿಗೆ ಕ್ಷೇತ್ರೋತ್ಸವನ್ನು ಹಮ್ಮಿಕೊಂಡಿದ್ದು, ತಮ್ಮ ಕಿತ್ತಳೆ ಬೆಳೆಯ ಅಪಾರ ಜ್ಞಾನವನ್ನು ಇತರೇ ರೈತರಲ್ಲಿ ಹಂಚಿಕೊಂಡಿದ್ದಾರೆ. ಇತರ ರೈತರು ಕಿತ್ತಳೆ ಕೃಷಿಯತ್ತ ಆಸಕ್ತಿ ತೋರಲು ಪ್ರೇರಣೆ ಆಗಿದ್ದಾರೆ. ಕೊಡಗಿನ ಕಿತ್ತಳೆ ಬೆಳೆಯ ಪುನಶ್ಚೇತನಕ್ಕೆ ತನ್ನದೇ ಆದ ಕೊಡಗೆಯನ್ನು ನೀಡಿ ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿದಕ್ಕೆ ಇವರಿಗೆ ಕೃಷಿ ಮೇಳದಲ್ಲಿ ಕೊಡಗು ಜಿಲ್ಲೆಯ ಅತ್ಯುತ್ತಮ ಕೃಷಿ ಪ್ರಶಸ್ತಿಯನ್ನು ಕೃಷ್ಣ ಬೈರೇಗೌಡ ಹಾಗೂ ಕಾಗೋಡು ತಿಮ್ಮಪ್ಪ ನೀಡಿದರು.

ಕೊಡಗು ಜಿಲ್ಲೆಯ ಅತ್ಯುತ್ತಮ ಕೃಷಿ ಮಹಿಳೆ ಪ್ರಶಸ್ತಿಯನ್ನು ವೀರಾಜಪೇಟೆ ತಾಲೂಕಿನ ಕುಂದ ಗ್ರಾಮದ ಪಟ್ರಂಗಡ ಗಂಗಮ್ಮ (ದಿ. ರತನ್ ಸೋಮಯ್ಯ ಅವರ ಪತ್ನಿ) ಪಡೆದುಕೊಂಡಿದ್ದಾರೆ. ಇವರು ಕಳೆದ 15 ವರ್ಷಗಳಿಂದ ಕಾಫಿಯೊಂದಿಗೆ ವಿವಿಧ ತೋಟಗಾರಿಕೆ ಮತ್ತು ಕೃಷಿ ಬೆಳೆಯನ್ನು ಸಮಗ್ರ ಕೃಷಿ ಪದ್ಧತಿಯ ಮೂಲಕ ಬೆಳೆದು ಮಾದರಿ ರೈತ ಮಹಿಳೆಯಾಗಿ ಕಾರ್ಯನಿರ್ವಹಿಸಿದನ್ನು ಪರಿಗಣಿಸಿ ಇವರಿಗೆ ಅತ್ಯುತ್ತಮ ಕೃಷಿ ಮಹಿಳೆ ಪ್ರಶಸ್ತಿಯನ್ನು ನೀಡಲಾಗಿದೆ.

ವೀರಾಜಪೇಟೆ ತಾಲೂಕಿನ ಪೊನ್ನಂಪೇಟೆ ಸಮೀಪದ ನಲ್ಲೂರು ಗ್ರಾಮದ ಮಾಜಿ ಸೈನಿಕ ಸೋಮೆಯಂಡ ಗಣೇಶ್ ತಿಮ್ಮಯ್ಯ ಅವರು ರಾಜ್ಯಮಟ್ಟದಲ್ಲಿ ಭತ್ತದ ಕೃಷಿಯನ್ನು ಸಮಗ್ರ ಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ರಾಜ್ಯಕ್ಕೆ ದಾಖಲೆ ಇಳುವರಿ ಪ್ರತಿ ಹೆಕ್ಟೆರ್‍ಗೆ 124 ಕಿಂಟಾಲ್ ಬೆಳೆದಿದ್ದಾರೆÉ. ಇವರ ಸಾಧನೆಯನ್ನು ಪರಿಗಣಿಸಿ ಇವರಿಗೆ ಕೃಷಿ ಮೇಳದಲ್ಲಿ ಸನ್ಮಾನಿಸಲಾಯಿತು ಎಂದು ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ವಿಸ್ತರಣಾ ವಿಭಾಗ ಮುಖ್ಯಸ್ಥ ಡಾ. ಎನ್.ಯು. ಪೂಣಚ್ಚ ತಿಳಿಸಿದ್ದಾರೆ.