ವೀರಾಜಪೇಟೆ, ಸೆ. 29: ಕೃಷಿ ಭೂಮಿಯನ್ನೇ ನಂಬಿ ಬದುಕುತ್ತಿರುವ ಕೊಡಗಿನ ಗ್ರಾಮೀಣ ಪ್ರದೇಶದ ಜನರು ತಮ್ಮ ಕೃಷಿ ಭೂಮಿಯನ್ನು ಪಾಳು ಬಿಡದೆ ಕೃಷಿಗೆ ಹೆಚ್ಚು ಒತ್ತು ನೀಡಬೇಕಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಅಚ್ಚಪಂಡ ಮಹೇಶ್ ಗಣಪತಿ ಹೇಳಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿಬಂದು ಸ್ವ-ಸಹಾಯ ಸಂಘಗಳ ಒಕ್ಕೂಟ ಮತ್ತು ತೋರ ಸ್ನೇಹಿತರ ಬಳಗದ ಸಂಯುಕ್ತ ಆಶ್ರಯದಲ್ಲಿ ತೋರ ಗ್ರಾಮದ ಸಮುದಾಯ ಭವನದಲ್ಲಿ ಆಯೋಜಿಸಲಾಗಿದ್ದ ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸ್ಥಳೀಯ ತಾಲೂಕು ಪಂಚಾಯಿತಿ ಸದಸ್ಯ ಮಾಳೇಟಿರ ಪ್ರಶಾಂತ್ ಉತ್ತಪ್ಪ ಮಾತನಾಡಿ, ಕೃಷಿ ಭೂಮಿ ಮಾನವನಿಗಿರುವ ಅವಿಭಾಜ್ಯ ಅಂಗ. ಕೊಡಗಿನ ಕೃಷಿ ಭೂಮಿಯನ್ನು ಯಾರು ಮಾರಾಟ ಮಾಡಬಾರದು. ಕೃಷಿಯನ್ನೇ ನಂಬಿ ಬದುಕಿರುವ ನಾವುಗಳು ದುಡಿಮೆಯಿಂದ ಯಶಸ್ಸು ಗಳಿಸಲು ಸಾಧ್ಯ ಎಂದರು.

ಯೋಜನೆಯ ಕೊಡಗು ಯೋಜನಾಧಿಕಾರಿ ಸದಾಶಿವ ಗೌಡ ಮಾತನಾಡಿ, ಕೊಡಗಿನ ಕೃಷಿ, ಆಚಾರ-ವಿಚಾರಗಳು ದೇಶದಲ್ಲೇ ಹೆಸರುಗಳಿಸಿದೆ. ಗ್ರಾಮಿಣ ಪ್ರದೇಶದಲ್ಲಿ ಕೃಷಿಗೆ ಮಹತ್ವವಿದ್ದು, ಯೋಜನೆ ವತಿಯಿಂದ ನಡೆಸುವ ಕೃಷಿ ವಿಚಾರ ಸಂಕಿರಣದ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳುವಂತಾಗಬೇಕು ಎಂದರು.

ಸಭೆಯ ಅಧ್ಯಕ್ಷತೆಯನ್ನು ಪ್ರಗತಿ ಬಂದು ಸ್ವ-ಸಹಾಯ ಸಂಘ ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ್ ವಹಿಸಿದ್ದರು. ಗೋಣಿಕೊಪ್ಪಲು ತೋಟಗಾರಿಕಾ ವಿಭಾಗದ ಡಾ. ವೀರೇಂದ್ರ ಕುಮಾರ್ ಕಾಳುಮೆಣಸು ಕೃಷಿಯಲ್ಲಿ ಕೀಟ ರೋಗ ಬಾಧೆಯ ನಿರ್ವಹಣೆ ಬಗ್ಗೆ ವಿಚಾರ ಗೋಷ್ಠಿ ನಡೆಸಿದರು. ಪ್ರಗತಿಪರ ಕೃಷಿಕರು, ನಿವೃತ್ತ ಪೊಲೀಸ್ ಅಧಿಕಾರಿ ಪಾಪಯ್ಯ, ಸ್ನೇಹಿತರ ಬಳಗದ ಅಧ್ಯಕ್ಷ ಮುದ್ದಪ್ಪ ಮಾತನಾಡಿದರು.

ಯೋಜನೆಯ ಕೃಷಿ ಅಧಿಕಾರಿ ಎಂ.ಎಂ. ಕುಶಾಲಪ್ಪ ಸ್ವಾಗತಿಸಿ, ಮೇಲ್ವಿಚಾರಕ ಎಸ್. ರವೀಂದ್ರ ನಿರೂಪಿಸಿದರೆ, ಬಿ.ಆರ್. ಸರಿತಾ ವಂದಿಸಿದರು. ವಿಚಾರ ಸಂಕೀರಣದಲ್ಲಿ 32 ಸ್ವ-ಸಹಾಯ ಸಂಘಗಳ ಸದಸ್ಯರುಗಳು, ಗ್ರಾಮಸ್ಥರು, ಕೃಷಿಕರು ಭಾಗವಹಿಸಿದ್ದರು.