ಸೋಮವಾರಪೇಟೆ, ಡಿ. 1: ತೆರಿಗೆ ವ್ಯಾಪ್ತಿಗೆ ಹೆಚ್ಚಿನ ಜನರನ್ನು ತರುವ ಕಟ್ಟುನಿಟ್ಟಿನ ಕ್ರಮಕ್ಕೆ ಕೇಂದ್ರ ಸರ್ಕಾರ ಮುಂದಾಗಿರುವದರಿಂದ ಕೃಷಿಕರು ಹಾಗೂ ಉದ್ದಿಮೆದಾರರು ತಮ್ಮ ವ್ಯವಹಾರದ ಲೆಕ್ಕಪತ್ರವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕೆಂದು ಲೆಕ್ಕ ಪರಿಶೋಧಕರಾದ ಈಶ್ವರ್ ಭಟ್ ಹೇಳಿದರು.
ರೋಟರಿ ಸಂಸ್ಥೆಯ ಆಶ್ರಯದಲ್ಲಿ ಸಫಾಲಿ ಸಭಾಂಗಣದಲ್ಲಿ ಲೆಕ್ಕಪತ್ರ ನಿರ್ವಹಣೆಯ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ದೇಶದಲ್ಲಿ ಕಾಳ ಧನವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ರೂ 500 ಹಾಗೂ 1000 ಮುಖ ಬೆಲೆಯ ನೋಟುಗಳನ್ನು ರದ್ದುಪಡಿಸಿ ಹಣದ ವ್ಯವಹಾರದ ಮೇಲೆ ನಿಯಂತ್ರಣವನ್ನು ಹೇರಿದೆ. ದೇಶದ 125 ಕೋಟಿ ಜನಸಂಖ್ಯೆಯಲ್ಲಿ ಕೇವಲ 3ಕೋಟಿಯಷ್ಟು ಜನರು ಮಾತ್ರ ತೆರಿಗೆ ವ್ಯಾಪ್ತಿಗೆ ಒಳಪಟ್ಟು ಮಿಕ್ಕ ಜನರು ನುಣುಚಿಕೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಉಳ್ಳವರಾಗಿದ್ದು, ಅಂತಹವರನ್ನು ಕಂಡು ಹಿಡಿದು ತೆರಿಗೆ ವ್ಯಾಪ್ತಿಗೆ ತರಲು ಈಗಾಗಲೇ ಕಠಿಣ ಕಾನೂನನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ ಎಂದರು.
ಕೃಷಿಕರಿಗೆ ರಾಜ್ಯ ಸರ್ಕಾರ ಮಾತ್ರ ಅಲ್ಪ ಪ್ರಮಾಣದ ತೆರಿಗೆ ವಿಧಿಸುತ್ತಿದ್ದು, ಕೇಂದ್ರ ಸರ್ಕಾರ ರಿಯಾಯಿತಿ ನೀಡಿದೆ. ಸಾಮಾನ್ಯ ವ್ಯವಹಾರಸ್ಥರು ರೂ. 2.50ಲಕ್ಷ ಉಳಿತಾಯ ಖಾತೆಯಲ್ಲಿ ಹಾಗೂ ಉದ್ದಿಮೆದಾರರು ರೂ. 12.50 ಲಕ್ಷದ ವರೆಗೆ ತಮ್ಮ ಚಾಲ್ತಿ ಅಕೌಂಟ್ನಲ್ಲಿ ಇಡಬಹುದಾಗಿದೆ. ಹೆಚ್ಚಾದಲ್ಲಿ ಆದಾಯ ತೆರಿಗೆ ಇಲಾಖೆಗೆ ಲೆಕ್ಕ ನೀಡಬೇಕಿದೆ. ಆದುದರಿಂದ ಕೃಷಿಕರು ಹಾಗೂ ಉದ್ದಿಮೆದಾರರು ತಮ್ಮ ಕೊಡು-ಕೊಳ್ಳುವಿಕೆಗೆ ಸೂಕ್ತ ರಸೀದಿಯೊಂದಿಗೆ ಲೆಕ್ಕಪತ್ರ ನಿರ್ವಹಿಸಬೇಕೆಂದರು. ತಪ್ಪಿದಲ್ಲಿ ಮುಂದೊಂದು ದಿನ ಆದಾಯ ತೆರಿಗೆ ಇಲಾಖಾಧಿಕಾರಿಗಳು ಪ್ರಶ್ನೆ ಮಾಡಬಹುದಾದ ಸಮಯ ಬರಬಹುದಾಗಿರುವದರಿಂದ ಸಮಸ್ಯೆಗೆ ಸಿಲುಕಬೇಕಾಗುತ್ತದೆ ಎಂದರು.
ಹೆಚ್ಚಿನ ಮುಖ ಬೆಲೆಯ ನೊಟುಗಳನ್ನು ಕೇಂದ್ರ ನಿಷೇಧಿಸಿದ ನಂತರ ನಡೆದ ಎಲ್ಲ ವ್ಯವಹಾರಗಳ ಮೇಲೆ ನಿಗಾ ವಹಿಸಿದೆ. ಎಲ್ಲರೂ ತಮ್ಮ ವ್ಯವಹಾರದ ವಿವರಗಳನ್ನು ಸೂಕ್ತವಾಗಿ ಇಟ್ಟುಕೊಳ್ಳಬೇಕು. ತೆರಿಗೆ ವ್ಯಾಪ್ತಿಗೆ ಒಳಪಡುವವರು ತೆರಿಗೆ ಪಾವತಿಸಿದಲ್ಲಿ ಸುಖನಿದ್ರೆ ಮಾಡಲು ಸಾಧ್ಯ ಎಂದರು. ವೇದಿಕೆಯಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷ ಭರತ್ ಭೀಮಯ್ಯ, ನಿಯೋಜಿತ ಅಧ್ಯಕ್ಷ ರಾಕೇಶ್ ಪಟೇಲ್ ಹಾಗೂ ಕಾರ್ಯದರ್ಶಿ ವನಮಾಲಿ ಹೆಬ್ಬಾರ್ ಉಪಸ್ಥಿತರಿದ್ದರು.