ಸೋಮವಾರಪೇಟೆ, ಡಿ. 30: ಸೋಮವಾರಪೇಟೆ ತಾಲೂಕು ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಜ. 12 ರಂದು ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ನಾಮಪತ್ರಗಳ ಪರಿಶೀಲನಾ ಕಾರ್ಯ ಶುಕ್ರವಾರ ನಡೆದು ಆರು ಮಂದಿ ಹಾಕಿದ್ದ ಹೆಚ್ಚುವರಿ ನಾಮಪತ್ರಗಳನ್ನು ಕೈಬಿಟ್ಟಿದ್ದನ್ನು ಹೊರತು ಪಡಿಸಿದರೆ 38 ನಾಮಪತ್ರಗಳು ಅಂಗೀಕಾರಗೊಂಡವು.
ಒಂದು ವರ್ತಕರ ಕ್ಷೇತ್ರ ಸೇರಿದಂತೆ ಒಟ್ಟು 12 ಕ್ಷೇತ್ರಗಳಿಗೆ 38 ಮಂದಿಯಿಂದ ಒಟ್ಟು 44 ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಅವುಗಳಲ್ಲಿ ಆರು ಮಂದಿ ತಮ್ಮ ಕ್ಷೇತ್ರಗಳಿಗೆ ಎರಡೆರಡು ನಾಮಪತ್ರಗಳನ್ನು ಸಲ್ಲಿಸಿದ್ದರು. ಶುಕ್ರವಾರ ನಾಮಪತ್ರ ಪರಿಶೀಲನೆ ಸಂದರ್ಭ ಹೆಚ್ಚುವರಿಯಾಗಿ ಸಲ್ಲಿಸಿದ್ದ 6 ನಾಮಪತ್ರಗಳನ್ನು ಕೈಬಿಡಲಾಗಿದ್ದು, ಉಳಿದಂತೆ ಇದ್ದ 38 ನಾಮಪತ್ರಗಳು ಅಂಗೀಕಾರಗೊಂಡಿದೆ ಎಂದು ಚುನಾವಣಾಧಿಕಾರಿ ತಹಶೀಲ್ದಾರ್ ಜಿ.ಎಸ್. ಕೃಷ್ಣ ತಿಳಿಸಿದರು.
ಚುನಾವಣಾ ಕಣದಿಂದ ಹಿಂದಕ್ಕೆ ಸರಿಯಲು ಇಚ್ಚಿಸುವ ಅಭ್ಯರ್ಥಿಗಳು ಜ.2ರ ಸೋಮವಾರ ತಮ್ಮ ನಾಮಪತ್ರಗಳನ್ನು ಹಿಂತೆಗೆದುಕೊಳ್ಳಲು ಅವಕಾಶವಿದೆ ಎಂದು ಅಭ್ಯರ್ಥಿಗಳಿಗೆ ತಹಶೀಲ್ದಾರ್ ತಿಳಿಸಿದರು.
ಒಟ್ಟು 23,771 ಮಂದಿ ಮತದಾರರಿದ್ದು, 19,506 ಪುರುಷರು ಮತ್ತು 4265 ಮಹಿಳಾ ಮತದಾರರಿದ್ದಾರೆ. ಕೊಡ್ಲಿಪೇಟೆಯಲ್ಲಿ 2185, ಶನಿವಾರಸಂತೆಯಲ್ಲಿ 1476, ಗೌಡಳ್ಳಿಯಲ್ಲಿ 3492, ಬೇಳೂರಿನಲ್ಲಿ 1468, ಕಿರಗಂದೂರಿನಲ್ಲಿ 2031, ಹಾನಗಲ್ಲು ಕ್ಷೇತ್ರದಲ್ಲಿ 1393, ಶಾಂತಳ್ಳಿಯಲ್ಲಿ 1494, ಹರದೂರಿನಲ್ಲಿ 1286, ಚೇರಳ ಶ್ರೀಮಂಗಲದಲ್ಲಿ 2242, ಕುಶಾಲನಗರದಲ್ಲಿ 2930, ಹೆಬ್ಬಾಲೆಯಲ್ಲಿ 3680, ವರ್ತಕರ ಕ್ಷೇತ್ರದಿಂದ 94 ಮತದಾರರಿದ್ದಾರೆ.