ಸೋಮವಾರಪೇಟೆ, ಜೂ. 9: ಇಲ್ಲಿನ ಕೃಷಿ ಇಲಾಖೆಯಿಂದ ಮುಂಗಾರು ಹಂಗಾಮಿಗೆ ಮುಸುಕಿನ ಜೋಳದ ಉತ್ತಮ ತಳಿಯ ಬೀಜಗಳನ್ನು ಸಹಾಯಧನದಲ್ಲಿ ವಿತರಿಸಲಾಗುತ್ತಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ.

ತಾಲೂಕಿನ ಗುಡ್ಡೆಹೊಸೂರು, ಕುಶಾಲನಗರ, ಕೂಡಿಗೆ, ತೊರೆನೂರು, ಶನಿವಾರಸಂತೆ, ಸಹಕಾರ ಸಂಘಗಳಲ್ಲಿ ಈಗಾಗಲೇ ದಾಸ್ತಾನು ಇರಿಸಲಾಗಿದೆ. ಮುಸುಕಿನ ಜೋಳ ತಳಿಗಳಾದ ಹೈಷೆಲ್, ಗಂಗಾ ಕಾವೇರಿ. ಜಿ.ಕೆ. 3059, ಸಿ.ಪಿ. 818 ಪೈನಿಯಾರ್. 30 ಬಿ.07, ಕಾವೇರಿ ಸೀಡ್ಸ್. 25 ಕೆ. 55, ಮೆಟಾಹೇಲಿಕ್ಸ್( ಎಂ.ಎಂ. 7705), ಡೆಲ್ಟಾ 1000ಎಂ ತಳಿಗಳು ಲಭ್ಯವಿದೆ.

ಹೈಬ್ರಿಡ್ ಭತ್ತದ ತಳಿಗಳಾದ ಗಂಗಾ ಕಾವೇರಿ ಕೆಆರ್ 4.4, ಪಿಎಸಿ 837, ವಿಎನ್‍ಆರ್ 2233, ತಳಿಗಳು ಹೋಬಳಿ ರೈತ ಸಂಪರ್ಕ ಕೆಂದ್ರಗಳಲ್ಲಿ ಲಭ್ಯವಿದೆ. ಸಾಮಾನ್ಯ, ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸಹಾಯ ಧನದಲ್ಲಿ ಬಿತ್ತನೆ ಬೀಜಗಳನ್ನು ವಿತರಿಸಲಾಗುವದು.

ಮಣ್ಣಿನ ಫಲವತ್ತತೆ ಹೆಚ್ಚಿಸಲು ಹಸಿರೆಲೆ ಗೊಬ್ಬರ, ಸೆಣಬಿನ ಬೀಜಗಳನ್ನು ರೈತರಿಗೆ ಶೇ. 50 ರ ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ. ರೈತರು ತಮ್ಮ ಭತ್ತದ ಜಮೀನನ್ನು ಉಳುಮೆ ಮಾಡಿ ಏಕರೆಗೆ 15 ರಿಂದ 20 ಕೆ.ಜಿ. ಬೀಜವನ್ನು ಎರಚಿ ನಂತರ ಹೂ ಬಿಡುವ ಮುನ್ನ 25 ದಿನಗಳ ಸಸಿಗಳನ್ನು ಉಳುಮೆ ಮಾಡಿ ಭೂಮಿಗೆ ಸೇರಿಸಬೇಕು ಎಂದು ಡಾ. ರಾಜಶೇಖರ್ ಮಾಹಿತಿ ನೀಡಿದ್ದಾರೆ.

ಸೆಣಬಿನ ಸಸಿಯಲ್ಲಿ ಸಾರಜನಕವಿದ್ದು, ಅದನ್ನು ಮಣ್ಣಿಗೆ ಸೇರಿಸುವದರಿಂದ ಮಣ್ಣಿನ ರಚನೆ ಹಾಗೂ ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳುವ ಸಾಮಥ್ರ್ಯ ಹಾಗೂ ಮಣ್ಣಿನ ಜೈವಿಕ ಕ್ರಿಯೆ ಉತ್ತಮಗೊಂಡು ಭತ್ತದಲ್ಲಿ ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ.

ಕೊಡಗು ಜಿಲ್ಲೆಯ ಮಣ್ಣಿನಲ್ಲಿ ಸತು ಮತ್ತು ಬೋರನ್ ಕೊರತೆ ಇರುವದರಿಂದ ಉತ್ತಮ ಇಳುವರಿ ಪಡೆಯಲು ಮುಸುಕಿನ ಜೋಳದ ಎಕರೆ ಒಂದಕ್ಕೆ 5 ಕೆ.ಜಿ. ಜಿಂಕ್ ಸಲ್ಪೇಟ್, 2 ಕೆ.ಜಿ ಬೋರಾಕ್ಸ್, ಆಗೆಯೇ ಭತ್ತ ಗದ್ದೆಗೆ 10 ಕೆ.ಜಿ. ಜಿಂಕ್ ಸಲ್ಪೇಟ್, 2 ಕೆ.ಜಿ. ಬೋರಾಕ್ಸ್ ಅನ್ನು ಮಣ್ಣಿಗೆ ಸೇರಿಸುವದರಿಂದ ಉತ್ತಮ ಇಳುವರಿ ಪಡೆಯಬಹುದೆಂದು ಡಾ. ರಾಜಶೇಖರ್ ಮಾಹಿತಿ ನೀಡಿದ್ದಾರೆ.

ಜಿಂಕ್ ಸಲ್ಪೇಟ್ ಮತ್ತು ಬೋರಾಕ್ಸ್ ಅನ್ನು ಸಹಕಾರ ಸಂಘಗಳಲ್ಲಿ ಸಹಾಯ ಧನದಲ್ಲಿ ವಿತರಿಸಲಾಗುತ್ತಿದೆ. ಹೆಚ್ಚಿನ ಮಾಹಿತಿಯನ್ನು ಸ್ಥಳೀಯ ಕೃಷಿ ಇಲಾಖೆಯಲ್ಲಿ ಪಡೆದುಕೊಳ್ಳಬೇಕೆಂದು ಮನವಿ ಮಾಡಿದ್ದಾರೆ.