ಸುಂಟಿಕೊಪ್ಪ, ಡಿ. 19: ಕೊಡಗಿನಲ್ಲಿ ನೆಲೆಸಿರುವ ಅಸಂಖ್ಯಾತ ಕೂಲಿ ಕಾರ್ಮಿಕರು ‘ಸೂರು’ ಇಲ್ಲದೇ ಪರಿತಪಿಸುತ್ತಿದ್ದಾರೆ. ಅವರಿಗೆ ಸರಕಾರ, ಜಿಲ್ಲಾಡಳಿತ ನಿವೇಶನ ಒದಗಿಸಿ ಮನೆ ನಿರ್ಮಿಸಿ ಕೊಡಬೇಕೆಂದು ಎಐಟಿಯುಸಿ ವತಿಯಿಂದ ಇಲ್ಲಿನ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಮಾದಾಪುರ ರಸ್ತೆಯಿಂದ ಹೊರಟ ಪ್ರತಿಭಟನಾ ಕಾರರು ಕೆಂಪು ಬಾವುಟ ಹಿಡಿದು ‘ಬೇಕೆ ಬೇಕು ನ್ಯಾಯ ಬೇಕು’, ‘ಬಡವರಿಗೆ ನಿವೇಶನ, ಸೂರು ಕೊಡಿಸಿ’ಎಂದು ಘೋಷಣೆ ಕೂಗುತ್ತಾ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಕ್ಕೊತ್ತಾಯವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ರೋಸ್ ಮೇರಿ ರಾಡ್ರಿಗಸ್ ಅವರಿಗೆ ಸಲ್ಲಿಸಿದರು. ನಂತರ ಮಾತನಾಡಿದ ಕೊಡಗು ಜಿಲ್ಲಾ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್‍ನ ಅಧ್ಯಕ್ಷ ಹೆಚ್.ಎಂ. ಸೋಮಪ್ಪ, ತೋಟ ಕಾರ್ಮಿಕರ ನಿವೇಶನಕ್ಕಾಗಿ ಕೊಡಗು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ಅಧೀನದಲ್ಲಿ ಕಾರ್ಮಿಕರನ್ನು ಸಂಘಟಿಸಿ ನಿವೇಶನ ಮತ್ತು ಸೂರಿಗಾಗಿ ಅರ್ಜಿ ಸಲ್ಲಿಸುತ್ತಾ ಬಂದಿದ್ದೇವೆ. ಸುಂಟಿಕೊಪ್ಪದಲ್ಲಿರುವ ತೋಟದ ಕಾರ್ಮಿಕರನ್ನು ಒಟ್ಟುಗೂಡಿಸಿ ನಿವೇಶನಕ್ಕಾಗಿ ಅರ್ಜಿಯನ್ನು ನೀಡಿದ್ದು, ಕೂಡಲೇ ಸರ್ಕಾರ ಮತ್ತು ಜಿಲ್ಲಾಡಳಿತ ತೋಟಗಳಲ್ಲಿರುವ ಜಾಗವನ್ನು ಸರ್ವೇ ಮಾಡಿಸಿ ಸರ್ಕಾರದ ಜಾಗವನ್ನು ಆದಷ್ಟು ಬೇಗನೇ ತೆರವುಗೊಳಿಸಿ ಆ ಜಾಗವನ್ನು ಕಾರ್ಮಿಕರಿಗೆ ಮನೆ ಕಟ್ಟಲು ನಿವೇಶನ ಕೊಡಬೇಕು. ತಪ್ಪಿದ್ದಲ್ಲಿ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದರು. ಈ ಸಂದರ್ಭ ಯುನೈಟೆಡ್ ಪ್ಲಾಂಟೇಷನ್ ವರ್ಕರ್ಸ್ ಯೂನಿಯನ್‍ನ ಉಪಾಧ್ಯಕ್ಷ ಎನ್. ಮಣಿ, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಪಿ.ಟಿ. ಸುಂದರ, ಕಾರ್ಯದರ್ಶಿ ಕೆ.ಎಸ್. ಮಹೇಶ್, ಸಂಚಾಲಕ ಶೇಷಪ್ಪ, ವೀರಾಜಪೇಟೆ ತಾಲೂಕು ಅಧ್ಯಕ್ಷ ಆನಂದ, ಮಾದಾಪುರ ಹೋಬಳಿ ಅಧ್ಯಕ್ಷ ಸುರೇಶ್, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಹೆಚ್.ಎ. ನಾರಾಯಣ ಮತ್ತಿತರರು ಇದ್ದರು.