ಗೋಣಿಕೊಪ್ಪಲು, ಅ. 24: ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ಹಾಕಿ ಕೂರ್ಗ್ ವತಿಯಿಂದ ನಡೆದ ಹಾಕಿ ಕಪ್ನ್ನು ಹಾತೂರು ತಂಡ ಗೆದ್ದುಕೊಂಡಿದೆ. ಸೋಲನುಭವಿಸಿದ ಬೇರಳಿನಾಡ್ ರೆಡ್ ತಂಡ ಎರಡನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ. ಅಂತಿಮ ಹಣಾಹಣಿಯಲ್ಲಿ ಶೂಟೌಟ್ ಮೂಲಕ ಹಾತೂರು ಗೆಲುವು ದಾಖಲಿಸಿತು. ಉಭಯ ತಂಡಗಳು ಸಮನಾಂತರ ಹೋರಾಟ ನಡೆಸಿದರಾದರೂ ಶೂಟೌಟ್ನಲ್ಲಿ ಬೇರಳಿನಾಡ್ ನೀರಸ ಪ್ರದರ್ಶನ ನೀಡಿತು. ಪರಿಣಾಮ 2-4 ಗೋಲುಗಳ ಸೋಲನುಭವಿಸಿತು. ಶೂಟೌಟ್ನಲ್ಲಿ ಹಾತೂರು ಪರ ಅಪ್ಪಯ್ಯ ಹಾಗೂ ಶಾನ್ ಗೋಲು ಹೊಡೆದು ಗೆಲುವಿನ ದಡ ಸೇರಿಸಿದರು. ರೆಡ್ ಪರ ಶೂಟೌಟ್ನಲ್ಲಿ ಯಾವದೇ ಗೋಲು ದಾಖಲಾಗಲಿಲ್ಲ.
ಪಂದ್ಯದ ಅವಧಿಯಲ್ಲಿ ಹಾತೂರು ಪರ 11 ಹಾಗೂ 30 ನೇ (ಪೆನಾಲ್ಟಿ ಕಾರ್ನರ್ನ್ನು) ನಿಮಿಷಗಳಲ್ಲಿ ಗಣಪತಿ ಎರಡು ಗೋಲು ಹೊಡೆದರು. ರೆಡ್ ಪರ 33 ನೇ ನಿಮಿಷದಲ್ಲಿ ವರುಣ್ ಆಕರ್ಷಕ ಗೋಲು ಹೊಡೆದು ಮೈದಾನದಲ್ಲಿ ಸಂಚಲನ ಮೂಡಿಸಿದರು. ನಂತರ 59 ನೇ ನಿಮಿಷದಲ್ಲಿ ದೊರೆತ ಪೆನಾಲ್ಟಿ ಕಾರ್ನರ್ನ್ನು ನಾಚಪ್ಪ ಗೋಲಾಗಿ ಪರಿವರ್ತಿಸಿ ಸಮಬಲಗೊಳಿಸಿದರು. ಹಾತೂರು ತಂಡಕ್ಕೆ ದೊರೆತ 5, ರೆಡ್ಗೆ 4 ಪೆನಾಲ್ಟಿ ಕಾರ್ನರ್ ದೊರೆಯಿತು.
ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಹಾತೂರು ತಂಡ ಫುಲ್ ಬ್ಯಾಕ್ ಸಣ್ಣುವಂಡ ಲೋಕೇಶ್ ನಂಜಪ್ಪ ಪಡೆದುಕೊಂಡರು. ಉತ್ತಮ ಆಟಗಾರ ಪ್ರಶಸ್ತಿಗಳನ್ನು ಬಿಬಿಸಿ ತಂಡದ ಅವಿನಾಶ್, ಡಾಲ್ಫಿನ್ಸ್ ತಂಡದ ದಯಾನಂದ್, ಕೋಣನಕಟ್ಟೆ ತಂಡದ ಯಶ್ವಿನ್, ಅಮ್ಮತ್ತಿ ಈಗಲ್ಸ್ ತಂಡದ ದೀಪಕ್, ಎಸ್ಆರ್ಸಿ ತಂಡದ ಅಪ್ಪಯ್ಯ ಪಡೆದುಕೊಂಡರು.
ಪಂದ್ಯಾವಳಿ ನಿರ್ದೇಶಕರಾಗಿ ತೀಸಾ ಬೋಪಯ್ಯ, ತೀರ್ಪುಗಾರರಾಗಿ ಚೋಯಮಾಡಂಡ ಚೆಂಗಪ್ಪ, ಕೊಂಡೀರ ಕೀರ್ತಿ, ಮೂರನೇ ಅಂಪೈರ್ ಆಗಿ ಬೊಳ್ಳಚಂಡ ನಾಣಯ್ಯ, ತಾಂತ್ರಿಕ ವರ್ಗದಲ್ಲಿ ಹಿರಿಣಾಕ್ಷಿ, ಅನ್ನಾಡಿಯಂಡ ನಾಣಯ್ಯ ಕಾರ್ಯನಿರ್ವಹಿಸಿದರು. ಸುಳ್ಳಿಮಾಡ ಸುಬ್ಬಯ್ಯ, ಅಜ್ಜಮಾಡ ಪೊನ್ನಪ್ಪ ವೀಕ್ಷಕ ವಿವರಣೆ ನೀಡಿದರು.
ಪಂದ್ಯಾವಳಿಯಲ್ಲಿ ಅಂತ ರ್ರಾಷ್ಟ್ರೀಯ ಹಾಕಿ ಆಟಗಾರ ವಿ ಆರ್ ರಘುನಾಥ್ ಪಾಲ್ಗೊಂಡರು. ಇವರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.
ಉದ್ಘಾಟನೆ : ಫೈನಲ್ ಪಂದ್ಯವನ್ನು ಶಾಸಕ ಕೆ ಜಿ ಬೋಪಯ್ಯ ಉದ್ಘಾಟಿಸಿದರು. ನಂತರ ಮಾತನಾಡಿ, ಪೊನ್ನಂಪೇಟೆ ಟರ್ಫ್ ಮೈದಾನದಲ್ಲಿ ನೀರಿನ ಸಮಸ್ಯೆ ಅರಿವಾಗಿದೆ. ಸಮಸ್ಯೆ ಪರಿಹಾರಕ್ಕೆ ಶಾಸಕರ ನಿಧಿಯಿಂದ ರೂ. 10 ಲಕ್ಷ ಅನುದಾನ ನೀಡುವ ಮೂಲಕ ಕೊಳವೆ ಬಾವಿಯಿಂದ ನೀರಿನ ಸೌಕರ್ಯಕ್ಕೆ ಅವಕಾಶ ಕಲ್ಪಿಸಲಾಗುವದು ಎಂದರು.
ಈ ಸಂದರ್ಭ ಹಾಕಿ ಕೂರ್ಗ್ ಉಪಾಧ್ಯಕ್ಷ ಎಂ.ಪಿ. ಸುಬ್ಬಯ್ಯ, ಜಿ.ಪಂ. ಸದಸ್ಯರುಗಳಾದ ಮುಕ್ಕಾಟೀರ ಶಿವು ಮಾದಪ್ಪ, ಶ್ರೀಜಾ ಅಚ್ಚುತ್ತನ್, ಪೊನ್ನಂಪೇಟೆ ಗ್ರಾ.ಪಂ. ಅಧ್ಯಕ್ಷೆ ಮೂಕಳೇರ ಸುಮಿತಾ ಗಣೇಶ್, ಯುವ ಪ್ರಶಸ್ತಿ ವಿಜೇತ ಟಾಟು ಮೊಣ್ಣಪ್ಪ, ದಾನಿ ಮಂದೇಯಂಡ ಕೆ. ಅಪ್ಪಚ್ಚು, ಉದ್ಯಮಿ ನೆಲ್ಲಮಕ್ಕಡ ತಿಮ್ಮಯ್ಯ, ಕುಟ್ಟಂಡ ತಂಗಿ, ರಾಜಾ ಗಣಪತಿ ಉಪಸ್ಥಿತರಿದ್ದರು.