ಕೂಡಿಗೆ, ಸೆ. 7: ಕೂಡಿಗೆ ಡಯಟ್‍ನ ಸಭಾಂಗಣದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ “ವಿಜ್ಞಾನ ಮತ್ತು ಸಮಾಜ” ಎಂಬ ಮುಖ್ಯ ವಿಷಯದಡಿಯಲ್ಲಿ ವಿವಿಧ ಉಪವಿಷಯಗಳನ್ನಾಧರಿಸಿ ನಾಟಕ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಡಯಟ್ ಪ್ರಾಂಶುಪಾಲ ಎಸ್. ದೊಡ್ಡಮಲ್ಲಪ್ಪ ಮಾತನಾಡಿ, ನಾಟಕ ಮತ್ತು ಸಮಾಜ ವಿಜ್ಞಾನದ ಸೂಕ್ತ ಸಂಯೋಜನೆಯ ವಿಷಯಗಳನ್ನು ಪ್ರಚಾರಗೊಳಿಸಲು ಇಂತಹ ಸ್ಪರ್ಧೆಗಳು ಸಹಾಯಕವಾಗುತ್ತದೆ. ಇಂದಿನ ವೈಚಾರಿಕತೆಯು ವಿಜ್ಞಾನದ ಆಶಯಗಳನ್ನು ಅಳವಡಿಸಿಕೊಳ್ಳಬೇಕು. ಇಂದಿನ ಸನ್ನಿವೇಶದಲ್ಲಿ ನಾಟಕ ಮುಂತಾದ ಸಾಂಪ್ರದಾಯಕ ಕಲೆಗಳಿಗೆ ಹೆಚ್ಚಿನ ಒತ್ತಾಸೆ ಸಿಗದೆ ನಶಿಸಿ ಹೋಗುವಂತಹ ಸಂದರ್ಭ ಎದುರಾಗಿದ್ದು, ನಾಟಕದ ಮೂಲಕ ವಿಜ್ಞಾನವನ್ನು ಹೆಚ್ಚು ಜನಪ್ರಿಯಗೊಳಿ ಸಲು ಶಿಕ್ಷಕರು ಪ್ರಯತ್ನಿಸುವಂತೆ ಕರೆ ನೀಡಿದರು.

ಕಾರ್ಯಕ್ರಮದ ಸಂಯೋಜಕ ರಾದ ಉಪನ್ಯಾಸಕ ವಿ. ವಿಜಯ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿಜ್ಞಾನ ಮತ್ತು ಸಮಾಜ ವಿಷಯದ ಮಹತ್ವವು ಜೀವನದಲ್ಲಿ ಹಾಸುಹೊಕ್ಕಾಗಿದೆ. ಜನಸಾಮಾನ್ಯರಿಗೆ ವೈಜ್ಞಾನಿಕ ಚಿಂತನೆ ಹಾಗೂ ಅರಿವು ಮೂಡಿಸುವ ನಿಟ್ಟಿನಲ್ಲಿ ನಾಟಕ ಮಾಧ್ಯಮ ಪ್ರಬಲವಾದ ಸಂವಹನ ಮಾಧ್ಯಮವಾಗಿ ಕೆಲಸ ಮಾಡಬಹುದು ಎಂದು ತಿಳಿಸಿದರು.

ಜಿಲ್ಲೆಯ ಮೂರು ತಾಲೂಕು ಗಳಿಂದ ಒಟ್ಟು 6 ತಂಡಗಳಿಂದ 47 ಸ್ಪರ್ಧಿಗಳು ಭಾಗವಹಿಸಿದ್ದರು. ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ಪ್ರಥಮ ಸ್ಥಾನವನ್ನು ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆಯ ನೇಹಾ ಮತ್ತು ತಂಡ, ದ್ವಿತೀಯ ಸ್ಥಾನವನ್ನು ಕೊಂಡಂಗೇರಿ ಸ.ಪ್ರೌ.ಶಾಲೆಯ ಜಾಸ್ಮಿನ್ ಮತ್ತು ತಂಡ, ತೃತೀಯ ಸ್ಥಾನವನ್ನು ಮಡಿಕೇರಿ ಸಂತ ಜೋಸೆಫರ ಪ್ರೌಢಶಾಲೆಯ ನಿರೀಕ್ಷ ಮತ್ತು ತಂಡ ಹಾಗೂ ಸೋಮವಾರಪೇಟೆ ತಾಲೂಕಿನ ಚೆನ್ನಮ್ಮ ಪ.ಪೂ. ಕಾಲೇಜಿನ ಧನುಷ್ “ಉತ್ತಮ ನಟ”, ಮಡಿಕೇರಿಯ ಸಂತ ಜೋಸೆಫರ ಪ್ರೌಢಶಾಲೆಯ ಪ್ರತೀಕ್ಷ “ಉತ್ತಮ ನಟಿ” ಹಾಗೂ ವೀರಾಜಪೇಟೆಯ ಸಂತ ಅನ್ನಮ್ಮ ಪ್ರೌಢಶಾಲೆ ಸಹ ಶಿಕ್ಷಕ ಜೆಫ್ರಿ ಡಿಸಿಲ್ವ “ಉತ್ತಮ ನಿರ್ದೇಶಕ” ಉತ್ತಮ ನಾಟಕ ರಚನಾಕಾರ ಪ್ರಶಸ್ತಿಗಳನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ತೀರ್ಪುಗಾರರಾಗಿ ಶ್ರೀನಿವಾಸ್, ಪ್ರವೀಣ್ ಕಾಮತ್, ಶಂಕರಯ್ಯ ನಿವೃತ್ತ ಕಲಾವಿದರು, ಡಯಟ್ ಉಪನ್ಯಾಸಕರಾದ ಸಿದ್ಧರಾಜು, ಪಿ.ಪಿ. ಗಾಯತ್ರಿ, ಕೆ.ಎಸ್. ಮೀನಾಕ್ಷಿ ಇದ್ದರು.