ಕೂಡಿಗೆ, ಜೂ. 30: ಕುಶಾಲನಗರ ಹೋಬಳಿ ವ್ಯಾಪ್ತಿಯ ಹಾರಂಗಿ, ಕೂಡಿಗೆ, ಹೆಬ್ಬಾಲೆ, ತೊರೆನೂರು ವ್ಯಾಪ್ತಿಗಳಲ್ಲಿ ಕಳೆದ ಎರಡು ದಿನಗಳಿಂದ ಮಳೆ ಬೀಳುತ್ತಿದ್ದು, ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರು ತಮ್ಮ ಜಮೀನಿನ ಉಳುಮೆ ಮಾಡುವದರ ಮೂಲಕ ಸಿದ್ಧತೆ ಮಾಡುವದರಲ್ಲಿ ತೊಡಗಿದ್ದಾರೆ.

ಅಲ್ಲದೆ, ಈಗಾಗಲೇ ಹಾರಂಗಿ ಜಲಾಶಯದ ಮೇಲ್ಭಾಗದ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವದರಿಂದ ಹಾರಂಗಿ ಜಲಾಶಯಕ್ಕೆ ಹೆಚ್ಚು ನೀರು ತುಂಬಿರುವ ಹಿನ್ನೆಲೆಯಲ್ಲಿ ಈ ಅಚ್ಚುಕಟ್ಟು ಪ್ರದೇಶದ ರೈತರುಗಳು ತಮ್ಮ ಜಮೀನುಗಳಿಗೆ ವಿವಿಧ ಹೈಬ್ರೀಡ್ ತಳಿಯ ಭತ್ತ ಬಿತ್ತನೆಗೆ ಸಹಕಾರ ಸಂಘಗಳಿಂದ ಬಿತ್ತನೆ ಬೀಜಗಳನ್ನು ಖರೀದಿಸಿ ಕೊಂಡೊಯ್ಯುತ್ತಿರುವದು ಕಂಡುಬರುತ್ತಿದೆ. ಹಾಗೂ ಭತ್ತದ ಸಸಿ ಮಡಿಗಳು ಬಂದ ನಂತರ ನಾಟಿ ಕಾರ್ಯಕ್ಕೆ ಸಿದ್ಧ ಮಾಡಲು ಉಳುಮೆಯಲ್ಲಿ ತೊಡಗಿದ್ದಾರೆ.

ಅಲ್ಲದೆ, ಕಾವೇರಿ ಒಡಲಿನಲ್ಲಿ ಅಧಿಕವಾದ ಮಳೆ ಬೀಳುತ್ತಿರುವದರಿಂದ ಕಾವೇರಿ ನದಿಯು ಅಧಿಕವಾಗಿ ತುಂಬಿ ಕೂಡಿಗೆಯಲ್ಲಿ ಹಾರಂಗಿ ಕಾವೇರಿ ನದಿ ನೀರು ಸಂಗಮದ ಸ್ಥಳದಿಂದ ಹಾರಂಗಿ ನದಿಯ ಮೇಲ್ಭಾಗ ಕೂಡಿಗೆ ಸೇತುವೆಯ ಸಮೀಪದಿಂದ 3 ಕಿ.ಮೀ.ವರೆಗೂ ಕಾವೇರಿ ನೀರು ತಳ್ಳಲ್ಪಟ್ಟಿದೆ.

ಈ ವ್ಯಾಪ್ತಿಯಲ್ಲಿ ಮಳೆ ಅಧಿಕವಾಗಿರುವದರಿಂದ ಹಾರಂಗಿ ಅಣೆಕಟ್ಟಿಯ ನೀರಿನ ಒಳ ಹರಿವು 3900 ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಈಗಾಗಲೇ ಅಣೆಕಟ್ಟಯ ಅರ್ಧ ಭಾಗ ತುಂಬಿದಂತ್ತಾಗಿದ್ದು, ರೈತರಲ್ಲಿ ಸಂತಸ ಮೂಡಿ, ಮುಂದಿನ ದಿನಗಳಲ್ಲಿ ನಾಲೆಗಳ ಮೂಲಕ ನೀರು ಹರಿಬಿಡುವದರಿಂದ ತಮ್ಮ ಗದ್ದೆ ನಾಟಿ ಕಾರ್ಯದಲ್ಲಿ ತೊಡಗಲು ಸಿದ್ಧರಾಗಿದ್ದಾರೆ.