ಕೂಡಿಗೆ, ಅ. 26: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸರಕಾರದಿಂದ ಮಂಜೂರಾಗಿ ಗ್ರಾಮ ಪಂಚಾಯಿತಿಗೆ ಬಂದಿರುವ ಸಾಮಾನ್ಯ ವರ್ಗದಲ್ಲಿ ಮಂಜೂರಾಗಿರುವ 12 ಮನೆಗಳನ್ನು ಫಲಾನುಭವಿಗಳಿಗೆ ನೀಡುವ ವಿಚಾರವಾಗಿ ಚರ್ಚೆ ನಡೆದು ಕಳೆದ ಸಾಲಿನಲ್ಲಿ ಮಂಜೂರಾದ ಮನೆಗಳನ್ನು ಸೀಗೆಹೊಸೂರು, ಬ್ಯಾಡಗೊಟ್ಟ, ಭುವನಗಿರಿ ವ್ಯಾಪ್ತಿಗೆ ನೀಡದೆ, ಇತರ ಸದಸ್ಯರುಗಳು ಅವರವರ ವಾರ್ಡಿಗೆ ಪಡೆದುಕೊಂಡಿದ್ದರೂ ಇದೀಗ ಮಂಜೂರಾಗಿರುವ ಮನೆಗಳನ್ನು ಈ ವ್ಯಾಪ್ತಿಗೆ ನೀಡಬೇಕೆಂದು ಸದಸ್ಯರುಗಳಾದ ಟಿ.ಕೆ. ವಿಶ್ವನಾಥ್, ಕೆ.ಜೆ. ಮಂಜಯ್ಯ, ಪುಷ್ಪ, ದಸ್ವಿ ಸಭೆಯಲ್ಲಿ ಆಗ್ರಹಿಸಿದರು.
9/11 ಅರ್ಜಿಗಳ ವಿಚಾರಣೆಯ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಸ್ಥಳ ಪರಿಶೀಲಿಸಿ, ನಂತರ ಅರ್ಜಿಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ತೀರ್ಮಾನಿಸಲಾಯಿತು. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕೆಂದು ಸದಸ್ಯರಾದ ರಾಮಚಂದ್ರ, ಕೆ.ವೈ. ರವಿ. ಕೆ.ಜಿ. ಮೋಹಿನಿ ಸೇರಿದಂತೆ ಎಲ್ಲಾ ಸದಸ್ಯರುಗಳು ಸಲಹೆ ನೀಡಿದರು.
ಈ ಸಂದರ್ಭ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಈ ಸಾಲಿನಲ್ಲಿ ಸದಸ್ಯರ ಸಹಕಾರದಲ್ಲಿ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಲು ಪ್ರಯತ್ನಿಸಲಾಗುವದು. ಅಲ್ಲದೆ, ಕುಡಿಯುವ ನೀರು ಯೋಜನೆಗೆ ಸಂಬಂಧಿಸಿದಂತೆ ಮೇಲ್ಪಟ್ಟ ಅಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿ ನಡೆದಿರುವ ಟ್ಯಾಂಕ್‍ಗಳನ್ನು ಪರಿಶೀಲಿಸಿ, ನಂತರ ನೀರು ಹರಿಸಿ ಗ್ರಾಮ ವ್ಯಾಪ್ತಿಯ ಗ್ರಾಮಸ್ಥರಿಗೆ ನೀರು ಒದಗಿಸಲಾಗುವದು. ಶುಚಿತ್ವ ಮತ್ತು ಬೀದಿ ದೀಪ ಅಳವಡಿಕೆಗೆ ಗ್ರಾಮಸ್ಥರುಗಳ ಅಹವಾಲುಗಳ ಅನುಗುಣವಾಗಿ ಒದಗಿಸಲಾಗುವದು ಎಂದರು. ಅಭಿವೃದ್ಧಿ ಅಧಿಕಾರಿ ರವೀಶ್ ಸರ್ಕಾರದ ಯೋಜನೆಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಎಲ್ಲಾ ಸದಸ್ಯರುಗಳ ಸಹಕಾರದೊಂದಿಗೆ ಎಲ್ಲಾ ವಾರ್ಡುಗಳ ಅಭಿವೃದ್ಧಿಗೆ ಹಾಗೂ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವದು. ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಕೈಗೊಳ್ಳುವ ಕಾಮಗಾರಿಗಳಿಗೆ ಸದಸ್ಯರ ಹಾಗೂ ಗ್ರಾಮಸ್ಥರ ಸಹಕಾರ ಮುಖ್ಯ. ಗ್ರಾಮಸ್ಥರುಗಳು ಕಂದಾಯವನ್ನು ಪಾವತಿಸುವದರ ಮೂಲಕ ಗ್ರಾಮದ ಪ್ರಗತಿಗೆ ಕೈಜೋಡಿಸಬೇಕೆಂದು ಹೇಳಿದರು. ಸಭೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗಿರೀಶ್ ಕುಮಾರ್, ಕಾರ್ಯದರ್ಶಿ ಸ್ವಾಮಿ ನಾಯಕ್, ಸದಸ್ಯರುಗಳಾದ ಕೆ.ಟಿ. ಈರಯ್ಯ, ಕೆ.ಜಿ. ಮೋಹಿನಿ, ಕೆ.ವೈ. ರವಿ, ಹೆಚ್.ಎಸ್. ರವಿ, ರತ್ನಮ್ಮ, ಕೆ.ಬಿ. ರಾಮಚಂದ್ರ, ಪುಷ್ಪ, ದಸ್ವಿ, ಕೆ.ಜೆ. ಮಂಜಯ್ಯ, ಟಿ.ಕೆ. ವಿಶ್ವನಾಥ್ ಸೇರಿದಂತೆ ಸಿಬ್ಬಂದಿ ವರ್ಗ ಹಾಜರಿದ್ದರು. ಕೆ.ಸಿ. ರವಿ ಸ್ವಾಗತಿಸಿ, ವಂದಿಸಿದರು.