ಕೂಡಿಗೆ, ಡಿ. 4: ಕೂಡಿಗೆ ಗ್ರಾಮ ಪಂಚಾಯಿತಿಯ ಮಾಸಿಕ ಸಭೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಇನ್ನು ಹೆಚ್ಚಿನ ಅನುದಾನವನ್ನು ಆಯಾ ವಾರ್ಡುಗಳಿಗೆ ಕ್ರಿಯಾ ಯೋಜನೆಯಲ್ಲಿ ಸೇರಿಸಿ, ಕಸ ವಿಲೇವಾರಿಗೆ ಹಾಗೂ ಕೂಡಿಗೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಹಾರಂಗಿ ಅಚ್ಚುಕಟ್ಟು ಪ್ರದೇಶವಿದ್ದರೂ ಅಣೆಕಟ್ಟೆಯಿಂದ ನೀರು ಹರಿಸುತ್ತಿಲ್ಲದ ಕಾರಣ ರೈತರು ತಮ್ಮ ಜಮೀನುಗಳಲ್ಲಿ ಬೋರ್ವೆಲ್ ಕೊರೆಸಲು ಅನುಮತಿ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ರೈತರ ಪರವಾಗಿ ಮನವಿ ಸಲ್ಲಿಸಲು ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಯಿತು.
ಕಾರ್ಯಕ್ರಮದ ಅಧ್ಯಕ್ಷೆ ವಹಿಸಿದ್ದ ಅಧ್ಯಕ್ಷೆ ಪ್ರೇಮಲೀಲಾ ಮಾತನಾಡಿ, ಎಲ್ಲಾ ಗ್ರಾ.ಪಂ. ಸದಸ್ಯರುಗಳ ಸಲಹೆ-ಸೂಚನೆ ಪಡೆದು ಅದರನ್ವಯ ಪ್ರಮುಖವಾದ ಕುಡಿಯುವ ನೀರು, ಬೀದಿ ದೀಪ ಹಾಗೂ ಚರಂಡಿ ವ್ಯವಸ್ಥೆಯನ್ನು ಸರಿಪಡಿಸಿ, ರೋಗ ರುಜಿನಗಳು ಹರಡದಂತೆ ಕ್ರಮ ಕೈಗೊಳ್ಳುವಂತೆ ಹೇಳಿದರು.
ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜೀವ್ ಬಂದ ಅರ್ಜಿಗಳನ್ನು ವಿಲೇವಾರಿ ಮಾಡುವದರ ಮುಖಾಂತರ ಸಭೆಗೆ ತಿಳಿಸಿ, ನಂತರ ಸಂಬಂಧಪಟ್ಟ ಅರ್ಜಿದಾರರಿಗೆ ಮಾಹಿತಿ ನೀಡಲಾಗುವದು. ಅಲ್ಲದೆ, ಕಾರ್ಮಿಕರ ನೇಮಕಾತಿಯ ಬಗ್ಗೆ ಮೇಲ್ಮಟ್ಟದ ಅಧಿಕಾರಿಗಳಿಂದ ಅನುಮತಿ ಪಡೆದು ನೇಮಿಸಿಕೊಳ್ಳಲಾಗುವದು. ಅಲ್ಲದೆ, ಶುಚಿತ್ವ ಹಾಗೂ ಸಾರ್ವಜನಿಕರ ಶೌಚಾಲಯದ ವ್ಯವಸ್ಥೆಗೆ ಇನ್ನೂ ಹೆಚ್ಚಿನ ಆದ್ಯತೆ ನೀಡಲಾಗುವದು. ಎಲ್ಲಾ ವಾರ್ಡಿನ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕಾಮಗಾರಿಗಳನ್ನು ನಿರ್ವಹಿಸಲು ಸಾರ್ವಜನಿಕರು ಹಾಗು ಸದಸ್ಯರ ಸಹಕಾರ ಮುಖ್ಯ ಎಂದರು. ಸಭೆಯಲ್ಲಿ ಉಪಾಧ್ಯಕ್ಷ ಗಿರೀಶ್ ಸೇರಿದಂತೆ ಸದಸ್ಯರುಗಳಾದ ಕೆ.ಟಿ. ಈರಯ್ಯ, ಟಿ.ಕೆ. ವಿಶ್ವನಾಥ್, ಕೆ.ವೈ. ರವಿ, ಹೆಚ್.ಎಸ್. ರವಿ, ರಾಮಚಂದ್ರ, ಮಂಜಯ್ಯ, ಮೋಹಿನಿ ಸೇರಿದಂತೆ ಎಲ್ಲಾ ಸದಸ್ಯರು, ಕಾರ್ಯದರ್ಶಿ ಸ್ವಾಮಿನಾಯಕ್ ಹಾಜರಿದ್ದರು. ಕೆ.ಸಿ. ರವಿ ಸ್ವಾಗತಿಸಿ, ವಂದಿಸಿದರು.