ಮಡಿಕೇರಿ, ಡಿ. 2: ವೀರಾಜಪೇಟೆ ತಾಲೂಕು ಕೇಂದ್ರದಿಂದ ಬಿ. ಶೆಟ್ಟಿಗೇರಿ ಮೂಲಕ ಕೂಟಿಯಾಲ - ಬಿರುನಾಣಿ ಸಂಪರ್ಕ ರಸ್ತೆ ನಿರ್ಮಾಣ ಯೋಜನೆ ನೆನೆಗುದಿಗೆ ಬಿದ್ದಿರುವ ಕುರಿತು ಇಂದು ವಿಧಾನ ಪರಿಷತ್‍ನಲ್ಲಿ ಚರ್ಚೆ ನಡೆಯಿತು.ವಿಷಯ ಪ್ರಸ್ತಾಪಿಸಿದ ಸದಸ್ಯೆ ವೀಣಾ ಅಚ್ಚಯ್ಯ ಅವರು ಈ ರಸ್ತೆಯಿಂದ ಗ್ರಾಮೀಣ ಭಾಗದ ಜನರಿಗೆ ಸಾಕಷ್ಟು ಪ್ರಯೋಜನ ವಾಗಲಿದೆ. 1998ರಲ್ಲೇ ರೂ.80ಲಕ್ಷ ವೆಚ್ಚದಲ್ಲಿ ಸೇತುವೆ ನಿರ್ಮಾಣ ವಾಗಿದ್ದು, ರಸ್ತೆಗೆಂದು ರೂ.1 ಕೋಟಿ ವಿನಿಯೋಗಿಸಲಾಗಿದೆ. ಆದರೆ ಕೇವಲ 400 ಮೀಟರ್ ಪ್ರದೇಶ ವನ್ಯಜೀವಿ ವಿಭಾಗದಲ್ಲಿ ಬರಲಿದೆ ಎಂಬ ಕಾರಣಕ್ಕೆ ಅರಣ್ಯ ಇಲಾಖೆ ಇದಕ್ಕೆ ತಡೆಯೊಡ್ಡಿದ್ದು, ವರ್ಷಗಳೇ ಉರುಳಿದರೂ ಇದು ಕಾರ್ಯ ಗತವಾಗಿಲ್ಲ. ಇದರಿಂದಾಗಿ ಸುಮಾರು ರೂ. 1.80 ಕೋಟಿ ಹಣ ನಷ್ಟವಾದಂತಾಗಿದೆ. ಈ ರಸ್ತೆ ನಿರ್ಮಿಸಿ ಸಂಪರ್ಕ ಕಲ್ಪಿಸಿದರೆ ಬಿರುನಾಣಿ ವಿಭಾಗದ ಜನರಿಗೆ ತಾಲೂಕು ಕೇಂದ್ರ ತಲುಪಲು 22 ಕಿ.ಮೀ. ಅಂತರ ಕಡಿಮೆಯಾಗಲಿದೆ ಎಂದು ಗಮನ ಸೆಳೆದು ಸ್ಪಂದಿಸುವಂತೆ ಅರಣ್ಯ ಸಚಿವ ರಮಾನಾಥ ರೈ ಅವರನ್ನು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ರಮಾನಾಥ ರೈ ಅವರು ಕಾನೂನಿನ ಚೌಕಟ್ಟಿನಂತೆ ವನ್ಯಜೀವಿ ಪ್ರದೇಶದಲ್ಲಿ ಏನೂ ಮಾಡಲಾಗದು. ಕಾನೂನಿನ ಚೌಕಟ್ಟಿನಲ್ಲಿ ಅವಕಾಶವಿದ್ದರೆ ಪ್ರಯತ್ನ ಮಾಡುವದಾಗಿ ತಿಳಿಸಿದರು.

ಕೊಡಗಿನ ಜನರು ವನ್ಯಜೀವಿಗಳ ನಡುವೆಯ ಬದುಕು ಸಾಗಿಸುತ್ತಿದ್ದಾರೆ. ರೂ. 80 ಲಕ್ಷದ ಸೇತುವೆ ಹಾಗೂ ರಸ್ತೆಗೆ ವಿನಿಯೋಗಿಸಿದ ರೂ. 1ಕೋಟಿ ನೀರು ಪಾಲಾಗಲಿರುವದರಿಂದ ಬದಲಿ ವ್ಯವಸ್ಥೆಯನ್ನಾದರೂ ಮಾಡಬೇಕು ಎಂದು ವೀಣಾ ಅಚ್ಚಯ್ಯ ಈ ಸಂದರ್ಭ ಮರು ಆಗ್ರಹಿಸಿದರು. ಇದಕ್ಕೆ ಸ್ಪಂದಿಸಿದ ಸಚಿವ ರಮಾನಾಥ್ ರೈ ಇದೇ ವ್ಯಾಪ್ತಿಯಲ್ಲಿ ಪರ್ಯಾಯ ಮಾರ್ಗವೊಂದಿದೆ. ಆದರೆ ಇಲ್ಲಿ ಎರಡರಿಂದ ಮೂರು ಸೇತುವೆ ನಿರ್ಮಿಸಬೇಕಾಗಿದೆ. ಈ ಪ್ರಸ್ತಾವನೆಯನ್ನು ಸರಕಾರದ ಮುಂದೆ ಇಟ್ಟಲ್ಲಿ ಕ್ರಮಕೈಗೊಳ್ಳುವ ಭರವಸೆ ವ್ಯಕ್ತಪಡಿಸಿದರು.