ಮಡಿಕೇರಿ, ಜ. 17: ಅಭಿವೃದ್ಧಿಯ ದೃಷ್ಟಿಕೋನದಿಂದ ಮೈಸೂರಿನಿಂದ ಕುಶಾಲನಗರದ ತನಕದ ಉದ್ದೇಶಿತ ರೈಲು ಮಾರ್ಗದ ಯೋಜನೆಯನ್ನು ಕಾರ್ಯಗತಗೊಳಿಸುವದು, ಪ್ರವಾಸಿ ಜಿಲ್ಲೆಯಾಗಿ ಬೆಳೆಯುತ್ತಿರುವ ಕೊಡಗಿನಲ್ಲಿ ಪ್ರವಾಸೋದ್ಯಮದ ಅಭಿವೃದ್ಧಿಗೆ ಅಗತ್ಯವಾದ ವ್ಯವಸ್ಥೆಗಳನ್ನು ಕಲ್ಪಿಸುವದು, ಸಂಬಾರ ಪದಾರ್ಥಗಳು, ಕಾಫಿ, ಜೇನು, ಪುಷ್ಪೋದ್ಯಮದ ಉತ್ತೇಜನಕ್ಕೆ ‘ಫುಡ್ ಪ್ರೊಸೆಸ್ ಪಾರ್ಕ್’ ಸ್ಥಾಪನೆಯಂತಹ ಅಗತ್ಯತೆಗಳ ಕುರಿತಾಗಿ ಸರಕಾರ - ಸಂಬಂಧಿಸಿದವರೊಂದಿಗೆ ಪ್ರಯತ್ನ ನಡೆಸುವ ಚಿಂತನೆ ಇಂದು ಮಡಿಕೇರಿಯಲ್ಲಿ ನಡೆದ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕ ಸಂಸ್ಥೆಯ ಸಮಾರಂಭದಲ್ಲಿ ಅಭಿವ್ಯಕ್ತಗೊಂಡಿತು.

ಈ ಸಂಸ್ಥೆ 50 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಇಂದು ನಗರದ ಕಾವೇರಿ ಹಾಲ್‍ನಲ್ಲಿ ಆಯೋಜಿತಗೊಂಡಿದ್ದ ಸುವರ್ಣ ಸಂಭ್ರಮ ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಈ ಅಭಿಪ್ರಾಯ ವ್ಯಕ್ತಪಡಿಸಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ (ಎಸ್.ಕೆ.ಸಿ.ಸಿ.ಐ.)ಯ ಉಪಾಧ್ಯಕ್ಷ ರವಿ ಅವರು ರಾಜ್ಯ ಸಂಸ್ಥೆಯ ಕಾರ್ಯಚಟುವಟಿಕೆ ಕುರಿತು ಮಾಹಿತಿಯಿತ್ತರು. ಕೊಡಗು ಜಿಲ್ಲೆ ಪ್ರವಾಸೋದ್ಯಮದಲ್ಲಿ ಬೆಳವಣಿಗೆ ಕಾಣುತ್ತಿದೆ. ಇದಕ್ಕೆ ಸರಕಾರದಿಂದ ಹಾಗೂ ಜಿಲ್ಲೆಯ ಜನತೆಯಿಂದಲೂ ಪೂರಕ ಸ್ಪಂದನ ಸಿಗಬೇಕು. ಜಿಲ್ಲೆಯಲ್ಲಿನ ಪರಿಸರಕ್ಕೆ, ಸಾಂಸ್ಕøತಿಕತೆಗೆ ಧಕ್ಕೆಯಾಗದ ಜವಾಬ್ದಾರಿಯುತ ಪ್ರವಾಸೋದ್ಯಮ ಇದಾಗಿರಬೇಕು. ಇದಕ್ಕಾಗಿ ಅಗತ್ಯ ಮೂಲಭೂತ ಸೌಲಭ್ಯಗಳು ಕಲ್ಪಿತವಾಗಬೇಕು. ಇಲ್ಲಿನ ಉತ್ಪನ್ನಗಳನ್ನು ಸಂರಕ್ಷಿಸಿ ಆಕರ್ಷಿಸಲು ಫುಡ್ ಪ್ರೊಸೆಸಿಂಗ್ ಪಾರ್ಕ್ ಸ್ಥಾಪನೆಗೆ ಸರಕಾರ ನೆರವು ನೀಡಬೇಕೆಂದರು.

ಶಿಕ್ಷಣದ ಕಾರಣದಿಂದ ಇಲ್ಲಿನ ಯುವ ಸಮೂಹ ಬೇರೆಡೆ ತೆರಳುತ್ತಿದೆ. ಇಲ್ಲಿಯೇ ಸೂಕ್ತ ಅವಕಾಶ ಕಲ್ಪಿಸಿದರೆ, ಉತ್ತಮವಾಗಲಿದೆ ಎಂದ ಅವರು ರಾಜ್ಯದಲ್ಲಿ ಕೊಡಗು ಮಾತ್ರ ರೈಲು ಸಂಪರ್ಕ ಇಲ್ಲದ ಜಿಲ್ಲೆಯಾಗಿದೆ. ಮೈಸೂರಿನಿಂದ ಕುಶಾಲನಗರದ ತನಕದ ಉದ್ದೇಶಿತ ರೈಲು ಮಾರ್ಗ ಈ ವರ್ಷದ ಬಜೆಟ್‍ನ ಮೂಲಕ ಪೂರ್ಣಗೊಳ್ಳುವಂತಾಗಲಿ, ಜಿಲ್ಲೆಯಲ್ಲಿ ಪ್ರಮುಖವಾಗಿ ಕಾಫಿ ಉತ್ಪಾದಿಸಲಾಗುತ್ತಿದ್ದು, ರೈಲು ವ್ಯವಸ್ಥೆ ಕಲ್ಪಿತವಾದರೆ, ಕಾಫಿ ಉದ್ದಿಮೆಗೆ ಅನಾಹುತವಾಗಲಿದೆ ಎಂದರು. ಬೆಂಗಳೂರಿನಿಂದ ಜಿಲ್ಲೆಯ ತನಕ ರಸ್ತೆ ಚೆನ್ನಾಗಿದೆ. ಆದರೆ ಇದರೊಂದಿಗೆ ಜಿಲ್ಲೆಯ ಆಂತರಿಕ ರಸ್ತೆಗಳನ್ನು ಅಭಿವೃದ್ಧಿಪಡಿಸಬೇಕಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಸೂಕ್ತ ತೀರ್ಮಾನಕ್ಕೆ ಚರ್ಚೆಯಾಗಲಿ

ಸುವರ್ಣ ಸಂಭ್ರಮದ ಸ್ಮರಣ ಸಂಚಿಕೆ ಬಿಡುಗಡೆಗೊಳಿಸಿದ ಮೈಸೂರು - ಕೊಡಗು ಕ್ಷೇತ್ರದ ಮಾಜಿ ಸಂಸದ ಎಚ್. ವಿಶ್ವನಾಥ್ ಅವರು ದೇಶದಲ್ಲಿ ವರ್ತಕರ ಪಾತ್ರ ಮಹತ್ವದ್ದು. ಅನಾದಿ ಕಾಲದಿಂದಲೂ ಅವರು ಜನ ಸಮೂಹದೊಂದಿಗೆ ಬೆರೆತು ಕೆಲಸ ಮಾಡುತ್ತಿದ್ದಾರೆಂದರು.

ಎಫ್‍ಕೆಸಿಸಿಐಯೊಂದಿಗೆ ಸರಕಾರ ಉತ್ತಮ ಬಾಂಧವ್ಯ ಇಟ್ಟುಕೊಂಡು ಕೆಲಸ ಮಾಡಿದಲ್ಲಿ ಸರಕಾರದ ಆದಾಯವೂ ಹೆಚ್ಚಾಗಲಿದೆ. ಕೇವಲ ಅಧಿಕಾರಿಗಳೊಂದಿಗೆ ಸರಕಾರ ತೀರ್ಮಾನ ಕೈಗೊಂಡರೆ ಪ್ರಯೋಜನವಾಗದು. ಈ ಬಗ್ಗೆ ಈ ಹಿಂದೆಯೇ ತಾವು ಮುಖ್ಯಮಂತ್ರಿಗಳ ಗಮನ ಸೆಳೆದಿದ್ದ ಕುರಿತು ಅವರು ಈ ಸಂದರ್ಭ ಉಲ್ಲೇಖಿಸಿದರು.

ಕೊಡಗು ಪ್ರವಾಸೋದ್ಯಮಕ್ಕೆ ಪ್ರಶಸ್ತ ಪ್ರದೇಶವಾಗಿದೆ. ಆದರೆ ಎಲ್ಲಾ ಸರಕಾರಗಳು ಪ್ರವಾಸೋದ್ಯಮವನ್ನು ಕಡೆಗಣಿಸಿದೆ.

(ಮೊದಲ ಪುಟದಿಂದ) ಈಗಿನ ಸಚಿವ ಪ್ರಿಯಾಂಕ ಖರ್ಗೆ ಅವರು ಆಸಕ್ತಿ ಹೊಂದಿದ್ದು, ಅವರನ್ನು ಜಿಲ್ಲೆಗೆ ಕರೆ ತಂದು ಜನಪ್ರತಿನಿಧಿಗಳು, ಪ್ರಮುಖರು ಪರಸ್ಪರ ಚರ್ಚಿಸಿ, ಸೂಕ್ತ ತೀರ್ಮಾನ ಕೈಗೊಳ್ಳಬೇಕು. ಸರಕಾರದಿಂದ ಆರೋಗ್ಯಕರ ಸಹಕಾರ ಸಿಗಬೇಕು ಈ ನಿಟ್ಟಿನಲ್ಲಿ ಪ್ರಯತ್ನ ನಡೆಸುವಂತೆ ಅವರು ಸಲಹೆಯಿತ್ತರು. ಕೇಂದ್ರ ಸರಕಾರದಿಂದಲೂ ಇದಕ್ಕೆ ಸಾಕಷ್ಟು ಅನುದಾನ ಇದೆ. ಆದರೆ ಪ್ರಸ್ತಾವನೆಗಳೇ ಹೋಗದ ಪರಿಸ್ಥಿತಿ ಇದೆ ಎಂದರು.

ಕೊಡಗು ಸೇರಿದಂತೆ ಐದು ಜಿಲ್ಲೆಗಳನ್ನು ಸೇರಿಸಿ ಕಾವೇರಿ ದೀಜನಿಂಗ್ ಟೂರಿಸಂಗೆ ಈ ಹಿಂದೆ ಯತ್ನ ನಡೆಸಿದ್ದು, ಇನ್ನೂ ಫಲಪ್ರದವಾಗಿಲ್ಲ ಎಂದು ಅವರು ವಿಷಾದಿಸಿದರು. ಜಿಲ್ಲೆಯಲ್ಲಿನ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಚಟುವಟಿಕೆ, ಸಾಧನೆ ಕುರಿತು ಶ್ಲಾಘಿಸಿದ ವಿಶ್ವನಾಥ್ ಈ ಸಂಸ್ಥೆ ರಾಜ್ಯದ ಇತರ ಜಿಲ್ಲೆಗಳಿಗೆ ಮಾದರಿಯಾಗಿದೆ ಎಂದರು.

ಸ್ವಚ್ಛತೆ ಕಾಪಾಡಲು ಕರೆ

ಅತಿಥಿಗಳಾಗಿ ಪಾಲ್ಗೊಂಡಿದ್ದ ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಅವರು ಮಾತನಾಡಿ, ಜಿಲ್ಲೆ ಪ್ರವಾಸಿ ಕೇಂದ್ರವಾಗಿ ಬೆಳೆದಿದ್ದು, ವ್ಯಾಪಾರದ ದೃಷ್ಟಿಯಲ್ಲೂ ಅನುಕೂಲಕರ ವಾಗಿದೆ. ಆದರೆ ಇದರ ನಡುವೆ ಸ್ವಚ್ಛತೆಯನ್ನು ಕಾಪಾಡಬೇಕು ಎಂದರು. ಈ ಸಂಸ್ಥೆಯನ್ನು ಕಟ್ಟಿ ಬೆಳೆಸುವಲ್ಲಿ ಹಲವರ ಪರಿಶ್ರಮ ಇದೆ. ಬೇರೆ ಬೇರೆ ಪಕ್ಷದವರು ಸಂಸ್ಥೆಯಲ್ಲಿದ್ದರೂ ಚರ್ಚಿಸಿ ಸೂಕ್ತ ನಿರ್ಧಾರ ತೆಗೆದುಕೊಳ್ಳ ಲಾಗುತ್ತದೆ. ಇದು ಒಳ್ಳೆಯ ಲಕ್ಷಣವಾಗಿದ್ದು, ಮುಂದುವರಿಸ ಬೇಕೆಂದರು.

ಮತ್ತೋರ್ವ ಅತಿಥಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು ಮಾತನಾಡಿ, ಉತ್ತಮವಾಗಿ ಈ ಸಂಸ್ಥೆಯನ್ನು ಕಟ್ಟಿ ಬೆಳೆಸಿದ ಹಿರಿಯರನ್ನು ಗುರುತಿಸಿ ಗೌರವಿಸಿರುವದು ಶ್ಲಾಘನೀಯ ಸಂಸ್ಥೆಗೆ ಎಲ್ಲಾ ರೀತಿಯ ನೆರವು ನೀಡಲು ಸಿದ್ಧವಿರುವದಾಗಿ ಹೇಳಿದರು.

ರಾಜ್ಯ ರೇಷ್ಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಟಿ.ಪಿ. ರಮೇಶ್ ಅವರು ಸಂಸ್ಥೆ ನಡೆದು ಬಂದ ದಾರಿಯ ಕುರಿತು ಬೆಳಕು ಚೆಲ್ಲಿ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಕೊಡಗಿನ ಸಂಸ್ಥೆ ರಾಜ್ಯದಲ್ಲಿ ಹೆಸರು ಪಡೆದಿದ್ದು, ಅನೇಕರ ಶ್ರಮ ಇದರಲ್ಲಿದೆ. ಸಂಸ್ಥೆ ಬೆಳೆದ ಬಳಿಕ ವರ್ತಕರಿಗೆ ಈ ಹಿಂದಿನಷ್ಟು ಸಮಸ್ಯೆಗಳು ಇಲ್ಲದಂತಾಗಿದೆ ಎಂದರು. ಪ್ರವಾಸೋದ್ಯಮ ಸಚಿವ ಪ್ರಯಾಂಕ ಖರ್ಗೆ ಅವರು ಈಗಾಗಲೇ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಕೇಳಿದ್ದು, ಸರ್ವೆ ನಡೆಯುತ್ತಿದೆ. ಇವರನ್ನು ಜಿಲ್ಲೆಗೆ ಕರೆತಂದು ಯೋಜನೆ ರೂಪಿಸುವ ಕುರಿತು ಪ್ರಸ್ತಾಪಿಸಿದರು.

ಮತ್ತೋರ್ವ ಅತಿಥಿ ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ ಅವರು ಮನೆಗಳಲ್ಲಿ ಹೆಣ್ಣು ಮಕ್ಕಳು ಸೂಕ್ತ ರೀತಿಯಲ್ಲಿ ಕಸ ವಿಲೇವಾರಿ ಮಾಡುವಂತೆ ವರ್ತಕರು ಇದರಲ್ಲಿ ಅಚ್ಚುಕಟ್ಟುತನ ತೋರಬೇಕು. ಸುಂದರ ಕೊಡಗು ಮುಂದಿನ ಪೀಳಿಗೆಗೂ ಉಳಿಯಲಿ ಎಂದ ಅವರು ಹೆಣ್ಣು ಮಕ್ಕಳು ಈ ಸಂಸ್ಥೆಯ ಸದಸ್ಯರಾಗಿ ಹೆಚ್ಚು ಸಂಖ್ಯೆಯಲ್ಲಿ ಬರುವಂತಾಗಲಿ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಚೇಂಬರ್‍ನ ಅಧ್ಯಕ್ಷ ಬಿ.ಎನ್. ಪ್ರಕಾಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆ ವರ್ತಕರ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿದ್ದು, ಕಟ್ಟಡದ ಅಭಿವೃದ್ಧಿಗೆ ಸಹಕಾರ ನೀಡುವಂತೆ ಜನಪ್ರತಿನಿಧಿಗಳಲ್ಲಿ ಕೋರಿದರು.

ವೇದಿಕೆಯಲ್ಲಿ ಉಪಸ್ಥಿತರಿದ್ದ ಮಾಜಿ ಎಂ.ಎಲ್.ಸಿ. ಎಸ್.ಜಿ. ಮೇದಪ್ಪ, ಚೇಂಬರ್‍ನ ಮಾಜಿ ಅಧ್ಯಕ್ಷರುಗಳಾದ ಎಂ.ಬಿ. ದೇವಯ್ಯ, ಜಿ. ರಾಜೇಂದ್ರ, ಎಂ.ಇ. ಹಾರೂನ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಮಕೃಷ್ಣಗೌಡ, ಕೆ.ಎಸ್.ಐ.ಐ.ಡಿ.ಬಿ. ಅಧ್ಯಕ್ಷ ಧನಂಜಯ ಅವರುಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಸುವರ್ಣ ಸಂಭ್ರಮ ಆಚರಣೆ ಸಮಿತಿ ಅಧ್ಯಕ್ಷ ಕೆ.ಬಿ. ಗಿರೀಶ್ ಗಣಪತಿ ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಜಿ. ಚಿದ್ವಿಲಾಸ್ ನಿರೂಪಿಸಿ, ಪ್ರಧಾನ ಕಾರ್ಯದರ್ಶಿ ಮೋಂತಿ ಗಣೇಶ್ ವಂದಿಸಿದರು.