ಕುಶಾಲನಗರ, ಆ. 22: ಸ್ವಚ್ಛತಾ ಕಾರ್ಯದಲ್ಲಿ ಕೀಳರಿಮೆ ತಾಳಬಾರದು ಎಂದು ಕುಶಾಲನಗರ ಸರಕಾರಿ ಪಾಲಿಟೆಕ್ನಿಕ್ ಪ್ರಾಂಶುಪಾಲ ಹೆಚ್.ವಿ. ಶಿವಪ್ಪ ವಿದ್ಯಾರ್ಥಿಗಳಿಗೆ ಕರೆ ನೀಡಿದ್ದಾರೆ.

ಪಾಲಿಟೆಕ್ನಿಕ್ ಸಭಾಂಗಣದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಆಶ್ರಯದಲ್ಲಿ ಚಾಲನೆಗೊಂಡ ಕೇಂದ್ರ ಸರಕಾರದ ಸ್ವಚ್ಛತಾ ಸಪ್ತಾಹದಲ್ಲಿ ಪಾಲ್ಗೊಂಡು ಮಾತನಾಡಿದರು. ಪರಿಸರ ಸ್ವಚ್ಛವಾದಲ್ಲಿ ಆರೋಗ್ಯ ಪೂರ್ಣ ಸಮಾಜ ನಿರ್ಮಾಣ ಸಾಧ್ಯ ಎಂದ ಅವರು, ಸ್ವಚ್ಛತೆಯಲ್ಲಿ ಪ್ರತಿಯೊಬ್ಬರ ಪಾತ್ರ ಪ್ರಮುಖವಾಗಿದ್ದು ಜವಾಬ್ದಾರಿಯೂ ಆಗಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್, ವಿದ್ಯಾರ್ಥಿ ದಿಸೆಯಿಂದಲೇ ಸ್ವಚ್ಛತಾ ಅರಿವು ಜಾಗೃತಿ ಮೂಡಿಸಿಕೊಳ್ಳ ಬೇಕಾಗಿದೆ ಎಂದರು. ಮನೆಮನೆಯಿಂದಲೇ ಸ್ವಚ್ಛತೆ ಪ್ರಾರಂಭಗೊಂಡಲ್ಲಿ ಆರೋಗ್ಯಕರ ಪರಿಸರ ನಿರ್ಮಾಣದೊಂದಿಗೆ ಸ್ವಚ್ಛ ಅಭಿಯಾನದ ಉದ್ದೇಶ ಯಶಸ್ಸು ಕಾಣಲು ಸಾಧ್ಯ ಎಂದರು.

15 ದಿನಗಳ ಕಾಲ ನಡೆಯಲಿರುವ ಸ್ವಚ್ಛತಾ ಕಾರ್ಯ ಯೋಜನೆ ಹಿನ್ನೆಲೆಯಲ್ಲಿ ಕಾಲೇಜಿನ ಎನ್.ಎಸ್.ಎಸ್. ಘಟಕದ ಎರಡು ತಂಡಗಳ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ಸಂದರ್ಭ ಕಾಲೇಜಿನ ಕುಲಸಚಿವ ಲಿಂಗರಾಜು ಮಾತನಾಡಿದರು. ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಪ್ರಕಾಶ್ ಕುಂಬಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಚ್ಛತಾ ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಒದಗಿಸಿದರು.

ಶಿಬಿರಾಧಿಕಾರಿ ಹೆಚ್.ಜೆ. ಮಂಜುನಾಥ್, ಉಪನ್ಯಾಸಕರಾದ ವಿಜಯ್, ಪಳನಿ ಅವರುಗಳು ಇದ್ದರು. ಘಟಕದ ವಿದ್ಯಾರ್ಥಿ ರೋಹಿತ ಕಾರ್ಯಕ್ರಮ ನಿರೂಪಿಸಿದರು, ಕೆ.ಕೆ. ದೀಕ್ಷಿತ್ ಸ್ವಾಗತಿಸಿದರು, ಮೋಹನ್‍ಕುಮಾರ್ ವಂದಿಸಿದರು.