ಕುಶಾಲನಗರ, ಅ. 2 : ಗಾಂಧಿ ಜಯಂತಿ ಅಂಗವಾಗಿ ಕುಶಾಲನಗರ ದಲ್ಲಿ ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು ಸ್ಥಳೀಯ ಸರ್ಕಾರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಕಾರ್ಯಕ್ರಮದ ಅಂಗವಾಗಿ ನಡೆದ ಸಮಾರಂಭವನ್ನು ನ್ಯಾಯಾಧೀಶರುಗಳಾದ ಮೋಹನ್ ಪ್ರಭು ಮತ್ತು ಎಸ್. ನಟರಾಜ್ ಅವರುಗಳು ಗಾಂಧೀಜಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಭಾವ ಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಾರ್ಯದರ್ಶಿಗಳಾದ ಮೋಹನ್ ಪ್ರಭು ಮಾತನಾಡಿ, ಮಹಾತ್ಮಗಾಂಧಿ ಅವರ ಆದರ್ಶ ಪಾಲನೆಯೊಂದಿಗೆ ಪ್ರತಿಯೊಬ್ಬರು ತಿಳಿ ಮನಸ್ಸಿನಿಂದ ಸಮಾಜದ ಬದಲಾವಣೆಗೆ ಪ್ರಯತ್ನಿಸಬೇಕಾಗಿದೆ. ಋಣಾತ್ಮಕ ಚಿಂತನೆಗಳನ್ನು ಬದಿಗಿಟ್ಟು ದೇಶದ ಪ್ರಗತಿ ಬಗ್ಗೆ ಚಿಂತಿಸಬೇಕಾಗಿದೆ ಎಂದು ಕರೆ ನೀಡಿದರು.
ಕುಶಾಲನಗರ ಜೆಎಂಎಫ್‍ಸಿ ನ್ಯಾಯಾಧೀಶರಾದ ಎಸ್. ನಟರಾಜ್ ಮಾತನಾಡಿ, ಸ್ವಚ್ಛತೆಯ ಬಗ್ಗೆ ಕಡೆಗಣನೆ ಸಲ್ಲದು ಎಂದರಲ್ಲದೆ, 2019 ಒಳಗಾಗಿ ಇಡೀ ದೇಶ ಸ್ವಚ್ಛವಾಗಿಡುವಲ್ಲಿ ಪ್ರತಿಯೊಬ್ಬರ ಹೊಣೆಗಾರಿಕೆ ಪ್ರಮುಖವಾಗಿದೆ . ಈ ಮೂಲಕ ಗಾಂಧಿ ಕನಸನ್ನು ನನಸಾಗಿಸಬೇಕಾಗಿದೆ ಎಂದು ಕರೆ ನೀಡಿದರು.
ಈ ಸಂದರ್ಭ ಶಾಲಾ ವಿದ್ಯಾರ್ಥಿಗಳಿಂದ ಸರ್ವ ಧರ್ಮ ಪ್ರಾರ್ಥನೆ, ಭಗವತ್ ಗೀತೆ, ಕುರಾನ್, ಬೈಬಲ್ ಗೀತೆಗಳ ಪಠಣ ನಡೆಯಿತು. ಪಟ್ಟಣ ಪಂಚಾಯತಿ ಅಧ್ಯಕ್ಷ ಎಂ.ಎಂ. ಚರಣ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಉಪಾಧ್ಯಕ್ಷ ಶರವಣ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಸುರಯ್ಯಾ ಭಾನು, ಪಟ್ಟಣ ಪಂಚಾಯತಿ ಸದಸ್ಯರುಗಳು, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಎಂ.ಎ ಶ್ರೀಧರ್ ಮತ್ತು ಸಂಘ-ಸಂಸ್ಥೆಗಳ ಪ್ರಮುಖರು ಇದ್ದರು. ಕಾರ್ಯಕ್ರಮ ನಂತರ ಗಣ್ಯರು ಸ್ವಚ್ಛತಾ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಶಾಲಾ ವಿದ್ಯಾರ್ಥಿಗಳಿಂದ ಪಟ್ಟಣದ ಮುಖ್ಯ ರಸ್ತೆಯಲ್ಲಿ ಮೆರವಣಿಗೆ ನಡೆಯಿತು.