ಕುಶಾಲನಗರ, ಜ. 18: ಕುಶಾಲನಗರ ಸರಕಾರಿ ಬಸ್ ನಿಲ್ದಾಣದಲ್ಲಿ ಕಾಲೇಜು ವಿದ್ಯಾರ್ಥಿ ಗಳ ದಾಂಧಲೆ ಅಧಿಕ ಗೊಂಡಿದೆ. ಕಾಲೇಜು ತರಗತಿಗಳಿಗೆ ಬಂಕ್ ಮಾಡಿ ಬಸ್ ನಿಲ್ದಾಣದಲ್ಲಿ ಗುಂಪುಗೂಡಿ ಆಗಾಗ್ಯೆ ಘರ್ಷಣೆ ಉಂಟು ಮಾಡುವದು ಈ ವಿದ್ಯಾರ್ಥಿಗಳ ಕಾಯಕವಾಗಿದೆ.

ಬುಧವಾರ ಮಧ್ಯಾಹ್ನ ವೇಳೆ ಬಸ್ ನಿಲ್ದಾಣದ ನಡುವೆ ನಡೆದ ಹೊಡೆದಾಟ ದೃಶ್ಯ ಪ್ರಯಾಣಿಕರಲ್ಲಿ ಸ್ವಲ್ಪಕಾಲ ಆತಂಕ ಉಂಟುಮಾಡಿದ ಪರಿಸ್ಥಿತಿ ಕಂಡುಬಂತು. ಸ್ಥಳೀಯ ಕಾಲೇಜೊಂದರ ವಿದ್ಯಾರ್ಥಿಗಳು ಹೊಡೆದಾಟದಲ್ಲಿ ತೊಡಗಿದ್ದ ನಂತರ ಕೆಲವರ ಮಧ್ಯಪ್ರವೇಶದಿಂದ ಘರ್ಷಣೆ ತಹಬದಿಗೆ ಬಂತು. ದಿನನಿತ್ಯ ಕುಶಾಲನಗರ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಕಾಟ ಅಧಿಕಗೊಂಡಿದ್ದು ದಿನದ ಬಹುತೇಕ ಸಮಯವನ್ನು ಬಸ್ ನಿಲ್ದಾಣದಲ್ಲಿ ಕಾಲಹರಣ ಮಾಡುತ್ತಿರುವದು ಸಾಮಾನ್ಯವಾಗಿದೆ ಎನ್ನುವದು ಇಲ್ಲಿನ ದಿನನಿತ್ಯದ ಪ್ರಯಾಣಿಕರ ದೂರಾಗಿದೆ.

ಕೆಲವು ವಿದ್ಯಾರ್ಥಿಗಳು ಸಂಜೆ 5 ಗಂಟೆ ತನಕ ಬಸ್ ನಿಲ್ದಾಣದಲ್ಲಿ ಠಿಕಾಣಿ ಹೂಡುವದರೊಂದಿಗೆ ಗಾಂಜಾ ಹವ್ಯಾಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವ ಬಗ್ಗೆ ಪುಕಾರುಗಳು ಕೇಳಿಬಂದಿವೆ. ಈ ಹಿಂದೆ ಠಾಣಾಧಿಕಾರಿಯಾಗಿದ್ದ ಅನೂಪ್ ಮಾದಪ್ಪ ಅವರು ಇಂತಹವರ ಮೇಲೆ ಕ್ರಮ ಕೈಗೊಳ್ಳುವಲ್ಲಿ ಯಶಸ್ವಿಯಾಗಿದ್ದರು.

ಪೋಷಕರು ತಮ್ಮ ಮಕ್ಕಳ ಬಗ್ಗೆ ನಿಗಾವಹಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಯುವಪೀಳಿಗೆ ಸಮಾಜಘಾತುಕ ಶಕ್ತಿಗಳಾಗಿ ಪರಿವರ್ತನೆಗೊಳ್ಳುವ ಶಂಕೆ ಕಂಡುಬರುತ್ತಿದೆ. ಪೊಲೀಸ್ ಇಲಾಖೆ ಈ ಬಗ್ಗೆ ನಿಗಾವಹಿಸಬೇಕೆಂದು ಸ್ಥಳೀಯರು ಪತ್ರಿಕೆ ಮೂಲಕ ಕೋರಿದ್ದಾರೆ. -ಸಿಂಚು