ಕುಶಾಲನಗರ, ಆ. 21: ಮುನ್ನೆಚ್ಚರಿಕೆ ಕ್ರಮವಾಗಿ ಕುಶಾಲನಗರದಲ್ಲಿ ಜಾರಿಗೊಳಿಸಿದ್ದ ಸೆಕ್ಷನ್ 144 ಭಾನುವಾರ ಬೆಳಗ್ಗೆಯಿಂದ ರದ್ದುಗೊಳಿಸಲಾಗಿದೆ. ಕಳೆದ 14 ರಂದು ನಡೆದ ಆಟೋ ಚಾಲಕ ಪ್ರವೀಣ್ ಪೂಜಾರಿ ಹತ್ಯೆ ಹಿನ್ನೆಲೆಯಲ್ಲಿ ಭಾನುವಾರ ಬೆಳಗ್ಗಿನ ತನಕ ಸೆಕ್ಷನ್ ಜಾರಿಗೊಳಿಸಲಾಗಿತ್ತು. ಇದೀಗ ಸೂಚನೆಯಂತೆ ಸೆಕ್ಷನ್ ಹಿಂತೆಗೆದುಕೊಳ್ಳಲಾಗಿದೆ. ಭದ್ರತಾ ಹಿನ್ನೆಲೆಯಲ್ಲಿ ನಿಯೋಜನೆಗೊಳಿಸಿದ್ದ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿಗಳನ್ನು ಕೂಡಾ ಕಡಿಮೆ ಗೊಳಿಸಲಾಗಿದ್ದು ನೆರೆಯ ಜಿಲ್ಲೆಗಳ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ವಾಪಾಸ್ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆಯಕಟ್ಟಿನ ಪ್ರದೇಶಗಳಲ್ಲಿ ಕೆಎಸ್‍ಆರ್‍ಪಿ, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದ್ದು ಯಾವದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲಾಗುತ್ತಿದೆ.

ಗುಡ್ಡೆಹೊಸೂರು, ಕುಶಾಲನಗರ ವ್ಯಾಪ್ತಿಯಲ್ಲಿ ನಡೆದ ಘಟನೆಗಳಿಗೆ ಸಂಬಂಧಿಸಿದಂತೆ ಕುಶಾಲನಗರ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗಳಲ್ಲಿ ಒಟ್ಟು 3 ಮೊಕದ್ದಮೆಗಳು ದಾಖಲಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನ ಬಂಧನ ನಡೆದಿದೆ. ಕುಶಾಲನಗರ ರಥ ಬೀದಿಯಲ್ಲಿ ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡಿರುವ ವ್ಯಕ್ತಿ ಮೈಸೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.