ಮಡಿಕೇರಿ, ಜೂ. 2: ಜಾನಪದ ಉತ್ಸವದ ಹಿನ್ನೆಲೆ ಕುಶಾಲನಗರದಲ್ಲಿ ಇಂದು ಕೊಡಗಿನ ಇಬ್ಬರು ಹಿರಿಯ ಜಾನಪದ ವಸ್ತು ಸಂಗ್ರಾಹಕರನ್ನು ಸನ್ಮಾನಿಸಲಾಗುತ್ತಿದೆ. ಅಂತೆಯೇ ಜಾನಪದ ಉತ್ಸವಕ್ಕೆ ಜಾನಪದ ಸಿರಿ ಸಂಪತ್ತು ವಸ್ತು ಪ್ರದರ್ಶನ ವಿಶೇಷ ಮೆರುಗು ನೀಡಲಿದೆ.

ನಾಡಿನಲ್ಲಿಯೇ ಅಪರೂಪದ ಜಾನಪದೀಯ ವಸ್ತು ಸಂಗ್ರಹಕ್ಕೆ ಕುಶಾಲನಗರದ ಜಾನಪದ ಸಂಶೋಧಕ ಬಾಚರಣಿಯಂಡ ಅಪ್ಪಣ್ಣ ಖ್ಯಾತರಾಗಿದ್ದಾರೆ. 30 ವರ್ಷಗಳಿಂದ ತನ್ನ ಮನೆಯಲ್ಲಿಯೇ ನೂರಾರು ವೈವಿಧ್ಯಮಯ ಜಾನಪದ ವಸ್ತುಗಳನ್ನು ಸಂಗ್ರಹಿಸಿಟ್ಟು ಜೋಪಾನವಾಗಿ ಕಾಪಾಡಿಕೊಂಡು ಬಂದಿರುವ ಅಪ್ಪಣ್ಣ ಮನೆಯಲ್ಲಿ ಕೊಡಗಿನ ಅನೇಕ ಅಪರೂಪದ, ಮುಂದೆಂದೂ ಕಾಣಲಾಗದ ವಸ್ತುಗಳು ಜೋಪಾನವಾಗಿ ಕಾಯ್ದಿರಿಸಲ್ಪಟ್ಟಿವೆ.

ಮಡಿಕೇರಿ ತಾಲೂಕಿನ ಮರಗೋಡು ಬಳಿಯ ಕಟ್ಟೆಮಾಡು ಗ್ರಾಮದ ತೋಟಂಬೈಲು ಪಾರ್ವತಿ 15 ವರ್ಷಗಳಿಂದ ಪಾರಂಪರಿಕ ಪರಿಕರಗಳನ್ನು ಸಂಗ್ರಹಿಸುತ್ತಾ ಅವುಗಳನ್ನು ಮನೆಯ ಕೊಠಡಿಯಲ್ಲಿ ಜೋಪಾನವಾಗಿ ಸಂಗ್ರಹಿಸುತ್ತಾ ಬಂದಿದ್ದಾರೆ.

ಹಿತ್ತಾಳೆ, ತಾಮ್ರ, ಕಂಚು ಸೇರಿದಂತೆ ಅನೇಕ ರೀತಿಯ ಅಮೂಲ್ಯ ವಸ್ತುಗಳ ಸಂಗ್ರಹ ಪಾರ್ವತಿ ಅವರ ಬಳಿಯಿದೆ. ಹಿತ್ತಾಳೆಯ ಕೆಟಲ್, ಅನ್ನ ಬಡಿಸುವ ಸೌಟು, ತಾಮ್ರದ ಪಾತ್ರೆ, ಹರಿವಾಣ, ಬೋಗುಣಿ, ಮುಚ್ಚಳ, ಹಿತ್ತಾಳೆಯ ಮುಕ್ಕಾಲು, ಹಿತ್ತಾಳೆಯ ದೀಪ, ಕಂಚಿನ ಪೂಜಾ ಸಾಮಗ್ರಿಗಳು, ಮರದ ಸಂದೂಕ, ಪಾದುಕೆ, ಕೀ ಸ್ಟಾಂಡ್, ನೂಪುಟ್ಟು ಒರಳು, ರೊಟ್ಟಿ ತಟ್ಟೆ, ಒನಕೆ, ಬಿದಿರಿನ ತರಾವರಿ ಬುಟ್ಟಿಗಳು, ಹಿತ್ತಾಳೆಯ ಕೊಲಂಬೆ, ಉರುಳಿ, ಕಬ್ಬಿಣದ ಕಾಫಿ ಡ್ರೈಯರ್ ಯಂತ್ರ, ಗುಗ್ಗೆ ಕತ್ತಿ, ಸೇವಿಗೆ ಒರಲು ಹೀಗೆ ನೂರಾರು ವೈವಿಧ್ಯಮಯ ಜಾನಪದ ಸಂಗ್ರಹಗಳು ಪಾರ್ವತಿ ಅವರ ಬಳಿಯಿದೆ.

ನಾಡಿನ ಹಿರಿಯ ಜಾನಪದ ಸಂಶೋಧಕ, ತ್ರಿಭಾಷಾ ಸಾಹಿತಿ, ಜಾನಪದ ವಸ್ತುಗಳ ಸಂಗ್ರಾಹಕ ಬಾಚರಣಿಯಂಡ ಅಪ್ಪಣ್ಣ ಅವರೊಂದಿಗೆ ಕುಶಾಲನಗರದಲ್ಲಿ ಇಂದು ನಡೆಯುವ ಜಾನಪದ ಉತ್ಸವದಲ್ಲಿ ತೋಟಂಬೈಲು ಪಾರ್ವತಿ ಅವರನ್ನೂ ಸನ್ನಾನಿಸಲಾಗುತ್ತಿದೆ. ಇದೇ ಸಂದರ್ಭ ಇವರೀರ್ವರ ಅಪೂರ್ವ ಸಂಗ್ರಹದ ಜಾನಪದ ವಸ್ತುಗಳ ಸಂಗ್ರಹವನ್ನು ಜಾನಪದ ಸಿರಿ ಸಂಪತ್ತು ಹೆಸರಿನಲ್ಲಿ ಪ್ರದರ್ಶನಕ್ಕಿರಿಸಲಾಗಿದೆ.