ಕುಶಾಲನಗರ, ಡಿ 29: ಜಾತಿ, ಸಂಪ್ರದಾಯ ಮತ್ತು ಮೌಢ್ಯತೆಯನ್ನು ಮೆಟ್ಟಿ ನಿಂತು ಶ್ರೇಷ್ಠ ಮಾನವನಾಗಿ ರೂಪುಗೊಂಡ ರಾಷ್ಟ್ರಕವಿ ಕುವೆಂಪು ಅವರನ್ನು ನೆನೆದು ಕೊಳ್ಳುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ಮೈಸೂರಿನ ಸರಕಾರಿ ಮಹಿಳಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ. ಪಿ. ಬೆಟ್ಟೇಗೌಡ ಹೇಳಿದರು.

ಕುಶಾಲನಗರದ ರೈತ ಸಹಕಾರ ಭವನದಲ್ಲಿ ಒಕ್ಕಲಿಗರ ಯುವ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರಕವಿ ಕುವೆಂಪುರವರ ಜನ್ಮ ದಿನಾಚರಣೆ ಹಾಗೂ ಒಕ್ಕಲಿಗರ ಯುವ ವೇದಿಕೆಯ ದ್ವಿತೀಯ ವಾರ್ಷಿಕೋತ್ಸವದಲ್ಲಿ ಮುಖ್ಯ ಭಾಷಣಾಕಾರರಾಗಿ ಪಾಲ್ಗೊಂಡು ಮಾತನಾಡಿದ ಅವರು, ಸಾಹಿತ್ಯವನ್ನು ವೈಜ್ಞಾನಿಕ ಅಸ್ತ್ರದಂತೆ ಪರಿವರ್ತಿಸಿ ಸಮಾಜದಲ್ಲಿ ನಡೆಯುತ್ತಿರುವ ಮೌಢ್ಯತೆ ಮತ್ತು ಜಾತಿ ವ್ಯವಸ್ಥೆಗಳ ಬಗ್ಗೆ ಸಮರ ಸಾರಿದ್ದಾರೆ ಎಂದರು. ಬಸವಣ್ಣರಂತೆ ಮಾನವ ಧರ್ಮದ ಸಂಕೇತವನ್ನು ಜನರ ಬಳಿತಂದ ಮಹಾನ್ ವಿದ್ವಾಂಸರು, ಚಿಂತಕರು ಹಾಗೂ ದಾರ್ಶನಿಕರು ಆಗಿರುವ ಶ್ರೇಷ್ಟ ವಿಶ್ವಮಾನವನ ಆದರ್ಶಗಳನ್ನು ಯುವಪೀಳಿಗೆ ಪಾಲಿಸಬೇಕಾಗಿದೆ ಎಂದರು.

ರೈತರ ಬವಣೆಗಳನ್ನು ಕಂಡ ಹಿರಿಯ ಚೇತನ ರೈತರ ಆತ್ಮಶಕ್ತಿ ಕುಗ್ಗದಂತೆ ತಮ್ಮ ಸಾಹಿತ್ಯದ ಮೂಲಕ ಹುರಿದುಂಬಿಸಿದ ಬಗ್ಗೆ ವಿವರ ಒದಗಿಸಿದರು.

ಕೊಡಗು ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಎಸ್.ಎಂ.ಚಂಗಪ್ಪ ಮಾತನಾಡಿ, ಮನುಷ್ಯ ಜನ್ಮ ಶ್ರೇಷ್ಟವಾಗಿದ್ದು, ಮಾನವನ ಭಾವನೆಗಳು ಹುಟ್ಟುವಾಗ ವಿಶ್ವ ಮಾನವತ್ತದ ಕಡೆ ವಾಲಿ ನಂತರ ಬೆಳೆಯುತ್ತಾ ಅಲ್ಪಮಾನವನಾಗಿ ಜಾತಿ-ಧರ್ಮವನ್ನು ಅಪ್ಪಿ ಕೊಳ್ಳುತ್ತಿರುವದು ಸಮಂಜಸವಲ್ಲ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಕುಶಾಲನಗರ ಹೋಬಳಿ ಒಕ್ಕಲಿಗರ ಯುವ ವೇದಿಕೆಯ ಅಧ್ಯಕ್ಷ ಎಂ.ಡಿ ಕೃಷ್ಣಪ್ಪ ಮಾತನಾಡಿ, ಜಡ್ಡುಗಟ್ಟಿದ ಹಾಗೂ ಜಡಗೊಂಡಿದ್ದ ಕನ್ನಡ ಸಾಹಿತ್ಯಕ್ಕೆ ಹೊಸ ರೂಪ ಕೊಟ್ಟ ಮಹಾನ್ ಕವಿ ಕುವೆಂಪು. ಸಾಹಿತ್ಯದ ಬರವಣಿಗೆಯ ಮೂಲಕ ಪತ್ರಿಯೊಬ್ಬರ ಮನಸ್ಸಿನಲ್ಲಿ ನೆಲೆಸಿದ ಸಾರ್ವಕಾಲಿಕ ಕವಿಯಾಗಿದ್ದಾರೆ ಎಂದರು.

ಸೋಮವಾರಪೇಟೆ ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಎ.ಆರ್ ಮುತ್ತಣ್ಣ, ತಾಲೂಕು ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ ದೀಪಕ್, ಕುಶಾಲನಗರ ಒಕ್ಕಲಿಗರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷ ಹೆಚ್.ಎನ್ ರಾಮಚಂದ್ರ, ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎಂ.ಎಸ್ ರಾಜೇಶ್, ವೇದಿಕೆಯ ಪ್ರಮುಖರಾದ ಮಂಜುನಾಥ್, ಭಾರತೀಶ್, ಚಂದ್ರಶೇಖರ್, ಕುಮಾರಸ್ವಾಮಿ, ಎಂ.ಎ ರಘು, ಜೈರಾಜ್, ಮಂಜುನಾಥ್, ಕಿರಣ್ ಮತ್ತಿತರರು ಇದ್ದರು.

ನಿರ್ದೇಶಕÀ ಎಂ.ಕೆ ದಿನೇಶ್ ಪ್ರ್ರಾಸ್ತಾವಿಕ ನುಡಿಗಳಾಡಿದರು, ಕೆ.ಕೆ ಗಾಯತ್ರಿ ನಿರೂಪಿಸಿದರು. ವಿ.ಎಸ್ ರಾಜಶೇಖರ್ ಸ್ವಾಗತಿಸಿದರು, ಎಂ.ಸಿ ಅನಿಲ್ ಕುಮಾರ್ ವಂದಿಸಿದರು.