ಕುಶಾಲನಗರ, ಜ 30: ಕುಶಾಲನಗರದ ಸಮಗ್ರ ಅಭಿವೃದ್ಧಿ ದೃಷ್ಟಿಯಲ್ಲಿ ಈ ಬಾರಿಯ ಬಜೆಟ್‍ನಲ್ಲಿ ವಿಶೇಷ ಅನುದಾನ ಮೀಸಲಿರಿಸಲು ದಿನೇಶ್ ಗುಂಡೂರಾವ್ ಅವರ ಸಹಕಾರದೊಂದಿಗೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಾಗುವದು ಎಂದು ನಗರ ಯೋಜನ ಪ್ರಾಧಿಕಾರದ ನೂತನ ಅಧ್ಯಕ್ಷ ಬಿ.ಜಿ. ಮಂಜುನಾಥ ಗುಂಡೂರಾವ್ ಹೇಳಿದರು. ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ಕಚೇರಿಯಲ್ಲಿ ಸೋಮವಾರ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಭರವಸೆ ನೀಡಿದ್ದಾರೆ.

ಕೂಡಾ ಅಧಿಕಾರಿ ರಾಜಶೇಖರ್ ಅವರಿಂದ ಎರಡನೇ ಅವಧಿಯ ಅಧ್ಯಕ್ಷರಾಗಿ ಮಂಜುನಾಥ್ ಅಧಿಕಾರ ಸ್ವೀಕರಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

5 ಕೋಟಿ ವೆಚ್ಚದಲ್ಲಿ ಕುಶಾಲನಗರ ಪಟ್ಟಣ ಪಂಚಾಯಿತಿ ಆಡಳಿತ ಕಚೇರಿ ನಿರ್ಮಾಣ ಸಂಬಂಧ ಈಗಾಗಲೆ ಪ್ರಕ್ರಿಯೆಗಳು ನಡೆದಿವೆ. ಕಟ್ಟಡದಲ್ಲಿ ಯೋಜನಾ ಪ್ರಾಧಿಕಾರದ ಕಚೇರಿಯೂ ಕಾರ್ಯನಿರ್ವಹಣೆ ಮಾಡುವ ಸಂಬಂಧ ಕಾರ್ಯಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.

ಕಛೇರಿಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳುವ ಮೂಲಕ ಸ್ಥಳೀಯರ ನಿರೀಕ್ಷೆ ಹುಸಿಯಾಗದಂತೆ ಎಚ್ಚರವಹಿಸಲಾಗುವುದು ಎಂದರು.

ಕಾಂಗ್ರೆಸ್ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಪ್ರಕಾಶಂ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಪುಷ್ಪಲತಾ, ಕಾರ್ಮಿಕ ಘಟಕದ ಅಧ್ಯಕ್ಷ ವಿ.ಪಿ.ಶಶಿಧರ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಪ.ಪಂ. ಸದಸ್ಯ ಪ್ರಮೋದ್‍ಮುತ್ತಪ್ಪ, ಪಾರ್ವತಿ, ಪ್ರಮುಖರಾದ ಅಬ್ದುಲ್ ಖಾದರ್, ಹರೀಶ್ ಮತ್ತಿತರರು ಇದ್ದರು.

ಇದಕ್ಕೂ ಮೊದಲು ಪಟ್ಟಣದ ಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ನಂತರ ಮೆರವಣಿಗೆಯಲ್ಲಿ ಯೋಜನಾ ಪ್ರಾಧಿಕಾರದ ಕಚೇರಿಗೆ ಕಾರ್ಯಕರ್ತರೊಂದಿಗೆ ತೆರಳಿದ ಮಂಜುನಾಥ್ ಗುಂಡೂರಾವ್ ಕಚೇರಿಯಲ್ಲಿ ಅಧಿಕಾರ ಸ್ವೀಕರಿಸಿದರು.

ಬ್ರಾಹ್ಮಣ ಸಮಾಜದಿಂದ ಅಭಿನಂದನೆ

ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಬಿ.ಜಿ. ಮಂಜುನಾಥ ಗುಂಡೂರಾವ್ ಅವರಿಗೆ ಸ್ಥಳೀಯ ಬ್ರಾಹ್ಮಣರ ಕ್ಷೇಮಾಭಿವೃದ್ಧಿ ಸಂಘದಿಂದ ಅಭಿನಂದನೆ ಸಲ್ಲಿಸಲಾಯಿತು. ಸಂಘದ ಅಧ್ಯಕ್ಷ ಪಿ.ಎನ್. ವಿಜಯೇಂದ್ರ ನೇತೃತ್ವದಲ್ಲಿ ಕಚೇರಿಗೆ ತೆರಳಿದ ಕಾರ್ಯದರ್ಶಿ ಪ್ರಶಾಂತ್ ಮಯ್ಯ, ಸಹಕಾರ್ಯದರ್ಶಿ ವಿ.ಹೆಚ್. ಕುಲಕರ್ಣಿ ಹಾಗೂ ಪದಾಧಿಕಾರಿಗಳು ನೂತನ ಅಧ್ಯಕ್ಷರಿಗೆ ಶುಭಹಾರೈಸಿದರು.