ಶ್ರೀಮಂಗಲ, ಜೂ. 27 : ಶ್ರೀಮಂಗಲ ಗ್ರಾ.ಪಂ. ವ್ಯಾಪ್ತಿಯ ಕುರ್ಚಿ, ಬೀರುಗ ಗ್ರಾಮದಲ್ಲಿ ಕಾಡಾನೆ ಹಿಂಡುಗಳು ಬೀಡುಬಿಟ್ಟಿದ್ದು, ಅಪಾರ ಪ್ರಮಾಣದಲ್ಲಿ ಬೆಳೆಗಾರರ ಆಸ್ತಿ, ಪಾಸ್ತಿ ನಷ್ಟ ಮಾಡಿದೆ. ಕಾಡಾನೆ ಹಿಂಡುಗಳೊಂದಿಗೆ ಮರಿಯಾನೆ ಸಹ ಇದ್ದು ಮರಿಯೊಂದಿಗೆ ದೂರ ಸಾಗಲಾಗದೆ ಗ್ರಾಮದಲ್ಲಿಯೇ ಬೀಡುಬಿಟ್ಟಿದೆ.

ಕುರ್ಚಿ ಗ್ರಾಮದ ಅಜ್ಜಮಾಡ ಟಿ.ಚಂಗಪ್ಪ ಅವರ ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು ನೀರಾವರಿಗೆ ಬಳಸುವ 21 ಪೈಪ್‍ಗಳನ್ನು ತುಳಿದು ಹಾನಿಮಾಡಿದೆ. ಕೆರೆಯಲ್ಲಿ ಅಳವಡಿಸಿದ ಪಂಪ್‍ಸೆಟ್, ವಿದ್ಯುತ್‍ತಂತಿಗಳನ್ನು ಹಾನಿ ಮಾಡಿದ್ದು, ರಾತ್ರಿ ಸಮಯದಲ್ಲಿ ವಿದ್ಯುತ್ ಇಲ್ಲದೆ ಇದ್ದದ್ದರಿಂದ ಕಾಡಾನೆಗಳ ಪ್ರಾಣಹಾನಿ ತಪ್ಪಿದೆ. ಇದಲ್ಲದೆ, ಸುಮಾರು 50ಕ್ಕೂ ಹೆಚ್ಚು ಫಸಲು ಬರುವ ಅಡಿಕೆ ಮರ, ಕಾಫಿ ಗಿಡಗಳನ್ನು ಹಾನಿ ಮಾಡಿದೆ.

ಕಾಡಾನೆ ಹಾವಳಿಯಿಂದ ಗ್ರಾಮದೊಳಗೆ ತೋಟ ಕೆಲಸ ಮಾಡಲು ಕಾರ್ಮಿಕರು ಬಯಭೀತರಾಗಿದ್ದಾರೆ. ಗ್ರಾಮದಲ್ಲಿ ಕಾಡಾನೆ ಹಿಂಡುಗಳು ಬೀಡು ಬಿಟ್ಟಿರುವದರಿಂದ ಮಾರ್ಗದಲ್ಲಿ ಸಂಚರಿಸಲು ಗ್ರಾಮಸ್ಥರು ಆತಂಕಗೊಂಡಿದ್ದಾರೆ. 2 ದಿನದ ಹಿಂದೆ ಶ್ರೀಮಂಗಲ ವಲಯ ಅರಣ್ಯಾಧಿಕಾರಿ ಪೌಲ್ ಅಂಥೋಣಿ ಅವರ ನೇತೃತ್ವದಲ್ಲಿ ಕಾಡಾನೆಗಳನ್ನು ಕಾಡಿಗಟ್ಟುವ ಕಾರ್ಯಾಚರಣೆ ನಡೆಸಲಾಯಿತಾದರೂ ಅರಣ್ಯಕ್ಕೆ ತೆರಳದೆ ಅರಣ್ಯಾಧಿಕಾರಿ ಹಾಗೂ ಸಿಬ್ಬಂದಿಗಳನ್ನು ಅಟ್ಟಾಡಿಸುತ್ತಿದೆ. ವಾಪಾಸ್ಸು ಬರುತ್ತಿದೆ. ಈ ಬಗ್ಗೆ ಕಾಡಾನೆ ಟಾಸ್ಕ್‍ಪೋರ್ಸ್ ತಂಡ ಸಾಕಾನೆಗಳನ್ನು ತಂದು ದೊಡ್ಡ ಮಟ್ಟದಲ್ಲಿ ಕಾರ್ಯಾಚರಣೆ ನಡೆಸಬೇಕಾದ ಅಗತ್ಯತೆ ಇದೆ ಎಂದು ಅಜ್ಜಮಾಡ ಟಿ.ಚಂಗಪ್ಪ ತಿಳಿಸಿದ್ದಾರೆ.