ಸೋಮವಾರಪೇಟೆ, ಡಿ. 8: ಐಗೂರು ಗ್ರಾಮದ ಮಸೀದಿ ಒಳಗಿನ ಮುಸ್ಲಿಂರ ಪವಿತ್ರ ಗ್ರಂಥ ಕುರಾನ್ಗೆ ಬೆಂಕಿ ಹಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ 26 ದಿನಗಳ ಬಳಿಕ ಪೊಲೀಸರು ಆರೋಪಿಯೋರ್ವನನ್ನು ಬಂಧಿಸಿದ್ದು, ಇತರ 6 ಮಂದಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಐಗೂರು ಗ್ರಾಮದ ನಿವಾಸಿ ಚಾಲಕ ವೃತ್ತಿಯಲ್ಲಿರುವ ಧರಣೇಶ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿ ನ್ಯಾಯಾಧೀಶರೆದುರು ಹಾಜರುಪಡಿಸಿದ ಮೇರೆ ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಉಳಿದ 6 ಮಂದಿ ವಿಚಾರಣೆಗೆ ಒಳಗಾಗಿದ್ದವರನ್ನು ಮನೆಗೆ ಕಳುಹಿಸಿದ್ದಾರೆ.
ಪ್ರಸಕ್ತ ಸಾಲಿನ ಟಿಪ್ಪು ಜಯಂತಿ ಸಂದರ್ಭ ಐಗೂರಿನಲ್ಲಿ ಯಾವದೇ ಅಹಿತಕರ ಘಟನೆ, ಕೋಮು ಸಂಘರ್ಷ ನಡೆಯದೆ ಸಾಮಾಜಿಕ ಶಾಂತಿ ನೆಲೆಸಿದ್ದುದನ್ನು ಸಹಿಸದ ಆರೋಪಿ ಧರಣೇಶ್ ಕುರಾನ್ಗೆ ಬೆಂಕಿ ಹಚ್ಚುವ ಮೂಲಕ ಕೋಮು ಸಾಮರಸ್ಯ ಕದಡುವ ಹುನ್ನಾರದಿಂದ ಈ ಕೃತ್ಯ ಎಸಗಿದ್ದಾನೆ ಎನ್ನಲಾಗಿದ್ದು, ನ. 13ರಂದು ಈ ಪ್ರಕರಣ ಬೆಳಕಿಗೆ ಬಂದಿತ್ತು. ಜಿಲ್ಲೆಯಾದ್ಯಂತ ಮುಸ್ಲಿಂ ಸಮುದಾಯ ಸೇರಿದಂತೆ ಬಹುತೇಕ ಎಲ್ಲ ವರ್ಗದಿಂದಲೂ ತೀವ್ರ ಆಕ್ರೋಶಕ್ಕೆ ಒಳಗಾಗಿದ್ದ ಈ ಪ್ರಕರಣದ ಆರೋಪಿಗಳನ್ನು ಬಂಧಿಸುವಂತೆ ಭಾರಿ ಪ್ರತಿಭಟನೆಗಳು ನಡೆದಿದ್ದವು. ಇದೀಗ ಪೊಲೀಸರು ಪ್ರಕರಣದ ಎಳೆಯನ್ನು ಬೇಧಿಸಿದ್ದು, ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ಸದ್ಯ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಹೆಚ್ಚಿನ ವಿಚಾರಣೆಗೆ ಮತ್ತೊಮ್ಮೆ ವಶಕ್ಕೆ ಪಡೆಯುವ ಸಾಧ್ಯತೆ ಇದೆ. ಇದರೊಂದಿಗೆ ನ. 14ರಂದು ನಡೆದ ಐಗೂರು ಗ್ರಾಮದ ಆರ್.ಎಸ್.ಎಸ್. ಮುಖಂಡ, ವಕೀಲ ಪದ್ಮನಾಭ ಎಂಬವರ ಕಾರಿಗೆ ಬೆಂಕಿ ಹಚ್ಚಿದ ಘಟನೆಗೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸುವ ಸವಾಲು ಪೊಲೀಸರ ಮುಂದಿದೆ.
-ವಿಜಯ್ಹಾನಗಲ್