ಸೋಮವಾರಪೇಟೆ, ಡಿ. 29: ತಾಲೂಕನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿದ್ದು, ತಾಲೂಕಿನ ಹಲವೆಡೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಅಗತ್ಯ ಇರುವ ಕಡೆ ಕೊಳವೆ ಬಾವಿ ತೆಗೆಯಬೇಕಾಗಿದೆ. ತೋಳೂರು ಶೆಟ್ಟಳ್ಳಿಯ ಸುಭಾಷ್ ನಗರದಲ್ಲಿ ಕೊಳವೆ ಬಾವಿಯಲ್ಲಿ ನೀರು ಬರುತ್ತಿಲ್ಲ. ಈ ತಿಂಗಳ ಅಂತ್ಯದ ಒಳಗೆ ಬದಲಿ ವ್ಯವಸ್ಥೆಯನ್ನು ಮಾಡಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪ ರಾಜೇಶ್ ನೀರಾವರಿ ಇಲಾಖೆ ಅಭಿಯಂತರರಿಗೆ ಸೂಚಿಸಿದರು.

ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು. ಅಧ್ಯಕ್ಷರ ಸೂಚನೆಗೆ ಪ್ರತಿಕ್ರಿಯಿಸಿದ ಅಭಿಯಂತರ ರಮೇಶ್, ಟಾಸ್ಕ್‍ಫೋರ್ಸ್‍ನಲ್ಲಿ ಕುಡಿಯುವ ನೀರಿನ ಯೋಜನೆಗೆ 45 ಲಕ್ಷ ರೂ. ಅನುದಾನ ಬಂದಿದೆ. ಈಗಾಗಲೇ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಭೆಗೆ ತಿಳಿಸಿದರು.

ಗ್ರಾಮ ವಿಕಾಸ ಯೋಜನೆಯಡಿ ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳು ಆಯ್ಕೆಯಾಗಿದ್ದು, ಪ್ರತಿ ಪಂಚಾಯಿತಿಗೆ ತಲಾ ರೂ. 75 ಲಕ್ಷ ಬಿಡುಗಡೆಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ಅಭಿಯಂತರ ವೀರೇಂದ್ರ ಸಭೆಗೆ ತಿಳಿಸಿದರು. ನಾಕೂರು ಶಿರಂಗಾಲ, ಕಿರಗಂದೂರು, ನಿಡ್ತ, ಕೆದಕಲ್ ಪಂಚಾಯಿತಿಗಳಲ್ಲಿ ಕಾಮಗಾರಿ ನಡೆಸಲು ತಾಂತ್ರಿಕ ಅನುಮೋದನೆ ದೊರೆತಿದೆ. ಟೆಂಡರ್ ಪ್ರಕ್ರಿಯೆ ಪ್ರಗತಿಯಲಿದ್ದು, ಶೀಘ್ರವೇ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದರು. ಮುಖ್ಯಮಂತ್ರಿಗಳ ಗ್ರಾಮೀಣ ಸಡಕ್ ಯೋಜನೆಯಡಿ ರೂ. 107 ಲಕ್ಷ ಮಂಜೂರಾತಿಗೆ ಅನುಮೋದನೆ ದೊರೆತಿದ್ದು, 38 ಕಾಮಗಾರಿಗಳ ಪೈಕಿ 18 ಕಾಮಗಾರಿಗಳು ಪೂರ್ಣಗೊಂಡಿದ್ದು, 7 ಪ್ರಗತಿಯಲ್ಲಿವೆ. ಕೆರೆಗಳ ನಿರ್ವಹಣೆಗೆ ರೂ. 29 ಲಕ್ಷ ಹಣವನ್ನು ಕಾಯ್ದಿರಿಸಲಾಗಿದೆ . ಮಳೆಹಾನಿ ದುರಸ್ಥಿ ಯೋಜನೆಯಡಿ ರೂ. 25 ಲಕ್ಷ ಅನುದಾನ ಬಂದಿದೆ ಎಂದರು.

ಈಗಾಗಲೇ ಜಿಲ್ಲೆಯಿಂದ ಹೊರ ಭಾಗಕ್ಕೆ ಜಾನುವಾರುಗಳ ಸಾಗಾಣಿಕೆ ಕುರಿತು ದೂರು ಬಂದಿದ್ದು, ಇದನ್ನು ತಡೆಯಲು ಗಡಿ ಭಾಗಗಳಲ್ಲಿ ತಪಾಸಣೆ ಗೇಟ್ ಅಳವಡಿಸುವಂತೆ ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ. ತಕ್ಷಣವೇ ಇದನ್ನು ಕಾರ್ಯರೂಪಕ್ಕೆ ತರಲು ಅನುಮತಿ ಪಡೆಯಬೇಕಾಗಿದೆ ಎಂದು ಪಶು ವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಚಿಟ್ಟಿಯಪ್ಪ ಹೇಳಿದರು.

ಶಿಶು ಅಭಿವೃದ್ಧಿ ಯೋಜನಾ ಇಲಾಖೆ ವತಿಯಿಂದ ಸಮೃದ್ಧಿ ಯೋಜನೆಯಡಿ ಮಹಿಳೆಯರಿಗೆ ಬೀದಿ ಬದಿಯಲ್ಲಿ ವ್ಯಾಪಾರ ನಡೆಸಲು 10 ಸಾವಿರ ಸಹಾಯಧನ ನೀಡಲಾಗುತ್ತಿದೆ. 18 ರಿಂದ 60ರ ವಯೋಮಿತಿಯ ಮಹಿಳೆಯರಿಗೆ ಈ ಯೋಜನೆ ಅನ್ವಯಿಸಲಿದ್ದು ಜಿಲ್ಲಾ ಮಟ್ಟದಲ್ಲಿ ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವದು. ಆಯ್ಕೆಯಾದವರು ಒಮ್ಮೆ ಮಾತ್ರ ಇದರ ಪ್ರಯೋಜನವನ್ನು ಪಡೆಯಬಹುದು ಎಂದು ಇಲಾಖಾಧಿಕಾರಿ ಸಭೆಗೆ ತಿಳಿಸಿದರು.

ಸಣ್ಣ ನೀರಾವರಿ ಇಲಾಖಾ ವತಿಯಿಂದ 2016-17ನೇ ಸಾಲಿನಲ್ಲಿ ತಾಲೂಕಿನ 19 ಕೆರೆಗಳ ಪುನಶ್ಚೇತನಕ್ಕೆ 2.82ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ 8 ಕೆರೆಗಳ ಕಾಮಗಾರಿ ಮುಗಿದಿದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.

ತಾಲೂಕಿನ ರಾಜ್ಯ ಹೆದ್ದಾರಿ, ಜಿಲ್ಲಾ ಮುಖ್ಯ ರಸ್ತೆ, ಗ್ರಾಮೀಣ ರಸ್ತೆಗಳ ಬದಿಯಲ್ಲಿ ಕಾಡುಗಳನ್ನು ಕಡಿಯದೇ ಇರುವದರಿಂದ ಅಪಘಾತಗಳು ಹೆಚ್ಚು ಸಂಭವಿಸುತ್ತಿದೆ. ಇಲಾಖೆಗೆ ಹಣ ಬಿಡುಗಡೆ ಆಗುತ್ತಿದ್ದರೂ ಕಾಡುಗಳನ್ನು ತೆರವುಗೊಳಿಸಲು ಏಕೆ ಮುಂದಾಗು ತ್ತಿಲ್ಲ ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಲೋಕೋಪಯೋಗಿ ಇಲಾಖೆಯ ಅಭಿಯಂತರ ಮಹೇಂದ್ರ ಕುಮಾರ್ ಅವರಿಗೆ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರರು ಈಗಾಗಲೇ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಸಹಕಾರ ಕೋರಿದ್ದೇವೆ. ಅವರು ಸ್ಪಂದಿಸಿದರೆ ತಕ್ಷಣವೇ ಕೆಲಸ ಪ್ರಾರಂಭಿಸಲಾಗು ವದು ಎಂದರು. ರಸ್ತೆ ಬದಿಯಲ್ಲಿ ಕೆಲವು ತೋಟ ಮಾಲೀಕರು ಮರಗಳನ್ನು ಕಡಿದು ಸಂಗ್ರಹಿಸುತ್ತಿದ್ದಾರೆ. ಇನ್ನೂ ಕೆಲವೆಡೆ ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗೆ ಬೇಲಿ ಹಾಕುವ ಮೂಲಕ ಒತ್ತುವರಿ ಮಾಡುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಪಿ. ಚಂದ್ರಶೇಖರ್ ಹೇಳಿದರು.

ಸಭೆಯಲ್ಲಿ ಕಂದಾಯ ಇಲಾಖೆ ಮತ್ತು ಅಬಕಾರಿ ಇಲಾಖೆ ಅಧಿಕಾರಿಗಳು ಗೈರು ಹಾಜರಾಗಿದ್ದರು. ವೇದಿಕೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ ಉಪಸ್ಥಿತರಿದ್ದರು.