ವೀರಾಜಪೇಟೆ, ಅ. 8: ವೀರಾಜಪೇಟೆ ತಾಲೂಕಿನಲ್ಲಿ ಮಳೆ ಕುಂಠಿತಗೊಂಡಿದ್ದು, ಜೊತೆಗೆ ಸರಕಾರ ತಾಲೂಕನ್ನು ಬರಗಾಲ ಪ್ರದೇಶವೆಂದು ಘೋಷಿಸಿರು ವದರಿಂದ ಇನ್ನು ಎರಡು ತಿಂಗಳಲ್ಲಿ ವೀರಾಜಪೇಟೆ ಪಟ್ಟಣ ಕುಡಿಯುವ ನೀರಿನ ಸಮಸ್ಯೆ ಎದುರಿಸಲಿರುವದ ರಿಂದ ಕುಡಿಯುವ ನೀರಿನ ವ್ಯವಸ್ಥೆಗೆ ಆದ್ಯತೆ ಹಾಗೂ ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಕಠಿಣ ಕ್ರಮ ಕೈಗೊಳ್ಳಲು ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು. ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಮಾಸಿಕ ಸಭೆಯು ಇಂದು ಅಧ್ಯಕ್ಷ ಕೂತಂಡ ಸಚಿನ್ ಕುಟ್ಟಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಹಿರಿಯ ಸದಸ್ಯ ಎಸ್.ಎಚ್. ಮೊೈನುದ್ದೀನ್ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಸೇರಿದ ನೆಹರೂ ನಗರದಲ್ಲಿ 64 ಎಕರೆ ಪೈಸಾರಿ ಇದೆ. ಇದನ್ನು ಹೊರತುಪಡಿಸಿದಂತೆ 30 ಎಕರೆ ಪೈಸಾರಿಯಲ್ಲಿ ಕೆಲವು ನಿರ್ಗತಿಕರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಮನೆ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ಕಾನೂನು ಪ್ರಕಾರ ಅರ್ಹತಾ ದೃಢೀಕರಣ ಪತ್ರ ನೀಡಿ. ಪೈಸಾರಿಯಲ್ಲಿ ಖಾಲಿ ಇರುವ ಜಾಗವನ್ನು ಅರ್ಹ ನಿವೇಶನ ರಹಿತರಿಗೆ ಹಂಚುವಂತೆ ತಿಳಿಸಿದರು. ಇದನ್ನು ಸಭೆ ಸಮ್ಮತಿಸಿತು.

ಮಾಜಿ ಅಧ್ಯಕ್ಷೆ ಎಂ.ಕೆ. ದೇಚಮ್ಮ ಮಾತನಾಡಿ, ಪಟ್ಟಣ ಪಂಚಾಯಿತಿಗೆ ಸೇರಿದ 66 ಮಳಿಗೆಗಳಿಗೆ ಮರು ಟೆಂಡರ್‍ಗೆ ವಿರೋಧವಿದೆ. ಮಳಿಗೆಗಳು ದುಸ್ಥಿತಿಯಲ್ಲಿದ್ದರೆ ಅದನ್ನು ದುರಸ್ತಿಪಡಿಸಿ ಹಿಂದಿನ ಬಾಡಿಗೆದಾರರಿಗೆ ನವೀಕರಿಸಿ ಕೊಡಬೇಕು ಎಂದು ಹೇಳಿದಾಗ ಇದಕ್ಕೆ ಇತರ 18 ಮಂದಿ ಧ್ವನಿಗೂಡಿಸಿದರು. ಮಳಿಗೆಗಳ ಮರು ಹರಾಜಿಗೆ 19 ಮಂದಿಯ ವಿರೋಧವಿದೆ ಎಂದು ಸಭೆಯಲ್ಲಿ ನಿರ್ಣಯವನ್ನು ಅಂಗೀಕರಿಸ ಲಾಯಿತು. ಸರಕಾರದ ಸುತ್ತೋಲೆ ಹಾಗೂ ರಾಜ್ಯ ಉಚ್ಛ ನ್ಯಾಯಾಲ ಯದ ಆದೇಶದ ಮೇರೆಗೆ ಮಳಿಗೆಗಳ ಹರಾಜಿಗೆ ಪಂಚಾಯಿತಿ ಕ್ರಮ ಕೈಗೊಂಡಿತು ಎಂದು ಕೃಷ್ಣ ಪ್ರಸಾದ್ ತಿಳಿಸಿದರು.

ಹಿರಿಯ ಸದಸ್ಯ ಎಸ್.ಎಚ್. ಮತೀನ್ ಮಾತನಾಡಿ, ಪಂಚಾಯಿತಿ 66 ಅಂಗಡಿ ಮಳಿಗೆಗಳ ಕುರಿತು ಪಂಚಾಯಿತಿ ಸದಸ್ಯರಲ್ಲಿಯೇ ತನಿಖಾ ಸಮಿತಿಯನ್ನು ರಚಿಸಿ ಸಮಿತಿಯ ವರದಿಯ ಆಧಾರದ ಮೇರೆ ಮುಂದಿನ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.

ಬಸ್ಸು ನಿಲ್ದಾಣದ ಮಹಿಳಾ ತಂಗುದಾಣದಲ್ಲಿ ಮಗುವಿನ ತಾಯಂದಿರಿಗೆ ಸುರಕ್ಷಿತವಾದ ಅಲ್ಯೂಮೀನಿಯಂ ಫ್ಯಾಬ್ರಿಕೇಶನ್‍ನ ಪ್ರತ್ಯೇಕ ಕೊಠಡಿಯ ನಿರ್ಣಯವನ್ನು ಅಂಗೀಕರಿಸಿತು.

ಸದಸ್ಯ ಪಾಂಡಂಡ ರಚನ್ ಮೇದಪ್ಪ ಮಾತನಾಡಿ, ಪಟ್ಟಣದಲ್ಲಿರುವ ಹೊಟೇಲ್, ಬೇಕರಿ, ಮೆಸ್, ಕ್ಯಾಂಟೀನ್, ಮಿನಿ ಕ್ಯಾಂಟೀನ್‍ಗಳಲ್ಲಿ ಸ್ವಚ್ಛತೆ ಬಗ್ಗೆ ಪರಿಶೀಲಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ಎಲ್ಲಾ ಹೊಟೇಲ್‍ಗಳಲ್ಲಿ ನ್ಯಾಯ ಸಮ್ಮತ ದರದ ದರಪಟ್ಟಿಯನ್ನು ನಾಮಫಲಕದಲ್ಲಿ ಪ್ರಕಟಿಸಬೇಕು. ಶುಚಿತ್ವಕ್ಕೆ ಆದ್ಯತೆ ನೀಡದ ಹೊಟೇಲ್, ಬೇಕರಿಗಳ ಪರವಾನಗಿಯನ್ನು ನವೀಕರಿಸದಂತೆ ಆಗ್ರಹಿಸಿದರು. ಮಲಬಾರ್ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯನ್ನು ಎಲ್ಲರೂ ಬಳಸುವಂತಾಗಲು ಪಂಚಾಯಿತಿ ಆಡಳಿತ ಕ್ರಮ ವಹಿಸಬೇಕು. ಅನಾಥರು, ವಾರೀಸುದಾರ ರಿಲ್ಲದವರು, ಸ್ಮಶಾನದ ಸೌಲಭ್ಯ ಇಲ್ಲದವರಿಗೂ ಈ ಸ್ಮಶಾನದ ಸೌಲಭ್ಯ ಒದಗಿಸಲು ಪಂಚಾಯಿತಿ ಆಡಳಿತ ನೇರವಾಗಿ ಸ್ಪಂದಿಸುವಂತೆ ಆಗ್ರಹಿಸಿದರು. ಇದಕ್ಕೆ ಸಭೆ ಸಮ್ಮತಿಸಿ, ನಿರ್ಣಯವನ್ನು ಅಂಗೀಕರಿಸಿತು.

ಕುಡಿಯುವ ನೀರನ್ನು ಸಂರಕ್ಷಿಸಲು ಪಟ್ಟಣದ ವ್ಯಾಪ್ತಿಯಲ್ಲಿರುವ ಎಲ್ಲ್ಲಾ ಬಾವಿಗಳು, ಬೋರ್‍ವೆಲ್‍ಗಳನ್ನು ಹಾಗೂ ನೀರನ್ನು ಶೇಖರಿಸುವ ಟ್ಯಾಂಕ್‍ಗಳನ್ನು ದುರಸ್ತಿಪಡಿಸುವದು. ಪಟ್ಟಣದಲ್ಲಿ ಕೈಗೊಳ್ಳುವ ಜನಪರ ಕಾಮಗಾರಿಗಳಿಗೆ ಮೊದಲು ಕುಡಿಯುವ ನೀರಿಗೆ ಆದ್ಯತೆ ನೀಡುವದಾಗಿಯೂ, ಪಟ್ಟಣದಲ್ಲಿ ಸ್ವಚ್ಛತೆ ಕಾಪಾಡಲು ಕ್ರಮ ಕೈಗೊಳ್ಳುವದಾಗಿ ಅಧ್ಯಕ್ಷ ಸಚಿನ್ ಕುಟ್ಟಯ್ಯ ಸಭೆಗೆ ತಿಳಿಸಿದರು.

ಚರ್ಚೆಯಲ್ಲಿ ಸದಸ್ಯರುಗಳಾದ ಪಟ್ಟಡ ರಂಜಿ ಪೂಣಚ್ಚ, ರಾಫಿ, ಕೆ.ಎನ್.ವಿಶ್ವನಾಥ್, ಇ.ಸಿ.ಜೀವನ್, ಉಪಾಧ್ಯಕ್ಷೆ ತಸ್ನೀಂ ಅಕ್ತರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಬಿ.ಡಿ. ಸುನೀತಾ, ಅಭಿಯಂತರ ಎನ್.ಪಿ.ಹೇಮ್ ಕುಮಾರ್, ರೆವಿನ್ಯೂ ಇನ್ಸ್‍ಪೆಕ್ಟರ್ ಸೋಮಶೇಖರ್ ಸಿಬ್ಬಂದಿಗಳು ಹಾಜರಿದ್ದರು.