ಕುಶಾಲನಗರ, ನ. 5: ಕಾವೇರಿ ನೀರಾವರಿ ನಿಗಮ ಅಧಿಕಾರಿಗಳ ಅಸಮರ್ಪಕ ಕಾರ್ಯವೈಖರಿ ಖಂಡಿಸಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯರೊಬ್ಬರು ಏಕಾಂಗಿಯಾಗಿ ಉಪವಾಸ ಸತ್ಯಾಗ್ರಹ ಕೈಗೊಂಡು ಪ್ರತಿಭಟಿಸಿದ ಪ್ರಕರಣ ನಡೆದಿದೆ. ವಿದ್ಯುತ್ ಬಿಲ್ ಪಾವತಿಸದ ಹಿನ್ನಲೆಯಲ್ಲಿ ಹಾರಂಗಿ ಯೋಜನಾ ವೃತ್ತದ ನೌಕರರು ಮತ್ತು ಸಿಬ್ಬಂದಿಗಳ ಕಾಲನಿಗೆ ಕಳೆದ 1 ವಾರದಿಂದ ಕುಡಿವ ನೀರು ಸ್ಥಗಿತಗೊಂಡಿದ್ದು ಕೂಡಲೆ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸದಸ್ಯ ಭಾಸ್ಕರ್ ನಾಯಕ್ ಕುಶಾಲನಗರದ ಹಾರಂಗಿ ಅಣೆಕಟ್ಟು ಅಭಿಯಂತರರ ಕಚೇರಿ ಮುಂಭಾಗ ಉಪವಾಸ ಸತ್ಯಾಗ್ರಹ ನಡೆಸಿದರು.
ಹಾರಂಗಿಯಲ್ಲಿನ ನೌಕರರ ಕಾಲನಿಗಳಿಗೆ ಕುಡಿವ ನೀರು ಒದಗಿಸುವ ನೀರಿನ ಘಟಕದ ವಿದ್ಯುತ್ ಬಿಲ್ 13 ಲಕ್ಷ ರೂಗಳನ್ನು ಪಾವತಿಸದ ಕಾರಣ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಹಿನ್ನಲೆಯಲ್ಲಿ ನೀರಿನ ಪೂರೈಕೆ ಸ್ಥಗಿತಗೊಂಡಿದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಯಾವದೇ ರೀತಿಯ ಕ್ರಮಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರು ಆರೋಪಿಸಿದರು. ಹಾರಂಗಿ ಅಣೆಕಟ್ಟು ವಿಭಾಗದ ಕಾರ್ಯಪಾಲಕ ಅಭಿಯಂತರ ರಂಗಸ್ವಾಮಿ ಅವರು ಪ್ರತಿಭಟನಾಕಾರರೊಂದಿಗೆ ಸಂಪರ್ಕಿಸಿ ಸಮಸ್ಯೆ ಬಗೆಹರಿಸಿದ ಬಗ್ಗೆ ಭರವಸೆ ನೀಡಿದ ಹಿನ್ನಲೆಯಲ್ಲಿ ಪ್ರತಿಭಟನೆ ಹಿಂತೆಗೆದುಕೊಳ್ಳಲಾಯಿತು.