ಸುಂಟಿಕೊಪ್ಪ, ಆ. 22: ಮಹಿಳೆಯರು ಕೀಳರಿಮೆಯನ್ನು ಬದಿಗಿರಿಸಿ ದಿಟ್ಟತನದಿಂದ ಸಮಾಜದ ಮುಖ್ಯವಾಹಿನಿಗೆ ಸೇರಲು ಮುಂದಾಗಬೇಕೆಂದು ಜಿ.ಪಂ. ಸದಸ್ಯೆ ಕುಮುದಾ ಧರ್ಮಪ್ಪ ಕರೆ ನೀಡಿದರು.

ಇಲ್ಲಿಗೆ ಸಮೀಪದ 7ನೇ ಹೊಸಕೋಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕಾನ್‍ಬೈಲ್ ಹಾಗೂ 7ನೇ ಹೊಸಕೋಟೆ ಒಕ್ಕೂಟಗಳ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ನಾಲ್ಕು ಗೋಡೆಗಳ ಮಧ್ಯೆ ಜೀವನ ಸಾಗಿಸುತ್ತಿದ್ದ ಮಹಿಳೆಯರು ಇಂದು ಮಹಿಳಾ ಸಂಘ ಸ್ತ್ರೀ ಶಕ್ತಿ ಸಂಘ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖಾಂತರ ಅರ್ಥಿಕ ವಾಗಿ ಸಾಮಾಜಿಕವಾಗಿ ಮುಂದೆ ಬರುತ್ತಿರುವದು ಶ್ಲಾಘನೀಯ ವಾದುದು. ಈ ವಿಭಾಗದ ಮಹಿಳೆ ಯರ ಏನೇ ಸಮಸ್ಯೆ ಇದ್ದರೂ ತನ್ನನ್ನು ಸಂಪರ್ಕಿಸಿದರೆ ಜಿ.ಪಂ. ಸದಸ್ಯೆ ಯಾಗಿ ಬಗೆಹರಿಸಿಕೊಡಲಾಗುವ ದೆಂದೂ ಭರವಸೆ ನೀಡಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಪ್ರಬಂಧಕಿ ಅನುಷಾ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಸದಸ್ಯರ ಪದಗ್ರಹಣ ಕಾರ್ಯಕ್ರಮದಲ್ಲಿ ವೀಳ್ಯದೆಲೆ ನೀಡಿ ಜವಾಬ್ದಾರಿ ಹಸ್ತಾಂತರಿಸುವ ಪದ್ಧತಿ ಅನುಸರಿಸಿಕೊಂಡು ಬರುತ್ತಿದ್ದು, ವೀಳ್ಯದಲೆ ನೀಡಿಕೆ ಶುಭ ಸೂಚಕ ವಾಗಿದೆ. ರಾಜರ ಕಾಲದಲ್ಲೂ ಯುದ್ಧಕ್ಕೆ ತೆರಳುವಾಗ ವೀಳ್ಯದಲೆ ನೀಡಿ ಕಳುಹಿಸುತ್ತಿದ್ದುದನ್ನು ಇಲ್ಲಿ ಸ್ಮರಿಸ ಬಹುದಾಗಿದೆ. ಮುಂದೆ ಸಂಘದ ಜವಾಬ್ದಾರಿ ಹೊರುವವರು ಉತ್ತಮ ಕೆಲಸ ಮಾಡಲೆಂದು ಈ ಪದ್ಧತಿ ಅನುಸರಿಸಲಾಗುತ್ತದೆ ಎಂದು ಅವರು ಹೇಳಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಗ್ರಾಮೀಣಾ ಮಹಿಳೆಯರ ಅಭ್ಯುದಯ ಕ್ಕಾಗಿ ಹತ್ತು ಹಲವು ಯೋಜನೆಗಳನ್ನು ಪೂಜ್ಯ ಖಾವಂದರು ಹಾಗೂ ಮಾತೃ ಶ್ರೀ ಅಮ್ಮನವರು ಆಯೋಜಿಸಿದ್ದು, ಅದೆಲ್ಲದರ ಸದುಪಯೋಗ ಪಡಿಸಿಕೊಳ್ಳುವ ಮೂಲಕ ಸಂಘದ ಸದಸ್ಯರು ಅಭಿವೃದ್ಧಿ ಹೊಂದುವಂತೆ ನುಡಿದರು. ಸಮಾರಂಭದ ಅಧ್ಯಕ್ಷತೆಯನ್ನು 7ನೇ ಹೊಸಕೋಟೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಬಿ. ಸುಜಾತ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಸದಸ್ಯೆ ಹೆಚ್.ಟಿ. ಮಣಿ, ಪ್ರಗತಿಪರ ಕೃಷಿಕ ನಂಜಪ್ಪ, 7ನೇ ಹೊಸಕೋಟೆ ಗ್ರಾ.ಪಂ. ಉಪಾಧ್ಯಕ್ಷ ಕೆ.ಎಂ. ಮುಸ್ತಾಫ, ಎಸ್.ಆರ್. ಕೃಷ್ಣಭಟ್, ದಾಸಂಡ ರಮೇಶ್ ಚಂಗಪ್ಪ, 7ನೇ ಹೊಸಕೋಟೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಬಿ.ಕೆ. ಲೀಲಾವತಿ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯಿನಿ ಕೆ.ಎ. ಸಾವಿತ್ರಿ ಆಗಮಿಸಿ ಹಿತವಚನ ನುಡಿದರು. 2016-18 ಸಾಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಕಾನ್‍ಬೈಲ್ ಹಾಗೂ 7ನೇ ಹೊಸಕೋಟೆಗಳ ನೂತನ ಪ್ರತಿನಿಧಿಗಳಿಗೆ ವೀಳ್ಯದಲೆ ನೀಡಿ ಜವಾಬ್ದಾರಿ ಹಸ್ತಾಂತರಿಸಲಾಯಿತು.

2014-16 ಸಾಲಿನ ಕಾನ್‍ಬೈಲ್ ಪ್ರಗತಿ ಬಂಧು ಸ್ವಸಹಾಯ ಸಂಘದ ನಿರ್ಗಮಿತ ಅಧ್ಯಕ್ಷೆ ಪುಷ್ಪಾ ಹಾಗೂ 7ನೇ ಹೊಸಕೋಟೆ ಪ್ರಗತಿ ಬಂಧು ಸ್ವಸಹಾಯ ಸಂಘದ ನಿರ್ಗಮಿತ ಅಧ್ಯಕ್ಷೆ ಪುಷ್ಪಾವತಿ ತಮ್ಮ ಅಧಿಕಾರವಧಿಯಲ್ಲಿ ನಡೆಸಲಾದ ಕಾರ್ಯಕ್ರಮ ಯೋಜನೆಗಳ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸೇವಾ ಪ್ರತಿನಿಧಿ ನಿರ್ಮಲಾ ಸ್ವಾಗತಿಸಿ, ಸುಂಟಿಕೊಪ್ಪ ವಲಯ ಮೇಲ್ವಿಚಾರಕಿ ಸರಸ್ವತಿ ನಿರ್ವಹಿಸಿ, ವಂದಿಸಿದರು.