ಮೂರ್ನಾಡು, ಸೆ. 27: ಕಾಳುಮೆಣಸು ಕೃಷಿಯಲ್ಲಿ ರೋಗ ಮತ್ತು ಕೀಟ ಬಾಧೆಯ ನಿರ್ವಹಣೆ ಕುರಿತು ಕೃಷಿ ವಿಚಾರ ಸಂಕಿರಣ ಕಾರ್ಯಕ್ರಮ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸಂಭಾಗಣದಲ್ಲಿ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವೀರಾಜಪೇಟೆ, ಮಡಿಕೇರಿ, ಮೂರ್ನಾಡು ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ, ಮಡಿಕೇರಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘ ಮೂರ್ನಾಡು ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೂರ್ನಾಡು ಇವರ ಆಶ್ರಯದಲ್ಲಿ ನಡೆದ ವಿಚಾರ ಸಂಕೀರ್ಣ ಕಾರ್ಯಕ್ರಮದಲ್ಲಿ ಗೋಣಿಕೊಪ್ಪದ ಕೆ.ವಿ.ಕೆ. ತೋಟಗಾರಿಕಾ ವಿಭಾಗದ ವಿಷಯ ತಜ್ಞ ಡಾ. ವೀರೇಂದ್ರಕುಮಾರ್ ಅವರು ಕಾಳುಮೆಣಸು ಕೃಷಿಯಲ್ಲಿ ರೋಗ ಮತ್ತು ಕೀಟ ಬಾಧೆಯ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ಮಡಿಕೇರಿ ತಾಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಮತ್ತು ಪರಿವರ್ತನಾ ಸಂಘದ ಅಧ್ಯಕ್ಷ ಪೆಬ್ಬಾಟಂಡ ಪೆಮ್ಮಯ್ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಇಂತಹ ವಿಚಾರ ಸಂಕೀರ್ಣ ಕಾರ್ಯಕ್ರಮಗಳಲ್ಲಿ ಕೃಷಿಕರು ಸಕ್ರೀಯವಾಗಿ ಪಾಲ್ಗೊಂಡು ಮಾಹಿತಿಗಳನ್ನು ಪಡೆದುಕೊಂಡು ಅವುಗಳನ್ನು ಕೃಷಿಯಲ್ಲಿ ಅನುಸರಿಸಿಕೊಂಡರೆ ಉತ್ತಮ ಇಳುವರಿ ಗಳಿಸಬಹುದು ಎಂದು ಹೇಳಿದರು.
ಕಾಂತೂರು-ಮೂರ್ನಾಡು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಲ್ಲುಮುಟ್ಲು ಜಮುನಾ ಅಧ್ಯಕ್ಷತೆ ವಹಿಸಿದರು.
ವೇದಿಕೆಯಲ್ಲಿ ಕೋಡಂಬೂರು ಗ್ರಾಮದ ಕಾಫಿ ಬೆಳೆಗಾರ ಬಡುವಂಡ ಎ. ಚಿಣ್ಣಪ್ಪ, ಎಂ. ಬಾಡಗ ಗ್ರಾಮದ ಕಾಫಿ ಬೆಳೆಗಾರರಾದ ಮುಲ್ಲೇರ ಎಂ. ಕಾವೇರಪ್ಪ, ಶಂಕರಿ ಮೊಣ್ಣಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೃಷಿ ಅಧಿಕಾರಿ ಕುಶಾಲಪ್ಪ, ಮೂರ್ನಾಡು ವಲಯ ಮೇಲ್ವಿಚಾರಕಿ ಪೂರ್ಣಿಮ, ಸೇವಾಪ್ರತಿನಿಧಿ ಶಿವಾನಂದ್ ಇನ್ನಿತರರು ಹಾಜರಿದ್ದರು.