ಮಡಿಕೇರಿ, ಜ. 6: ಕಿರುಗೂರು ಊರ್ ಮಂದ್‍ನಲ್ಲಿ ಸಿ.ಎನ್.ಸಿ. ವತಿಯಿಂದ ಇತ್ತೀಚೆಗೆ ಜನಜಾಗೃತಿ ಸಭೆ ನಡೆಯಿತು. ಕೊಡಗನ್ನು ಐಎಸ್‍ಐಎಸ್ ‘ಘಝ್ವಾ-ತುರ್-ಹಿಂದ್’ ಕಾರಿಡಾರ್ ಮತ್ತು ಮಾವೋವಾದಿಗಳ ರೆಡ್ ಕಾರಿಡಾರ್ ಮಾಡುವ ಕಾರ್ಯಸೂಚಿಯ ಪಿತೂರಿ ಹೊಂದಿದ್ದು, ಇದು ಅಪಾಯಕಾರಿಯಾಗಿದೆ. ಕೊಡವ ಅಲ್ಪಸಂಖ್ಯಾತ ಬುಡಕಟ್ಟು ಕುಲವನ್ನು ನಕ್ಸಲ್ ಮಾವೋವಾದಿ ಇಸಿಸ್ ಧಾಳಿಯಿಂದ ರಕ್ಷಣೆ ಮಾಡಲು ಕೂಡಲೇ ಬುಡಕಟ್ಟು ಕುಲದ ಅಧಿಕೃತ ಮಾನ್ಯತೆಯನ್ನು ಸಂವಿಧಾನಾತ್ಮಕವಾಗಿ ನೀಡುವಂತೆ ಸಿ.ಎನ್.ಸಿ. ಅಧ್ಯಕ್ಷ ಎನ್.ಯು. ನಾಚಪ್ಪ ಆಗ್ರಹಿಸಿದ್ದಾರೆ.
ಕೊಡಗಿನಲ್ಲಿ ವಿದೇಶಿ ಭಯೋತ್ಪಾದಕ ಶಕ್ತಿಗಳು ಅಡಗುತಾಣ ಮಾಡಿಕೊಂಡು ಐಎಸ್‍ಐಎಸ್ ಜಾಲದ ಮೂಲಕ ಘಝ್ವೂ-ತುರ್ - ಹಿಂದ್ ಕಾರಿಡಾರ್ ಮತ್ತು ಮಾವೋವಾದಿಗಳು ರೆಡ್ ಕಾರಿಡಾರ್ ರಚಿಸುವ ಕಾರಸ್ಥಾನ ರೂಪಿಸಿದ್ದು, ಇವರ ಗುರಿ ಇಲ್ಲಿನ ನೈಜ ಬುಡಕಟ್ಟು ಜನಾಂಗವಾದ ಕೊಡವರನ್ನು ನಿರ್ಣಾಮ ಮಾಡುವದು ಮತ್ತು ಭಾರತದ ಅಖಂಡತೆಯನ್ನು ದ್ವಂಸ ಮಾಡುವದಾಗಿದೆ.
ಅದಕ್ಕಾಗಿ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340-342 ವಿಧಿ ಪ್ರಕಾರ ಶೆಡ್ಯೂಲ್ ಪಟ್ಟಿಯಲ್ಲಿ ಸೇರಿಸಿ ರಾಜ್ಯಾಂಗ ಖಾತರಿ ದೊರೆತಾಗ ಮಾತ್ರ ನಮಗೆ ಉಳಿಗಾಲ ಮತ್ತು ರಕ್ಷಣೆ ಎಂದು ಹೇಳಿದರು.
ಸಭೆಯಲ್ಲಿ ಕಿರಿಯಮಾಡ ಶರಿನ್, ಚಿರಿಯಪಂಡ ಮುತ್ತಣ್ಣ, ಗಾಂಡಂಗಡ ಚಿಪ್ಪುಣು, ಚೆಪ್ಪುಡಿರ ತಿಲಕ್, ಕೊಕ್ಕೆಂಗಡ ವಿಕ್ಕಿ ಚಂಗಪ್ಪ ಮತ್ತು ಕೆ.ಎಸ್ ಸುರೇಶ್ ಕುಶಾಲಪ್ಪ ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.