ನಾಪೆÇೀಕ್ಲು, ನ. 12: ಕೊಡಗು ಜಿಲ್ಲೆಯಲ್ಲಿ ‘ಗ್ರಾಮಕ್ಕೊಂದು ಭಗವತಿ, ಓಣಿಗೊಂದು ನಾಥ’ ಎಂಬ ಗಾದೆಯಂತೆ ಪ್ರತೀ ಗ್ರಾಮಗಳಲ್ಲಿಯೂ ಭಗವತಿ ದೇವಳವಿದೆ. ಆದರೆ ಎಲ್ಲವೂ ಇತಿಹಾಸವನ್ನು ಸಾರುವಂತದ್ದೇ. ಒಂದಕ್ಕೊಂದು ಪುರಾತನದ್ದೇ. ಅದಕ್ಕೆ ಸಾಕ್ಷಿ ಸಮೀಪದ ಕಿರುಂದಾಡು ಗ್ರಾಮದಲ್ಲಿರುವ ಶ್ರೀ ಭಗವತಿ ದೇವಳ. ಎದುರಿಗೆ ಕಾಣ ಸಿಗುವ 48 ಮೆಟ್ಟಿಲುಗಳನ್ನೇರಿ ವೀಕ್ಷಿಸಿದಾಗ ಎದುರಿಗೆ ಬೃಹದ್ದಾಕಾರದ ದೇವಳದ ದರ್ಶನವಾಗುತ್ತದೆ. ಕೇರಳದ ಚೋಯಿಲಿಯಿಂದ ಮೊದಲ ಬಾರಿಗೆ ಕೊಡಗಿಗೆ ಬಂದ ಭಗವತಿ ಕಿರುಂದಾಡು ಗ್ರಾಮದಲ್ಲಿ ನೆಲೆಸಿದಳು ಎಂಬ ಹೆಗ್ಗಳಿಕೆಯೂ ಈ ಕ್ಷೇತ್ರಕ್ಕಿದೆ.

ಈ ಕ್ಷೇತ್ರದ ಜೀರ್ಣೋದ್ಧಾರಕ್ಕೆ ಜ್ಯೋತಿಷ್ಯರ, ತಂತ್ರಿಗಳ ಸಲಹೆಯಂತೆ ಮುಂದಾದ ದೇವಳದ ಆಡಳಿತ ಮಂಡಳಿ, ತಕ್ಕ ಮುಖ್ಯಸ್ಥರು, ಗ್ರಾಮಸ್ಥರು ಜಿಲ್ಲೆಯಲ್ಲಿಯೇ ಪ್ರಥಮ ಬಾರಿಗೆ ವಿನೂತನ ಶೈಲಿಯಲ್ಲಿ ಜೀರ್ಣೋದ್ಧಾರ ಕಾರ್ಯಕೈಗೊಂಡಿದ್ದಾರೆ. ಮರಕಡ ಶ್ರೀ ಗುರು ಪರಾಶಕ್ತಿ ಮಠದ ಪರಮ ಪೂಜ್ಯ ಶ್ರೀ ನರೇಂದ್ರನಾಥ ಯೋಗೀಶ್ವರೇಶ್ವರ ಶ್ರೀ ಗಳ ಮಾರ್ಗದರ್ಶನದಲ್ಲಿ ನೀಲೇಶ್ವರ ಶ್ರೀ ದಾಮೋಧರ ತಂತ್ರಿಗಳ ನೇತೃತ್ವದಲ್ಲಿ ಈಗಾಗಲೇ ಕಾಮಗಾರಿ ಕಾರ್ಯ ಶೇ. 80 ರಷ್ಟು ಪೂರ್ಣಗೊಂಡಿದೆ. ಜಿಲ್ಲೆಯಲ್ಲಿಯೇ ಅಪರೂಪವಾದ ಬೃಹದಾಕಾರದ ಎರಡಂತಸ್ತಿನ ಗರ್ಭಗುಡಿ ಮತ್ತು ಮುಖ ಮಂಟಪವನ್ನು ಸಂಪೂರ್ಣವಾಗಿ ಶಿಲೆಯಿಂದ ನಿರ್ಮಿಸಲಾಗಿದೆ. ಛಾವಣಿ ಕೂಡ ಶಿಲೆಯಿಂದಲೇ ಕೂಡಿರುವದು ದೇವಳದ ಪ್ರತಿಷ್ಠೆಯನ್ನು ಹೆಚ್ಚಿಸಿದೆ.

ಗರ್ಭಗುಡಿ, ಮುಖ ಮಂಟಪ, ಗಣಪತಿ ಗುಡಿ, ಮಹಾಬಲಿ ಪೀಠ (ಬಲಿಕಲ್ಲು) ನಿರ್ಮಾಣಕ್ಕೆ ಅಂದಾಜು ಒಂದು ಕೋಟಿ ರೂ. ವೆಚ್ಚವಾಗಲಿದೆ. ಉಳಿದಂತೆ ಹೊರಾಂಗಣದ ಕಾಮಗಾರಿ ಹಾಗೂ ದೇವರ ಪ್ರತಿಷ್ಠೆ, ಬ್ರಹ್ಮಕಲಶ ಮತ್ತಿತರ ಕೆಲಸಗಳು ಸೇರಿ 1.25 ಕೋಟಿ ರೂ. ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಎರಡು ವರ್ಷಗಳ ಹಿಂದೆ ಸುಮಾರು 35 ಲಕ್ಷ ರೂ. ವೆಚ್ಚದಲ್ಲಿ ದೇವಳದ ಪೌಳಿ ಕಾಮಗಾರಿಯನ್ನು ಪೂರ್ಣಗೊಳಿಸಲಾಗಿದೆ. ದೇವಳ ಜೀರ್ಣೋದ್ಧಾರಕ್ಕಾಗಿ ಗ್ರಾಮಸ್ಥರು ಮತ್ತು ದಾನಿಗಳಿಂದ 59 ಲಕ್ಷ ರೂ. ಸಂಗ್ರಹವಾಗಿದೆ. ಸರಕಾರದಿಂದ 10 ಲಕ್ಷ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಉಳಿದಂತೆ ದೇವಳದ ಕಾಮಗಾರಿಗೆ ಆಸ್ತಿಕರ ನೆರವನ್ನು ದೇವಳದ ಆಡಳಿತ ಮಂಡಳಿ ಕೋರಿದೆ.

ಗ್ರಾಮದವರೇ ಆದ ಪ್ರಸ್ತುತ ಮಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಕೆ.ಎಸ್ ಅಧಿಕಾರಿ ಪಾಡಿಚೆಟ್ಟಿರ ಎ.ಗಣಪತಿ ಮತ್ತು ಬೀನಾ ಗಣಪತಿ ಕ್ಷೇತ್ರದ ಅಭಿವೃದ್ಧಿಗೆ ತನು - ಮನ ಧನದೊಂದಿಗೆ ಶಕ್ತಿ ಮೀರಿ ಶ್ರಮಿಸುತ್ತಿರುವದಾಗಿ ಆಡಳಿತ ಮಂಡಳಿ ತಿಳಿಸಿದೆ.

ಹಾಗೆಯೇ ಈ ದೇವಳಕ್ಕೆ ಪಳಂಗಂಡ ಕುಟುಂಬಸ್ಥರು ದೇವ ತಕ್ಕರಾಗಿದ್ದು, ಚೆರುಮಂದಂಡ, ಬಿಟ್ಟಿರ, ಅಣ್ಣಿರ ಕುಟುಂಬಸ್ಥರು ತಕ್ಕ ಮುಖ್ಯಸ್ಥರಾಗಿದ್ದಾರೆ. ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾಗಿ ಚೆರುಮಂದಂಡ ಸುರೇಶ್, ಕಾರ್ಯದರ್ಶಿಯಾಗಿ ಕುಮ್ಮಂಡ ಪೆಮ್ಮಯ್ಯ, ಅವರೊಂದಿಗೆ 7 ಪುರುಷ ಹಾಗೂ 4 ಉತ್ಸಾಹಿ ಮಹಿಳಾ ಸದಸ್ಯರು ಕಾರ್ಯನಿರ್ವಹಿಸುತ್ತಿದ್ದಾರೆ. ಚಿಂತನಾಶೀಲರು, ಗ್ರಾಮದ ಹಿರಿಯರೂ ಆದ ನಿವೃತ್ತ ಶಿಕ್ಷಕ ಬಾದುಮಂಡ ಮುತ್ತಪ್ಪ ಮತ್ತು ನಿವೃತ್ತ ಸರಕಾರಿ ವಕೀಲ ಪಳಂಗಂಡ ಸುಬ್ಬಯ್ಯ ಅವರು ಸಲಹಾ ಸಮಿತಿ ಸದಸ್ಯರಾಗಿದ್ದು, ಜೀರ್ಣೋದ್ಧಾರ ಕಾರ್ಯದಲ್ಲಿ ತಮ್ಮನ್ನು ಬಿಡುವಿಲ್ಲದೆ ತೊಡಗಿಸಿಕೊಂಡಿದ್ದಾರೆ.

ದೇವಳ ನಿರ್ಮಾಣದ ನೀಲಿ ನಕ್ಷೆಯನ್ನು ಬದಿಯಡ್ಕದ ವಾಸ್ತು ಶಿಲ್ಪಿ ರಮೇಶ್ ಕಾರಂತ್ ತಯಾರಿಸಿದ್ದು, ಗುತ್ತಿಗೆದಾರರಾಗಿ ಉಪ್ಪಿನಂಗಡಿಯ ಶಿಲ್ಪಿ ರಾಜೇಂದ್ರ ಕುಮಾರ್ ಜೀರ್ಣೋದ್ಧಾರ ಕಾರ್ಯ ನಡೆಸುತ್ತಿದ್ದಾರೆ. ದೇವಳದ ಅರ್ಚಕರಾಗಿ ಬಿ.ಆರ್.ಸುರೇಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇವಿಯ ವಿಗ್ರಹವನ್ನು ಭಾಲಾಲಯದಲ್ಲಿ ಇಟ್ಟು ಪೂಜಿಸುತ್ತಿದ್ದು, ಮುಂದಿನ ವರ್ಷದ ಏಪ್ರಿಲ್ ತಿಂಗಳಲ್ಲಿ ಬ್ರಹ್ಮಕಲಶ ನಡೆಯಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.

ಶ್ರೀ ಭಗವತಿ ವಾರ್ಷಿಕ ಉತ್ಸವ ಪ್ರತಿ ವರ್ಷ ಏಪ್ರಿಲ್ 21ರಿಂದ 25ರ ವರೆಗೆ ನಡೆಯಲಿದ್ದು, ಈ ಸಂದರ್ಭದಲ್ಲಿ ಬೇಡು ಹಬ್ಬವು ಇಲ್ಲಿ ಆಚರಣೆಯಲ್ಲಿದೆ. ದೇವಳದ ಪೂರ್ತಿ ಜೀರ್ಣೋದ್ಧಾರ ಕಾರ್ಯ ಮುಗಿದರೆ, ಬೃಹದ್ಧಾಕಾರದ ಹಾಗೂ ಪೂರ್ತಿ ಶಿಲೆಯಿಂದ ನಿರ್ಮಿಸಲ್ಪಟ್ಟ ಜಿಲ್ಲೆಯ ಏಕೈಕ ದೇವಳ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ. ಈ ದೈವಿಕ ಕಾರ್ಯದಲ್ಲಿ ಎಲ್ಲಾ ಭಗವದ್ಭಕ್ತರು ಪಾಲ್ಗೊಂಡು ದೇವಿಯ ಅನುಗ್ರಹಕ್ಕೆ ಪಾತ್ರರಾಗಬೇಕೆಂಬದು ದೇವಳದ ಆಡಳಿತ ಮಂಡಳಿ ಮತ್ತು ತಕ್ಕಮುಖ್ಯಸ್ಥರ ಕೋರಿಕೆಯಾಗಿದೆ.

-ಪಿ.ವಿ.ಪ್ರಭಾಕರ್