ಮಡಿಕೇರಿ, ಡಿ. 28: ಪ್ರಸಕ್ತ (2016-17) ಸಾಲಿನ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ ನೀಡುವ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ಅರ್ಜಿ ಸಲ್ಲಿಸುವ ಸ್ವಯಂ ಸೇವಾ ಸಂಸ್ಥೆ ಹಾಗೂ ವ್ಯಕ್ತಿಗಳು ಮಹಿಳೆಯರ ಅಭಿವೃದ್ಧಿಗಾಗಿ ಕನಿಷ್ಟ 5 ವರ್ಷಗಳ ಸೇವೆ ಸಲ್ಲಿಸಿರಬೇಕು. ಪ್ರಶಸ್ತಿಗೆ ಆಯ್ಕೆ ಮಾಡುವಾಗ ಸಂಸ್ಥೆ ಹಾಗೂ ವ್ಯಕ್ತಿ ಮಹಿಳಾ ಅಭಿವೃದ್ಧಿ ಕ್ಷೇತ್ರದಲ್ಲಿ ಕೈಗೊಂಡ ಕಾರ್ಯಕ್ರಮಗಳ ಮತ್ತು ಇತರ ಕ್ಷೇತ್ರಗಳಾದ ಕ್ರೀಡಾ, ಕಲೆ, ಸಾಹಿತ್ಯ, ಶಿಕ್ಷಣ ಕ್ಷೇತ್ರಗಳಲ್ಲೂ ವ್ಯಕ್ತಿಗಳು ಕೈಗೊಂಡ ಕಾರ್ಯಕ್ರಮಗಳ ನಿರ್ವಹಣೆಯ ಗುಣಮಟ್ಟವನ್ನು ಆಧಾರವಾಗಿಟ್ಟುಕೊಳ್ಳಲಾಗುತ್ತದೆ.

ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿಗೆ ವೇತನ ಪಡೆಯುತ್ತಿರುವ ವ್ಯಕ್ತಿಗಳು ಅರ್ಹರಾಗಿರುವದಿಲ್ಲ. ಪ್ರಶಸ್ತಿಗೆ ಬರುವ ಅರ್ಜಿಗಳ ಪರಿಶೀಲನೆ ಮತ್ತು ಆಯ್ಕೆಗೆ ಸಂಬಂಧಿಸಿದಂತೆ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಪ್ರಶಸ್ತಿಯನ್ನು ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ಅಥವಾ ಸರ್ಕಾರ ನಿಗದಿಪಡಿಸುವ ದಿನಾಂಕ ಹಾಗೂ ಸ್ಥಳಗಳಲ್ಲಿ ಏರ್ಪಡಿಸಲಾಗುವದು. ಪ್ರಶಸ್ತಿಗೆ ಆಯ್ಕೆಯಾದ ವ್ಯಕ್ತಿಗಳು ಪ್ರಶಸ್ತಿಯನ್ನು ಖುದ್ದಾಗಿ ಪಡೆಯಬೇಕು. ಹಾಗೂ ಸಂಘ ಸಂಸ್ಥೆಗಳಿಗೆ ನೀಡುವ ಪ್ರಶಸ್ತಿಯನ್ನು ಸಂಘದ ಪದಾಧಿಕಾರಿ ಗಳು ಸ್ವೀಕರಿಸಬಹುದಾಗಿದೆ.

ವೀರ ಮಹಿಳೆ ಪ್ರಶಸ್ತಿಗೆ 18 ರಿಂದ 45 ವಯೋಮಿತಿಯೊಳಗಿನ ಒಬ್ಬ ಮಹಿಳೆಯು ಆಪತ್ಕಾಲದಲ್ಲಿ ಮತ್ತೊಬ್ಬ ವ್ಯಕ್ತಿಯ ಜೀವ ಕಾಪಾಡುವಲ್ಲಿ ಅಥವಾ ಪ್ರಾಣ ರಕ್ಷಿಸುವಲ್ಲಿ ತನ್ನ ಜೀವದ ಹಂಗನ್ನು ತೊರೆದು ಸಮಯ ಪ್ರಜ್ಞೆಯಿಂದ ಧೈರ್ಯ, ಸಾಹಸದೊಂದಿಗೆ ಅಪಾಯದಲ್ಲಿರುವ ವ್ಯಕ್ತಿಯ ಜೀವ ಕಾಪಾಡುವಂತಹ ಕಾರ್ಯವನ್ನು ಮಾಡಿದ್ದಲ್ಲಿ ಅಂತಹ ಮಹಿಳೆಯನ್ನು ವೀರ ಮಹಿಳೆಯರೆಂದು ಪರಿಗಣಿಸಬಹುದು. ವೀರಮಹಿಳೆ ಪ್ರಶಸ್ತಿ ಪಡೆಯುವ ಮಹಿಳೆಯು ವಿಶೇಷ ಶೌರ್ಯ ಹಾಗೂ ಸಾಧನೆಯನ್ನು ಮಾಡಿರಬೇಕು. ಈ ಸಾಧನೆಯು ಸಾರ್ವಜನಿಕರ ಗಮನಕ್ಕೆ ಬಂದಿರಬೇಕು. ಈ ಸಾಧನೆಯು ಪ್ರಶಸ್ತಿ ಪಡೆಯುವ ಹಿಂದಿನ ವರ್ಷದ ಜನವರಿ 1 ರಿಂದ ಡಿಸೆಂಬರ್ 31 ರ ಒಳಗೆ ಇರಬೇಕು. ಈ ಪ್ರಶಸ್ತಿಗೆ ಸಂಬಂಧಿಸಿದ ಮಹಿಳೆಯ ತಂದೆ, ತಾಯಿ, ಪೋಷಕರು ಅರ್ಜಿಯನ್ನು ಸಲ್ಲಿಸಬಹುದು. ವೀರ ಮಹಿಳೆ ಪ್ರಶಸ್ತಿಗಾಗಿ ರಾಜ್ಯ ವತಿಯಿಂದ ಒಬ್ಬ ಮಹಿಳೆಗೆ ಮಾತ್ರ ರೂ.10 ಸಾವಿರಗಳ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುವದು. ಇದನ್ನು ಪ್ರತೀ ವರ್ಷ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಂದು ನೀಡಲಾಗುವದು.

ಅರ್ಜಿ ನಮೂನೆಯನ್ನು ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ಕೊಡಗು ಜಿಲ್ಲಾ ಘಟಕ, ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಚೈನ್‍ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ (ದೂರವಾಣಿ ಸಂಖ್ಯೆ:-08272-228010) ಇಲ್ಲಿಂದ ಪಡೆದು 2017ರ ಜನವರಿ 7 ರೊಳಗೆ ಕಚೇರಿಗೆ ಅಗತ್ಯ ದಾಖಲೆಗಳೊಂದಿಗೆ ಸಲ್ಲಿಸಬಹುದಾಗಿದೆ.

ಅರ್ಜಿ ನಮೂನೆ ಹಾಗೂ ಹೆಚ್ಚಿನ ವಿವರಗಳನ್ನು ಕಚೇರಿಯಿಂದ ಕಚೇರಿ ಕೆಲಸದ ವೇಳೆಯಲ್ಲಿ ಪಡೆದುಕೊಳ್ಳಬಹುದಾಗಿದೆ ಎಂದು ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ತಿಳಿಸಿದ್ದಾರೆ.