ಮಡಿಕೇರಿ, ಸೆ. 7: ಕಾವೇರಿ ಜಲ ವಿವಾದದ ವ್ಯಾಜ್ಯ ನಿವಾರಣೆ ಕಾವೇರಿ ಮಾತೆಯ ಮೂಲಕ ಸಾಧ್ಯವೇ ಹೊರತು ಇನ್ಯಾವದೇ ಮೂಲಗಳಿಂದ ಅಸಾಧ್ಯ ಎಂದು ತಲಕಾವೇರಿ ಕ್ಷೇತ್ರ ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ರಾಜ್ಯಗಳ ನಡುವೆ ತಲೆದೋರಿರುವ ಕಾವೇರಿ ವಿವಾದ ಹಿನ್ನೆಲೆಯಲ್ಲಿ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಆಶ್ರಯದಲ್ಲಿ ಬುಧವಾರ ನಡೆದ ಸಾಮೂಹಿಕ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನೀರಿಗಾಗಿ ಮಾನವರ ನಡುವೆ ಹೋರಾಟ ನಡೆಯುತ್ತಿರುವದು ಸಮಂಜಸವಲ್ಲ. ನೀರಿನ ವ್ಯಾಜ್ಯ ಸರ್ವೋಚ್ಚ ನ್ಯಾಯಾಲಯದಿಂದಲೂ ಪರಿಹಾರ ಕಾಣಲು ಅಸಾಧ್ಯ ಎಂದು ಶಂಕೆ ವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ ಕಾವೇರಿ ಮಾತೆಯ ಮೊರೆ ಹೋಗುವದು ಸೂಕ್ತ ಎಂದರು. ಕಾವೇರಿ ಸಮಸ್ಯೆ ಕಾವೇರಿಯಿಂದಲೇ ಪರಿಹಾರ ಕಾಣಬೇಕಾಗಿದೆ ಎಂದು ಅವರು ತಿಳಿಸಿದರು.
ಈ ಸಂದರ್ಭ ಕ್ಷೇತ್ರದ ಮುಖ್ಯ ಅರ್ಚಕ ರಾಮಕೃಷ್ಣ ಆಚಾರ್ ಅವರು ಮಾತನಾಡಿ, ಪ್ರಸಕ್ತ ನೀರಿನ ವ್ಯಾಜ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಗೌರವಿಸಬೇಕಾಗಿದೆ ಎಂದರಲ್ಲದೆ ಸಮಸ್ಯೆಯ ಶಾಶ್ವತ ಪರಿಹಾರಕ್ಕೆ ದೇವರ ಅನುಗ್ರಹದ ಅವಶ್ಯಕತೆ ಇರುವದಾಗಿ ತಿಳಿಸಿದರು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, ಜೀವನದಿ ಕಾವೇರಿಯ ಸಂರಕ್ಷಣೆಗೆ ಪ್ರಥಮ ಆದ್ಯತೆ ನೀಡುವದರೊಂದಿಗೆ ಪ್ರಮುಖ ನದಿಗಳನ್ನು ರಾಷ್ಟ್ರೀಕರಣಗೊಳಿಸುವದ ರೊಂದಿಗೆ ಸಮಸ್ಯೆಗೆ ಪರಿಹಾರ ಸಾಧ್ಯ ಎಂದರು. ಈ ನಿಟ್ಟಿನಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಚಿಂತನೆ ಹರಿಸಬೇಕಾಗಿದೆ ಎಂದರು.
ಆಂದೋಲನದ ಪ್ರಮುಖರು ಭಗಂಡೇಶ್ವರ ದೇವಾಲಯದಲ್ಲಿ ಪೂಜಾ ಸಂಕಲ್ಪ ನೆರವೇರಿಸುವದ ರೊಂದಿಗೆ ತಲಕಾವೇರಿ ಕ್ಷೇತ್ರದಲ್ಲಿ ವಿಶೇಷ ಪೂಜೆ ಸಲ್ಲಿಸಿ ಪ್ರಸಕ್ತ ತಲೆದೋರಿರುವ ಜಲವಿವಾದ ಸಂಕಷ್ಟ ನಿವಾರಣೆಗಾಗಿ ಪ್ರಾರ್ಥಿಸಿದರು.
ಈ ಸಂದರ್ಭ ಭಾಗಮಂಡಲ ಗಾ.ಪಂ. ಸದಸ್ಯ ರಾಜಾ ರೈ, ನದಿ ಸ್ವಚ್ಛತಾ ಆಂದೋಲನದ ಪ್ರಮುಖರಾದ ಕೆ.ಜಿ. ಮನು, ನಿಡ್ಯಮಲೆ ದಿನೇಶ್, ಎಂ.ಡಿ. ಕೃಷ್ಣಪ್ಪ, ವೈಶಾಖ್, ಬಿ.ಡಿ. ಅಣ್ಣಯ್ಯ, ವಿನೋದ್, ಲತೀಶ್ ಇದ್ದರು.