ಕುಶಾಲನಗರ, ಡಿ. 19: ಕಾವೇರಿ ನದಿ ನೀರಿನ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಕಾಳಜಿ ಹೊಂದಬೇಕು ಎಂದು ‘ಗಾಂಧಾರಿ’ ಧಾರವಾಹಿ ನಟರಾದ ಜಗನ್ ಮತ್ತು ಕಾವ್ಯಗೌಡ ಕರೆ ನೀಡಿದ್ದಾರೆ. ಅವರು ಕುಶಾಲನಗರದ ಕಾವೇರಿ ಪ್ರತಿಮೆಗೆ ಪೂಜೆ ಸಲ್ಲಿಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ಭಾರತದ ಜೀವನದಿ ಕಾವೇರಿ ಮಾಲಿನ್ಯಗೊಳ್ಳದಂತೆ ಪ್ರತಿಯೊಬ್ಬರೂ ಎಚ್ಚರವಹಿಸಬೇಕಾಗಿದೆ. ನದಿ ಸ್ವಚ್ಛತಾ ಕಾರ್ಯಕ್ರಮ ಹಮ್ಮಿಕೊಂಡಿರುವ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯೊಂದಿಗೆ ಪ್ರತಿಯೊಬ್ಬರೂ ಕೈಜೋಡಿಸಿದಲ್ಲಿ ಸ್ವಚ್ಛ ಕಾವೇರಿ ಹರಿಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸುವದಾಗಿ ಧಾರವಾಹಿ ನಿರ್ದೇಶಕರುಗಳಾದ ಉಮಾಶಂಕರ್ ಮತ್ತು ಲೋಕೇಶ್ ಕೃಷ್ಣ ತಿಳಿಸಿದ್ದಾರೆ.
ಖಾಸಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರಾದ ಎಂ.ಎನ್. ಚಂದ್ರಮೋಹನ್, ಬಬೀಂದ್ರ ಪ್ರಸಾದ್ ಸಹೋದರರು, ಎಂ.ಕೆ. ದಿನೇಶ್, ತಿಲಕ್, ವೈಶಾಖ್ ಮತ್ತಿತರರು ಕೊಪ್ಪ ಕಾವೇರಿ ಪ್ರತಿಮೆ ಬಳಿ ನಟರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು.