ಮಡಿಕೇರಿ, ಅ. 16: ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ ಸಂದರ್ಭ ಕಾವೇರಿ ನದಿ ಸ್ವಚ್ಛತಾ ಆಂದೋಲನದ ವತಿಯಿಂದ ಭಕ್ತಾದಿಗಳಿಗೆ ನದಿ ಸಂರಕ್ಷಣೆಯ ಬಗ್ಗೆ ಅರಿವು ಮತ್ತು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಭಾನುವಾರ ಸಂಜೆ ತಲಕಾವೇರಿಗೆ ತೆರಳುವ ಸಮಿತಿಯ ಕಾರ್ಯಕರ್ತರ ತಂಡ ಕ್ಷೇತ್ರದಲ್ಲಿ ನದಿ ಸಂರಕ್ಷಣೆ ನಿಟ್ಟಿನಲ್ಲಿ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ ಮನವಿ ಸಲ್ಲಿಸುವ 1 ಲಕ್ಷ ಅಂಚೆ ಕಾರ್ಡ್ ಚಳುವಳಿ ಹಿನ್ನೆಲೆಯಲ್ಲಿ ಸಾವಿರಾರು ಭಕ್ತಾದಿಗಳಿಂದ ಸಹಿ ಸಂಗ್ರಹ ಹಾಗೂ ನದಿ ಕಲುಷಿತೆ ತಪ್ಪಿಸುವ ಮಾಹಿತಿ ಒಳಗೊಂಡ ಕರಪತ್ರಗಳನ್ನು ಹಂಚುವ ಕಾರ್ಯ ನಡೆಯಲಿದೆ ಎಂದು ಸಮಿತಿಯ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿದ್ದಾರೆ. ಇದೇ ಸಂದರ್ಭ ಪವಿತ್ರ ತೀರ್ಥೋದ್ಭವ ಸಂದರ್ಭ ಕ್ಷೇತ್ರಕ್ಕೆ ಭೇಟಿ ನೀಡಲಿರುವ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎಂ. ಸೀತಾರಾಂ ಮತ್ತು ಕೊಡಗು-ಮೈಸೂರು ಲೋಕಸಭಾ ಸದಸ್ಯ ಪ್ರತಾಪ್ ಸಿಂಹ ಮತ್ತು ಜನಪ್ರತಿನಿಧಿಗಳಿಗೆ ಸಮಿತಿಯಿಂದ ನದಿ ಸಂರಕ್ಷಣೆಗೆ ಮನವಿ ಪತ್ರ ಸಲ್ಲಿಸಲಾಗುವದು ಎಂದು ತಿಳಿಸಿದ್ದಾರೆ.