ಕುಶಾಲನಗರ, ಅ. 18: ಕಾವೇರಿ ನದಿ ನೀರಿನ ವಿಚಾರದಲ್ಲಿ ರಾಜ್ಯದ ರೈತರು ಸೇರಿದಂತೆ ಜನತೆ ಸಂಕಷ್ಟ ಎದುರಿಸುತ್ತಿರುವ ವಿಚಾರ ವಿಷಾದನೀಯ ಎಂದು ಚಲನಚಿತ್ರ ನಟ ಡಾ.ಶಿವರಾಜ್‍ಕುಮಾರ್ ಹೇಳಿದರು. ಕುಶಾಲನಗರದ ಕೊಪ್ಪ ಕಾವೇರಿ ವೃತ್ತದಲ್ಲಿ ಕಾವೇರಿ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನದಿಗಳು ಕಲುಷಿತಗೊಳ್ಳುತ್ತಿದ್ದು ಸರಕಾರಗಳೇ ಇದಕ್ಕೆ ಕಾರಣ ಎಂದ ಅವರು ನದಿ ಮೂಲಗಳ ಸಂರಕ್ಷಣೆ ನಿಟ್ಟಿನಲ್ಲಿ ಕೇಂದ್ರ ಸರಕಾರ ರಾಜ್ಯ ಸರಕಾರಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಬೇಕಿದೆ. ಜೊತೆಯಲ್ಲಿ ಪರಿಸರ ಸಂರಕ್ಷಣೆಗೂ ಕೂಡ ಹೆಚ್ಚಿನ ಒತ್ತು ನೀಡಬೇಕಿದೆ ಎಂದರು.
ರಾಜ್ಯದ ನದಿಗಳ ನೀರಿನ ಹಂಚಿಕೆ ಸಂಬಂಧ ರಾಜ್ಯದ ಜನತೆಗೆ ಅನ್ಯಾಯವುಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಅವರು, ಕಾವೇರಿ ಸಮಸ್ಯೆ ಶಾಶ್ವತ ಪರಿಹಾರ ಕಾಣುವ ನಿಟ್ಟಿನಲ್ಲಿ ಸರ್ವೋಚ್ಚ ನ್ಯಾಯಾಲಯ ಕಾರ್ಯ ನಿರ್ವಹಿಸುವ ವಿಶ್ವಾಸ ವ್ಯಕ್ತಪಡಿಸಿದ ಅವರು, ಎರಡೂ ರಾಜ್ಯಗಳಿಗೆ ನದಿ ನೀರಿನ ಹಂಚಿಕೆ ಸಂಬಂಧ ಇಂದು ಪ್ರಕಟವಾಗುವ ಸುಪ್ರೀಂಕೋರ್ಟ್‍ನ ಅಂತಿಮ ನಿರ್ಧಾರ ರಾಜ್ಯಕ್ಕೆ ಪೂರಕವಾಗಿ ಬರಲಿದೆ. ಕಾವೇರಿ ವಿಚಾರದಲ್ಲಿ ರಾಜ್ಯದ ಜನಪ್ರತಿನಿಧಿಗಳು ರಾಜ್ಯದ ಹಿತದೃಷ್ಟಿಯಿಂದ ಪಕ್ಷಬೇಧ ಮರೆತು ಒಗ್ಗೂಡಿ ಕಾರ್ಯನಿರ್ವಹಿಸಬೇಕಿದೆ ಎಂದರು.
ನಟ ಯಶ್ ಮಾಧ್ಯಮಗಳಿಗೆ ಹಾಕಿದ ಸವಾಲಿನ ಬಗ್ಗೆ ಪ್ರಶ್ನಿಸಿದಾಗ, ಕಾವೇರಿ ಗಲಾಟೆ ಸಂದರ್ಭ ಕಾರ್ಯಕ್ರಮದ ನಿಮಿತ್ತ ಅಮೆರಿಕಾಗೆ ತೆರಳಿದ್ದ ಅವರ ಬಗ್ಗೆ ಕೇಳಿಬಂದ ತಪ್ಪು ಅಭಿಪ್ರಾಯದ ಬಗ್ಗೆ ಒತ್ತಡದಿಂದ ಹೇಳಿದ್ದಾರೆ ಹೊರತು ಅದನ್ನು ಸವಾಲು ಎಂದು ಪರಿಗಣಿಸಬೇಡಿ ಎಂದರು.
ಗಾಜನೂರಿನ ಆಸ್ತಿ ಹಂಚಿಕೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕುಟುಂಬದ ಜಮೀನು ಹಂಚಿಕೆ ವಿಚಾರದಲ್ಲಿ ಯಾವದೇ ರೀತಿಯ ಮನಸ್ತಾಪವಾಗಲಿ ಗೊಂದಲವಾಗಲಿ ಇಲ್ಲ. ಸಹೋದರರು ಒಂದಾಗಿಯೇ ಇದ್ದೇವೆ ಮುಂದೆಯೂ ಒಂದಾಗಿರುತ್ತೇವೆ ಎಂದು ಸ್ಪಷ್ಟಪಡಿಸಿದರು.