ಕುಶಾಲನಗರ, ಸೆ. 28: ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟ್ ರಾಜ್ಯದ ವಾಸ್ತವ ಪರಿಸ್ಥಿತಿ ಅರ್ಥೈಸಿಕೊಂಡು ಸೂಕ್ತವಾದ ಆದೇಶ ನೀಡುವ ಮೂಲಕ ರಾಜ್ಯಕ್ಕೆ ನ್ಯಾಯ ನೀಡಬೇಕೆಂದು ಆಗ್ರಹಿಸಿ ಹಾರಂಗಿ ಅಚ್ಚುಕಟ್ಟು ವ್ಯಾಪ್ತಿಯ ರೈತರ ಹೋರಾಟ ಸಮಿತಿ ವತಿಯಿಂದ ಕೊಪ್ಪ ಕಾವೇರಿ ಸೇತುವೆ ಬಳಿ ಶಾಂತಿಯುತ ಪ್ರತಿಭಟನೆ ನಡೆಯಿತು.ರೈತ ಪ್ರಮುಖ ಎಲ್.ಲಕ್ಷ್ಮಿನಾರಾಯಣ ನೇತೃತ್ವದಲ್ಲಿ ಕೊಪ್ಪ ಕಾವೇರಿ ಪ್ರತಿಮೆ ಆವರಣದಲ್ಲಿ ಸಮಿತಿಯ ಪದಾಧಿಕಾರಿಗಳು ರಾಜ್ಯದ ಮೂಕ ವೇದನೆ ಕೇಂದ್ರ ಸರಕಾರಕ್ಕೆ ಅರ್ಥವಾಗಲಿ ಎಂಬ ಆಶಯದೊಂದಿಗೆ ಬೆಳಿಗ್ಗೆಯಿಂದ ಸಂಜೆ ತನಕ ಮೌನ ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಸಮಿತಿಯ ಕಾರ್ಯದರ್ಶಿ ವಿಜಯಕುಮಾರ್, ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಈಗಾಗಲೇ ರಾಜ್ಯಕ್ಕೆ ಹಿನ್ನಡೆಯುಂಟಾಗಿದೆ. ರಾಜ್ಯದ ರೈತರ ಹಿತಾಸಕ್ತಿ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು. ಆದರೂ ಲಭ್ಯವುಳ್ಳ ನೀರಿನ ಪ್ರಮಾಣದ ಬಗ್ಗೆ ಅವಲೋಕನ ನಡೆಸುವ ಮೂಲಕ ರಾಜ್ಯದ ರೈತಾಪಿ ವರ್ಗಕ್ಕೆ ನ್ಯಾಯ ಒದಗಿಸಿಕೊಡಬೇಕಿದೆ. ಎರಡೂ ರಾಜ್ಯದ ಜಲವಿವಾದ ಸೌಹಾರ್ದಯುತವಾಗಿ ಪರಿಹಾರ ಕಾಣುವಲ್ಲಿ ಸರಕಾರಗಳು ಪ್ರಯತ್ನಿಸಬೇಕಿದೆ ಎಂದು ಅವರು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಮಿತಿಯ ಪ್ರಮುಖರಾದ ಎ.ಎಲ್.ಶಿವಪ್ಪ, ಸದಾಶಿವ, ಮಹಾದೇವ, ಲೋಕೇಶ್, ಜಗದೀಶ್ ಮತ್ತಿತರರು ಇದ್ದರು.