ಮಡಿಕೇರಿ, ಸೇ. 12: ಪ್ರಸ್ತುತ ಭುಗಿಲೆದ್ದಿರುವ ಕರ್ನಾಟಕ ತಮಿಳುನಾಡು ರಾಜ್ಯದ ನಡುವಿನ ಕಾವೇರಿ ಜಲ ವಿವಾದ ಸಂಘರ್ಷದ ತಿರುವು ಪಡೆದಿದೆ. ರಸ್ತೆ ತಡೆ, ಪ್ರತಿಭಟನೆ ಮೂಲಕ ವ್ಯಕ್ತಗೊಳ್ಳುತ್ತಿದ್ದ ಜನಾಕ್ರೋಶ ಇದೀಗ ಪರಸ್ಪರ ಹಲ್ಲೆ... ವಾಹನ ಜಖಂ, ಆಸ್ತಿ-ಪಾಸ್ತಿ ಹಾನಿಯ ಹಂತಕ್ಕೆ ತಲುಪಿರುವದು ದುರಂತವಾಗಿದೆ.ತಮಿಳುನಾಡಿನಲ್ಲಿ ಇಂದು ತಮಿಳರಿಂದ ಕನ್ನಡಿಗರ ಮೇಲೆ ಹಲ್ಲೆ ನಡೆದಿದ್ದು, ಇದು ಮಾಧ್ಯಮದಲ್ಲಿ ಭಿತ್ತರಗೊಳ್ಳುತ್ತಿದ್ದಂತೆ ಮಂಡ್ಯ ಸೇರಿದಂತೆ ಹಲವೆಡೆ ಕನ್ನಡಿಗರು ಮತ್ತೆ ಆಕ್ರೋಶಭರಿತರಾಗಿ ಬೀದಿಗಿಳಿದಿದ್ದಾರೆ. ತಮಿಳುನಾಡಿನ ವ್ಯಕ್ತಿಗಳಿಗೆ ಸೇರಿದ ಕೆಲವು ಅಂಗಡಿ - ಮನೆಗಳನ್ನು ಧ್ವಂಸಗೊಳಿಸಲಾಗಿದೆ. ಮಾತ್ರವಲ್ಲದೆ ತಮಿಳುನಾಡಿಗೆ ಸೇರಿದ ಬಸ್ - ವಾಹನಗಳನ್ನು ಆಕ್ರೋಶಿತರು ರಾಜ್ಯದಲ್ಲಿ ಜಖಂಗೊಳಿಸಿದ್ದಾರೆ.

ಕಾವೇರಿ ತಮಿಳರದ್ದು ಎಂದು ಹೇಳುವಂತೆ ಕನ್ನಡಿಗರೊಬ್ಬರನ್ನು ತಮಿಳುನಾಡಿನಲ್ಲಿ ವಿಕೃತ ಮನಸ್ಸಿನ ಕೆಲವು ತಮಿಳರು ಒತ್ತಾಯಿಸಿದ್ದಾರೆ. ಈ ಕನ್ನಡಿಗ ಯಾವದೇ ಕಾರಣಕ್ಕೂ ಕಾವೇರಿ ತಮಿಳರದ್ದು ಎಂದು ಹೇಳಲು ನಿರಾಕರಿಸಿದಾಗ ಆತನ ಮೇಲೆ ಈ ಅಂದಾಭಿಮಾನದÀ ವ್ಯಕ್ತಿಗಳು ತೀವ್ರ ಹಲ್ಲೆ ನಡೆಸಿದ್ದಾರೆ. ಇದು ಮಾಧ್ಯಮಗಳಲ್ಲಿ ಭಿತ್ತರಗೊಂಡ ಬೆನ್ನಲ್ಲೇ ಕನ್ನಡಿಗರ ಆಕ್ರೋಶ ಕರ್ನಾಟಕದಲ್ಲಿ ಸ್ಫೋಟಗೊಂಡಿದೆ. ಸಾವಿರಾರು ರೈತರು, ವಿದ್ಯಾರ್ಥಿಗಳು ಬೀದಿಗಿಳಿದಿದ್ದು, ಕಾವೇರಿ ಹೋರಾಟ ಇನ್ನಷ್ಟು ಕಾವೇರಿದ್ದು, ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಕಾವೇರಿ ತವರಲ್ಲೂ ಬರದ ಕರಿ ಛಾಯೆ

ಕಾವೇರಿ ನೀರಿಗಾಗಿ ಕರ್ನಾಟಕ ಹಾಗೂ ತಮಿಳುನಾಡುವಿನ ನಡುವೆ ಹೋರಾಟ ನಡೆಯುತ್ತಿದ್ದರೆ, ಇತ್ತ ಈ ರಾಜ್ಯಗಳಿಗೆ ನೀರುಣಿಸುವ ಕಾವೇರಿ ತವರು ಕೊಡಗು ಜಿಲ್ಲೆಯಲ್ಲೂ ಬರದ ಛಾಯೆ ಆತಂಕ ಮೂಡಿಸುತ್ತಿದೆ. ಪ್ರಸ್ತುತ ವರ್ಷ ಜಿಲ್ಲೆಯಲ್ಲಿ ಈ ತನಕ ಸರಾಸರಿ 15 ಇಂಚು ಮಳೆ ಕಡಿಮೆಯಾಗಿದೆ. ಮೇಲ್ನೋಟಕ್ಕೆ ಕೇವಲ 15 ಇಂದು ಮಳೆ ಕಡಿಮೆ ಎಂದೆನಿಸಿದರೂ, ಈ ಹಿಂದಿನ ವರ್ಷಗಳತ್ತ ಅವಲೋಕಿಸಿದರೆ, ಕೊಡಗಿನಲ್ಲಿ ಮಳೆ ತೀರಾ ಕಡಿಮೆಯಾಗಿದೆ. ಈ ಹಿಂದೆ ಜಿಲ್ಲೆಯ ಹಲವೆಡೆಗಳಲ್ಲಿ ಸುಮಾರು 300 ಇಂಚಿನಷ್ಟು ಭಾರೀ ಮಳೆ ಸುರಿದಿರುವದು, ಇನ್ನು ಕೆಲವೆಡೆಗಳಲ್ಲಿ ಸರಾಸರಿ 200 ಇಂಚಿಗೂ ಅಧಿಕ ಮಳೆಯಾಗುತ್ತಿದ್ದ ನಿದರ್ಶನಗಳಿವೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆಯ ಪ್ರಮಾಣ ವರ್ಷಂಪ್ರತಿ ಕಡಿಮೆಯಾಗುತ್ತಾ ಬರುತ್ತಿದೆ. 300 ಇಂಚು ಮಳೆ ಕಂಡಿರುವ ಅನುಭವ ಇರುವ ಜನರು ಇದೀಗ ಕೇವಲ 100 ರಿಂದ 150 ಇಂಚು ಮಳೆಯಾಗುತ್ತಿರುವದಕ್ಕೆ ಸಾಕ್ಷಿಗಳಾಗಿದ್ದಾರೆ. ಇತ್ತೀಚಿನ ವರ್ಷದ ಅಂಕಿ-ಅಂಶ ಗಮನಿಸಿದರೆ, ಮಳೆಯ ಪ್ರಮಾಣ ಕೊಡಗಿನಲ್ಲಿ ಸ್ವಲ್ಪ ಮಟ್ಟಿಗೆ ಮಾತ್ರ ಕಡಿಮೆ ಎಂದೆನಿಸಿದರೂ, ಹಿಂದಿನ ವರ್ಷಗಳ ಮಳೆಗೆ ಹೋಲಿಸಿದರೆ ಬಹಳ ಕಡಿಮೆಯಾಗಿರುವದು ಸತ್ಯ.

ಈ ಹಿಂದೆ ಕೊಡಗಿನಲ್ಲಿ ದಿನಗಟ್ಟಲೆ ಹಲವು ಪ್ರದೇಶಗಳು ಜನಾವೃತಗೊಂಡಿರುತ್ತಿದ್ದು, ಹಲವಾರು ಕಡೆಗಳಲ್ಲಿ ನಿರಂತರ ಸಂಪರ್ಕ ಕಡಿತಗೊಳ್ಳುತ್ತಿತ್ತು. ಕಳೆದ ವರ್ಷ ಹಾಗೂ ಈ ಬಾರಿ ಒಂದೆರಡು ದಿನಗಳು ಮಾತ್ರ ಅಧಿಕ ಮಳೆ ಅನುಭವವಾಗಿದ್ದು, ಬಳಿಕ ನೈಜ ಮಳೆಗಾಲವೇ ಗೋಚರಿಸಿಲ್ಲ. ಆಗಾಗ್ಗೆ ಮಳೆಯಾಗಿದ್ದರೂ, ಈ ಹಿಂದಿನ ನೈಜ ಮಳೆಗಾಲದ ಚಿತ್ರಣ ಮನಸ್ಸಿನಲ್ಲಿ ಮೂಡದಂತಾಗಿದೆ.

ಕಳೆದ ಎರಡು ವರ್ಷದಿಂದ ವೀರಾಜಪೇಟೆ ತಾಲೂಕಿನಲ್ಲಿ ಮಳೆಯ ಪ್ರಮಾಣ ತೀರಾ ಕುಂಠಿತವಾಗಿದ್ದು, ಈ ತಾಲೂಕನ್ನು ಬರಪೀಡಿತ ತಾಲೂಕೆಂದು ಘೋಷಿಸಲಾಗಿದೆ. ಸೋಮವಾರಪೇಟೆ ಹಾಗೂ ಮಡಿಕೇರಿ ತಾಲೂಕಲ್ಲೂ ಮಳೆ ಇಳಿಮುಖವಾಗಿದ್ದು, ಇಡೀ ಕೊಡಗು ಜಿಲ್ಲೆಯನ್ನು ಬರಪೀಡಿತ ಜಿಲ್ಲೆಯ ಘೋಷಿಸಬೇಕೆಂದು ಈಗಾಗಲೇ ಸರಕಾರವನ್ನು ಒತ್ತಾಯಿಸಲಾಗಿದೆ. ಜಿಲ್ಲೆಯ ನದಿ ತೊರೆಗಳಲ್ಲಿ ಈ ಹಿಂದಿನ ವರ್ಷಗಳಂತೆ ನೀರಿನ ಮಟ್ಟದಲ್ಲಿ ಹೆಚ್ಚಳವೇ ಕಂಡುಬಂದಿಲ್ಲ. ಮಳೆಗಾಲ ಮುಗಿಯುವ ಸಮಯ ಬಂದಿದ್ದರೂ, ಬಾಳಲೆ, ಕಾನೂರು ವಿಭಾಗ ಸೇರಿದಂತೆ ಕೆಲವಾರು ಕಡೆಗಳಲ್ಲಿ 30 ಇಂಚಿನಷ್ಟೂ ಮಳೆಯಾಗಿಲ್ಲವೆಂದು ಆ ವಿಭಾಗದ ಜನರು ಆತಂಕ ವ್ಯಕ್ತಪಡಿಸಿದ್ದಾರೆ. ಕಳೆದ ವರ್ಷವೂ ಇದೇ ರೀತಿಯ ಪರಿಸ್ಥಿತಿ ಎದುರಾಗಿದ್ದು, ಭವಿಷ್ಯದ ಯೋಚನೆಯಿಂದ ಜನತೆ ಆತಂಕಕ್ಕೆ ಈಡಾಗುತ್ತಿದ್ದಾರೆ. ಕಾವೇರಿಯ ಉಪನದಿ ಲಕ್ಷ್ಮಣ ತೀರ್ಥ ಬಹುತೇಕ ಬರಿದಾಗಿದೆ. ಬಿರುನಾಣಿ ಸನಿಹದ ಕಕ್ಕಟ್ಟು ಹೊಳೆಯಲ್ಲಿ ಪ್ರತಿವರ್ಷ ಹಳೆಯ ಸೇತುವೆ ಮೇಲೆ ಅದೆಷ್ಟೊ ದಿನಗಳು ನೀರು ಹರಿಯುತ್ತಿತ್ತು. ಆದರೆ ಈ ಬಾರಿ ಹಳೆಯ ಸೇತುವೆ ಮಟ್ಟಕ್ಕೆ ಒಂದು ಸಲವೂ ನೀರು ಬಂದಿಲ್ಲ ಎಂದು ಆ ವಿಭಾಗದ ಜನರು ಅಚ್ಚರಿ ವ್ಯಕ್ತಪಡಿಸುತ್ತಿದ್ದಾರೆ.

ಜಿಲ್ಲಾಡಳಿತದ ಅಂಕಿ-ಅಂಶದ ಪ್ರಕಾರ ಪ್ರಸಕ್ತ ವರ್ಷ ಮಡಿಕೇರಿ ತಾಲೂಕಿನಲ್ಲಿ ಈ ತನಕ 95 ಇಂಚು ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 116 ಇಂಚು ಮಳೆಯಾಗಿತ್ತು. ಸೋಮವಾರಪೇಟೆ ತಾಲೂಕಿನಲ್ಲಿ ಈ ವರ್ಷ 48 ಇಂಚು ಮಳೆಯಾಗಿದ್ದು, ಕಳೆದ ವರ್ಷ 54 ಇಂಚು ಮಳೆಯಾಗಿತ್ತು.

ವೀರಾಜಪೇಟೆ ತಾಲೂಕಿನಲ್ಲಿ ಕಳೆದ ವರ್ಷ ಈ ಅವಧಿಯಲ್ಲಿ 60 ಇಂಚು ಮಳೆಯಾಗಿದ್ದರೆ, ಈ ಬಾರಿ ಕೇವಲ 44 ಇಂಚು ಮಾತ್ರ ಮಳೆಯಾಗಿರುವದು ಆತಂಕಕಾರಿ ಯಾಗಿದೆ. ಮುಂದಿನ ದಿನಗಳಲ್ಲಿ ಮಳೆಯಾಗುವದು ಅನಿಶ್ಚಿತವಾಗಿದ್ದು, ಮುಂದಿನ ವರ್ಷದ ಬೇಸಿಗೆಯಲ್ಲಿ ನೀರಿಗಾಗಿ ಕೊಡಗಿನಲ್ಲೂ ಹಾಹಾಕಾರ ಕೇಳಿ ಬರುವ ಪರಿಸ್ಥಿತಿಯನ್ನು ತಳ್ಳಿ ಹಾಕುವಂತಿಲ್ಲ.