ಮಡಿಕೇರಿ, ಸೆ. 22: ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುವದಿಲ್ಲವೆಂದು ರಾಜ್ಯ ಸರ್ಕಾರ ತೆಗೆದುಕೊಂಡಿರುವ ನಿರ್ಧಾರ ಅಪ್ರಬುದ್ಧತೆಯಿಂದ ಕೂಡಿದೆ ಎಂದು ಹಿರಿಯ ವಕೀಲ ಎ.ಕೆ. ಸುಬ್ಬಯ್ಯ ಟೀಕಿಸಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನದಿ ನೀರು ಬಿಡುವದಿಲ್ಲವೆಂದು ಹೇಳುವ ಮೂಲಕ ಸುಪ್ರೀಂ ಕೋರ್ಟ್ ಆದೇಶಕ್ಕೆ ಸವಾಲು ಹಾಕಿದರೆ ಕರ್ನಾಟಕಕ್ಕೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟರು. ಕಾವೇರಿ ವಿವಾದದಲ್ಲಿ ಮಾಜಿ ಪ್ರಧಾನಿಗಳಾದ ಹೆಚ್.ಡಿ. ದೇವೇಗೌಡರು ಅತ್ಯಂತ ಪ್ರಬುದ್ಧತೆಯಿಂದ ನಡೆದುಕೊಂಡಿದ್ದಾರೆ. ಆದರೆ, ಕೊನೆಯ ಕ್ಷಣದಲ್ಲಿ ನೀರು ಬಿಡಬಾರದೆಂದು ನೀಡಿರುವ ಸಲಹೆ ತಪ್ಪು ಹೆಜ್ಜೆಯನ್ನಿಟ್ಟಂತೆ ಕಂಡು ಬರುತ್ತಿದೆ ಎಂದು ಸುಬ್ಬಯ್ಯ ಹೇಳಿದರು.

ಕರ್ನಾಟಕ ಮತ್ತು ತಮಿಳುನಾಡಿನ ನಡುವೆ ಕಾವೇರಿ ನದಿ ನೀರಿನ ವಿವಾದ ಇದೆಯೇ ಹೊರತು ಭಾಷೆ ಅಥವಾ ಇನ್ನಾವದೋ ವಿಚಾರಕ್ಕೆ ಯುದ್ಧ ನಡೆಯುತ್ತಿಲ್ಲ. ನದಿಗಳು ಒಂದೇ ರಾಜ್ಯಕ್ಕೆ ಸೀಮಿತವಾಗಿಲ್ಲ. ನದಿ ನೀರು ಹರಿದಲ್ಲೆಲ್ಲ ಅದು ಆಯಾ ರಾಜ್ಯಕ್ಕೆ ಸಂಬಂಧ ಪಡುತ್ತದೆ. ಕರ್ನಾಟಕ ಪ್ರತ್ಯೇಕ ರಾಷ್ಟ್ರವಾದರೆ ಕಾವೇರಿ ನದಿ ಅಂತರಾಷ್ಟ್ರೀಯ ನದಿ ಎಂದು ಪರಿಗಣಿಸಲ್ಪಡುತ್ತದೆ.

(ಮೊದಲ ಪುಟದಿಂದ) ಪ್ರತಿಯೊಂದು ರಾಜ್ಯಕ್ಕೂ ನದಿ ನೀರಿನ ಮೇಲೆ ಹಕ್ಕಿರುವದರಿಂದ ತಮಿಳುನಾಡಿಗೆ ನೀರು ಬಿಡುವದಿಲ್ಲ ಎನ್ನುವ ನಿರ್ಧಾರ ತಪ್ಪಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ವಿವಾದಕ್ಕೆ ಸಂಬಂಧಿಸಿದಂತೆ ಕಾನೂನಿನ ಹೋರಾಟ ಮಾಡಬೇಕೇ ಹೊರತು ಬೀದಿ ಹೋರಾಟದಿಂದ ಯಾವದೇ ಪ್ರಯೋಜನವಿಲ್ಲ. ಸುಪ್ರೀಂ ಕೋರ್ಟ್‍ನ ಆದೇಶದ ವಿರುದ್ಧ ಬೀದಿ ಹೋರಾಟ ಮಾಡಿದರೆ ಅದನ್ನು ಅರಾಜಕತೆ ಎಂದು ಪರಿಗಣಿಸಬೇಕಾಗುತ್ತದೆ. ರಾಜೀನಾಮೆ ನೀಡಿದರೆ ಅಥವಾ ಸರ್ಕಾರ ವಿಸರ್ಜಿಸಲ್ಪಟ್ಟರೆ ಸುಪ್ರೀಂ ಕೋರ್ಟ್‍ನ ಆದೇಶ ಬದಲಾಗುವದಿಲ್ಲ. ಈ ರೀತಿಯ ಕ್ರಮಗಳ ಬದಲಿಗೆ ನ್ಯಾಯಾಂಗ ಹೋರಾಟದ ಮೂಲಕ ನ್ಯಾಯ ಪಡೆಯಬೇಕೆಂದು ಸಲಹೆ ನೀಡಿದರು.

ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹಾಗೂ ವಕೀಲರು ಸಮರ್ಪಕವಾಗಿ ವಾದ ಮಂಡಿಸಿಲ್ಲ ಎನ್ನುವ ಆರೋಪ ನಿರಥರ್Àಕವಾಗಿದೆ. ಎಲ್ಲರೂ ಸೂಕ್ತ ರೀತಿಯಲ್ಲಿ ಕಾರ್ಯ ನಿರ್ವಹಿಸಿದ್ದರ ಫಲದಿಂದಾಗಿ 15 ಸಾವಿರ ಕ್ಯೂಸೆಕ್ ನೀರು ಬಿಡಬೇಕೆನ್ನುವ ಆದೇಶದಲ್ಲಿ ಪರಿಷ್ಕರಣೆ ಮಾಡಿ 12 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನ್ಯಾಯಾಲಯ ಹೇಳಿದೆ. ಇದು ರಾಜ್ಯ ಸರ್ಕಾರ ಹಾಗೂ ವಕೀಲರ ಪ್ರಯತ್ನಕ್ಕೆ ಸಿಕ್ಕಿದ ಫಲವಾಗಿದೆ.

ಈ ವಿಚಾರವನ್ನು ಜನರಿಗೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆಯೆಂದು ಟೀಕಿಸಿದ ಸುಬ್ಬಯ್ಯ, ವಿವಾದಕ್ಕೆ ಸಂಬಂಧಿಸಿದಂತೆ ರಾಜಕಾರಣ ವಿಜೃಂಭಿಸಿದೆಯೆಂದು ಆರೋಪಿಸಿದರು.

ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ನಡೆದಿವೇ ಹೊರತು ಕಾವೇರಿ ನೀರನ್ನು ಉಳಿಸಿಕೊಳ್ಳುವ ನೈಜ ಹೋರಾಟಗಳು ನಡೆಯಲಿಲ್ಲ. ರೈತರು ಮಾಡಿದ ಹೋರಾಟ ಮಾತ್ರ ನಿಜವಾದ ಹೋರಾಟವೆಂದು ಅಭಿಪ್ರಾಯಪಟ್ಟ ಸುಬ್ಬಯ್ಯ, ಸರ್ಕಾರವನ್ನು ಟೀಕಿಸುವ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಸ್ವತಃ ವಕೀಲರಾಗಿರುವದರಿಂದ ವಿವಾದದ ಜವಾಬ್ದಾರಿ ವಹಿಸಿಕೊಳ್ಳಲಿ ಎಂದು ಸವಾಲೆಸೆದರು.

ನದಿಯಲ್ಲಿ ಎಷ್ಟೇ ನೀರಿದ್ದರೂ ಅಷ್ಟೂ ನೀರಿನ ಹಕ್ಕು ಎರಡೂ ರಾಜ್ಯಗಳಿಗೆ ಅನ್ವಯವಾಗುತ್ತದೆ. ಕಾನೂನಿನ ಹೋರಾಟದ ಮೂಲಕ ಮಾತ್ರ ಈ ವಿವಾದವನ್ನು ಬಗೆಹರಿಸಬಹುದೆಂದು ಅವರು ಹೇಳಿದರು.

ರಾಜಕೀಯ ದಾಳವಾದ ಗಣಪತಿ ಪ್ರಕರಣ

ಆತ್ಮಹತ್ಯೆಗೆ ಶರಣಾದ ಡಿವೈಎಸ್‍ಪಿ ಎಂ.ಕೆ. ಗಣಪತಿ ಹಾಗೂ ಐಎಎಸ್ ಅಧಿಕಾರಿ ಡಿ.ಕೆ.ರವಿ ಅವರ ಸಾವಿನ ಪ್ರಕರಣ ಆತ್ಮಹತ್ಯೆ ಎನ್ನುವದು ಸೂರ್ಯನ ಬೆಳಕಿನಷ್ಟೆ ಸ್ಪಷ್ಟವಾಗಿದ್ದರೂ ಕೆಲವರು ರಾಜಕಾರಣಕ್ಕಾಗಿ ಈ ಪ್ರಕರಣಗಳನ್ನು ದಾಳವಾಗಿ ಬಳಸಿಕೊಂಡರು ಎಂದು ಸುಬ್ಬಯ್ಯ ಆರೋಪಿಸಿದರು. ಕೆ.ಜೆ.ಜಾರ್ಜ್ ಅವರ ರಾಜೀನಾಮೆ ಪಡೆಯುವದಕ್ಕಾಗಿ ಆರಂಭದಲ್ಲಿ ಅಬ್ಬರ ತೋರಿದ ಕೆಲವರು ಸಾಕಷ್ಟು ರಾಜಕಾರಣವನ್ನು ಮಾಡಿದರು. ಆದರೆ, ಇದೀಗ ಗಣಪತಿ ಅವರ ಪತ್ನಿಯೇ ಹೇಳುವಂತೆ ರಾಜೀನಾಮೆ ಪಡೆದ ನಂತರ ಯಾರೂ ಇಲ್ಲವೆಂದು ಮರುಕ ಪಟ್ಟುಕೊಂಡಿದ್ದಾರೆ. ರಾಜಕಾರಣಿಗಳ ರಾಜಕೀಯ ದಾಳಕ್ಕಾಗಿ ಕುಟುಂಬದವರು ಕೂಡ ತಮ್ಮನ್ನು ತೊಡಗಿಸಿಕೊಂಡದ್ದು ಸರಿಯಲ್ಲವೆಂದು ಟೀಕಿಸಿದ ಎ.ಕೆ.ಸುಬ್ಬಯ್ಯ, ಕೊನೆಯ ಗಳಿಗೆಯಲ್ಲಾದರೂ ಕುಟುಂಬಸ್ಥರಿಗೆ ವಿವೇಚನೆ ಬಂತಲ್ಲ ಎನ್ನುವದೇ ತೃಪ್ತಿಯ ವಿಚಾರ ಎಂದರು.

ಎಂ.ಕೆ. ಗಣಪತಿ ಹಾಗೂ ಡಿ.ಕೆ. ರವಿ ಅವರ ಪ್ರಕರಣದಲ್ಲಿ ಅತ್ಯಂತ ಹೆಚ್ಚಿನ ಕಾಳಜಿ ತೋರಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಕೂಡ ಕ್ಷುಲ್ಲಕ ರಾಜಕಾರಣ ಮಾಡುವದಕ್ಕಾಗಿಯೆ ಈ ರೀತಿ ನಡೆದುಕೊಂಡರೆಂದು ಸುಬ್ಬಯ್ಯ ಆರೋಪಿಸಿದರು.

ಗಣಪತಿ ಅವರು ಮಾನಸಿಕ ಒತ್ತಡದಿಂದಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಾವು ಆರಂಭದಲ್ಲೆ ಹೇಳಿದ್ದನ್ನು ಕೆಲವು ಪತ್ರಿಕೆಗಳು ಟೀಕಿಸಿ ಬರೆದಿದ್ದವು. ಅಲ್ಲದೆ ಗಣಪತಿ ಅವರ ಪತ್ನಿ ಪವನ್ ಅವರಿಗೆ ಅವಮಾನವಾಗಿದೆಯೆಂದು ಭಾರೀ ಕಾಳಜಿ ತೋರಿದ್ದವು. ಆದರೆ ಇಂದು ಪವನ್ ಅವರನ್ನು ಮರೆತಿರುವ ರಾಜಕಾರಣಿಗಳ ಬಗ್ಗೆ ಟೀಕೆಗಳು ಯಾಕೆ ವ್ಯಕ್ತವಾಗುತ್ತಿಲ್ಲವೆಂದು ಸುಬ್ಬಯ್ಯ ಪ್ರಶ್ನಿಸಿದರು.