ಬೆಂಗಳೂರು, ಸೆ. 23: ರಾಜ್ಯದ ಎಲ್ಲಾ ಅಣೆಕಟ್ಟೆಗಳಲ್ಲಿ ನೀರು ಕುಂಠಿತಗೊಂಡಿರುವದರಿಂದ ಇನ್ನು ಮುಂದಕ್ಕೆ ತಮಿಳುನಾಡಿಗೆ ನೀರು ಬಿಡದಿರಲು ವಿಧಾನಸಭೆ ವಿಶೇಷ ಅಧಿವೇಶನದಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಧ್ವನಿಮತದ ಸರ್ವಾನುಮತದ ನಿರ್ಣಯ ಕೈಗೊಳ್ಳಲಾಗಿದೆ. 2016-17ನೇ ಜಲವರ್ಷದಲ್ಲಿ ಸಂಕಷ್ಟದ ತೀವ್ರ ಗಂಭೀರ ಪರಿಸ್ಥಿತಿ ಇರುವದನ್ನು ಸದನವು ತೀವ್ರ ಆತಂಕದಿಂದ ಗಮನಿಸಿದೆ. ಆದರೆ ನೀರಿನ ಕೊರತೆಯ ಪ್ರಮಾಣವೇನು ಎಂಬದು ಈ ಋತುವಿನ ಅಂತ್ಯ ಅಂದರೆ 31.01.2017ರ ನಂತರವಷ್ಟೇ ಸ್ಪಷ್ಟವಾಗಿ ತಿಳಿಯಲಿದೆ ಎಂಬದನ್ನೂ ಈ ಸದನ ಗಮನಿಸಿದೆ.
ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಾದ ಕೃಷ್ಣರಾಜ ಸಾಗರ, ಹೇಮಾವತಿ, ಹಾರಂಗಿ ಮತ್ತು ಕಬಿನಿ ಇವುಗಳಲ್ಲಿ ನೀರಿನ ಮಟ್ಟ ಅತ್ಯಂತ ತಳಮಟ್ಟದ ಹಂತವನ್ನು ತಲಪಿರುವದನ್ನು ಮತ್ತು ಕೇವಲ 27.6 ಟಿ.ಎಂ.ಸಿ. ಮಾತ್ರ ನೀರು ಇರುವದನ್ನು ಈ ಸದನವು ಆತಂಕದಿಂದ ಪರಿಗಣಿಸಿದೆ.
ಈ ಗಂಭೀರ ಮತ್ತು ಆತಂಕಕಾರಿ ವಾಸ್ತವ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಬೆಂಗಳೂರು ಮಹಾನಗರವೂ ಸೇರಿದಂತೆ ಕಾವೇರಿ ಜಲಾನಯನ ಪ್ರದೇಶದಲ್ಲಿನ ಪಟ್ಟಣಗಳು ಹಾಗೂ ಹಳ್ಳಿಗಳ ಕುಡಿಯುವ ನೀರಿನ ಅವಶ್ಯಕತೆಗಳಿಗಾಗಿ ಮಾತ್ರ ಈಗಿರುವ ನಾಲ್ಕೂ ಜಲಾಶಯಗಳ ಒಟ್ಟಾರೆ ಜಲಸಂಗ್ರಹಣೆಯಿಂದ ನೀರನ್ನು ಬಳಸುವದು ಅತ್ಯವಶ್ಯಕ ಮತ್ತು ಅನಿವಾರ್ಯವೆಂಬದನ್ನು ಸರ್ಕಾರವು ಖಾತರಿಪಡಿಸಿಕೊಳ್ಳಬೇಕೆಂದು ಈ ಸದನ ನಿರ್ಣಯಿಸುತ್ತದೆ.
ಹಾಗಾಗಿ ಕರ್ನಾಟಕ ರಾಜ್ಯದಲ್ಲಿ ವಾಸವಾಗಿರುವ ಜನರ ಹಿತಾಸಕ್ತಿಯನ್ನು ಪರಿಗಣಿಸಿ ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಲ್ಲಿ ಹಾಲಿ ಇರುವ ಒಟ್ಟಾರೆ ಜಲಸಂಗ್ರಹಣೆಯಾಗಿರುವ ನೀರನ್ನು ಬೆಂಗಳೂರು ಮಹಾನಗರವೂ ಸೇರಿದಂತೆ, ಕಾವೇರಿ ಕೊಳ್ಳದ ಜನರಿಗೆ ಮೂಲಭೂತ ಅವಶ್ಯಕವಾದ ಕುಡಿಯುವ ನೀರನ್ನು ಒದಗಿಸುವ ಉದ್ದೇಶಕ್ಕಾಗಿ ಹಾಗೆಯೇ ಸಂಪೂರ್ಣವಾಗಿ ಉಳಿಸಿಕೊಳ್ಳಲು ಮತ್ತು ಇದಕ್ಕೆ ಹೊರತಾದ ಬೇರೆ ಯಾವದೇ ಕಾರಣಕ್ಕೂ ಒದಗಿಸಲು ಸಾಧ್ಯವಿಲ್ಲವೆಂಬ ನಿರ್ಣಯವನ್ನು ಸದನವು ಸರ್ವಾನುಮತದಿಂದ ಅಂಗೀಕರಿಸಿದೆ.