ಕುಶಾಲನಗರ, ಡಿ. 21: ಕುಶಾಲನಗರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಕಾವೇರಿ ನದಿ ಕಲುಷಿಕೆ ಪ್ರಕರಣ ಸಂಬಂಧ ಕಾವೇರಿದ ಚರ್ಚೆಯೊಂದಿಗೆ ನದಿ ಸಂರಕ್ಷಣೆಯ ನಿಟ್ಟಿನಲ್ಲಿ ಹಲವು ಯೋಜನೆಗಳನ್ನು ರೂಪಿಸಲು ಸಭೆ ನಿರ್ಣಯ ಕೈಗೊಂಡಿತು. ಜೀವನದಿ ಕಾವೇರಿಗೆ ನೇರವಾಗಿ ಕಲುಷಿತ ತ್ಯಾಜ್ಯಗಳನ್ನು ಹರಿಸುತ್ತಿರುವ ಪ್ರಕರಣಗಳ ಹಿನ್ನೆಲೆಯಲ್ಲಿ ತ್ಯಾಜ್ಯ ವಿಲೇವಾರಿಗೆ ಕ್ರಮಕೈಗೊಳ್ಳುವ ಬಗ್ಗೆ ಸದಸ್ಯರು ಸುದೀರ್ಘ ಚರ್ಚೆ ನಡೆಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಎಂ.ಎಂ. ಚರಣ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಅಂಕಿ-ಅಂಶಗಳೊಂದಿಗೆ ಬಡಾವಣೆಯಿಂದ ನದಿಗೆ ನೇರವಾಗಿ ಹರಿಯುತ್ತಿರುವ ನೀರನ್ನು ಇಂಗುಗುಂಡಿಗಳ ಮೂಲಕ ಹರಿಸಲು ಕ್ರಮಕೈಗೊಳ್ಳುವಂತೆ ತಾತ್ಕಾಲಿಕವಾಗಿ ಯೋಜನೆ ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು. ಕಟ್ಟಡ ಲಾಡ್ಜ್ಗಳಿಂದ ನದಿಗೆ ನೇರವಾಗಿ ಕಲುಷಿತ ನೀರು ಹರಿಸಿದ ಪ್ರಕರಣದ ಸಂಬಂಧ 5 ಮಂದಿ ಮೇಲೆ ಈಗಾಗಲೇ ಪೊಲೀಸ್ ಮೊಕದ್ದಮೆ ಹೂಡುವದರೊಂದಿಗೆ ಕಾನೂನು ಕ್ರಮ ಜರುಗಿಸಲಾಗಿದೆ. ಈ ಸಂಬಂಧ ಮಹಜರು ನಡೆಸಲಾಗಿದೆ ಎಂದು ಮುಖ್ಯಾಧಿಕಾರಿ ಎ.ಎಂ.ಶ್ರೀಧರ್ ಸಭೆಗೆ ತಿಳಿಸಿದರು.
(ಮೊದಲ ಪುಟದಿಂದ) ಜಿಲ್ಲಾಧಿಕಾರಿಗಳ ಸೂಚನೆಯಂತೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಕ್ರಮಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು. ಪಟ್ಟಣ ವ್ಯಾಪ್ತಿಯ ಕಾವೇರಿ ನದಿ ತಟದಲ್ಲಿ ಯಾವದೇ ರೀತಿಯ ಕಲುಷಿತವಾಗದಂತೆ ಎಚ್ಚರವಹಿಸಲು ಕ್ರಮ ಕೈಗೊಳ್ಳುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ಕುಶಾಲನಗರದಲ್ಲಿ ಕಳೆದ 2 ವರ್ಷಗಳಿಂದ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಬಹುತೇಕ ಕಳಪೆಯಾಗಿರುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಸಂದರ್ಭ ವಿಷಯ ಪ್ರಸ್ತಾಪಿಸಿದ ನಾಮನಿರ್ದೇಶಿತ ಸದಸ್ಯ ನಂಜುಂಡಸ್ವಾಮಿ, ಕಾಮಗಾರಿ ಅವೈಜ್ಞಾನಿಕವಾಗಿದ್ದು ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾಗಲಿದೆ ಎಂದಾಗ ಸಭೆಯಲ್ಲಿ ಹಾಜರಿದ್ದ ಒಳಚರಂಡಿ ಮಂಡಳಿ ಸಹಾಯಕ ಅಭಿಯಂತರ ಆನಂದ್ ಈ ಬಗ್ಗೆ ಎಚ್ಚರಿಕೆ ವಹಿಸಲಾಗುವದು ಎಂದು ಸಮಜಾಯಿಷಿಕೆ ನೀಡಿದರು. ಗುಣಮಟ್ಟದ ಕಾಮಗಾರಿ ನಡೆಸುವಂತೆ ಅಧ್ಯಕ್ಷ ಎಂ.ಎಂ. ಚರಣ್ ನಿರ್ದೇಶನ ನೀಡಿದರು. ಮುಂದಿನ 6 ತಿಂಗಳ ಒಳಗಾಗಿ ಯುಜಿಡಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಅವರು ಸಭೆಗೆ ಮಾಹಿತಿ ಒದಗಿಸಿದರು.
ಕುಶಾಲನಗರ ಪಟ್ಟಣದಲ್ಲಿ ಸಮರ್ಪಕ ವಾಹನ ಸಂಚಾರ ವ್ಯವಸ್ಥೆಗೆ ಎಲ್ಲಾ ರೀತಿಯ ಕ್ರಮಕೈಗೊಳ್ಳುವಂತೆ ಚರ್ಚಿಸಿದ ಆಡಳಿತ ಮಂಡಳಿ ಸದಸ್ಯರು, ಪಟ್ಟಣದ ರಥಬೀದಿ, ಮಾರುಕಟ್ಟೆ ರಸ್ತೆ, ಗಣಪತಿ ದೇವಸ್ಥಾನ-ಐಬಿ ರಸ್ತೆ, ಮಸೀದಿ-ಐಬಿ ರಸ್ತೆಗಳನ್ನು ಏಕಮುಖ ರಸ್ತೆಗಳನ್ನಾಗಿ ಪರಿವರ್ತಿಸಲು ಜಿಲ್ಲಾಡಳಿತದ ಅನುಮತಿ ಕೋರಲಾಗಿದೆ ಎಂದು ಸಭೆಯಲ್ಲಿ ಉಪಸ್ಥಿತರಿದ್ದ ಸಂಚಾರಿ ಪೊಲೀಸ್ ಠಾಣಾ ಅಧಿಕಾರಿಗಳು ಸಭೆಗೆ ಮಾಹಿತಿ ಒದಗಿಸಿದರು. ಪಟ್ಟಣದ ಮುಖ್ಯರಸ್ತೆಯಲ್ಲಿರುವ ಪಂಚಾಯಿತಿ ಮುಂಭಾಗದ ಶಿಥಿಲಾವಸ್ಥೆಯಲ್ಲಿರುವ ಕಟ್ಟಡದಲ್ಲಿ ಹಣ್ಣು ಹಂಪಲು ವ್ಯಾಪಾರ ನಿರ್ಬಂಧಿಸಿ ತೆರವುಗೊಳಿಸುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಕುಶಾಲನಗರದಲ್ಲಿ ನಿರ್ಮಾಣವಾಗುತ್ತಿರುವ ಕಲಾಭವನದ ಒಡೆತನವನ್ನು ಪಟ್ಟಣ ಪಂಚಾಯಿತಿ ಮತ್ತು ಕನ್ನಡ ಸಂಸ್ಕøತಿ ಇಲಾಖೆ ಜಂಟಿ ಹೆಸರಿನಲ್ಲಿ ದಾಖಲಿಸುವಂತೆ ಸಭೆಯಲ್ಲಿ ಚರ್ಚೆ ನಡೆಯಿತು. ಈ ಬಗ್ಗೆ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಅಧಿಕಾರಿಗಳು ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಯಿತು.
ಕಾವೇರಿ ಬಡಾವಣೆಯಲ್ಲಿ ನಿರ್ಮಾಣವಾಗುತ್ತಿರುವ ಕಲಾಭವನದಲ್ಲಿ ವ್ಯಕ್ತಿಯೊಬ್ಬರು ಮರದ ಪೀಠೋಪಕರಣಗಳನ್ನು ತಯಾರಿಸಿ ಮಾರಾಟ ಮಾಡುವದರೊಂದಿಗೆ ದುರ್ಬಳಕೆ ಮಾಡುತ್ತಿದ್ದ ಪ್ರಕರಣದ ಬಗ್ಗೆ ಸಭೆಯಲ್ಲಿ ಚರ್ಚೆ ಉಂಟಾಗಿ ಈ ಬಗ್ಗೆ ಎಚ್ಚರ ವಹಿಸುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು. ಸದಸ್ಯರುಗಳಾದ ಪ್ರಮೋದ್ ಮುತ್ತಪ್ಪ, ನಂಜುಂಡಸ್ವಾಮಿ ಈ ಬಗ್ಗೆ ಅಧ್ಯಕ್ಷರ ಗಮನಕ್ಕೆ ತಂದು ಇಂತಹ ದುರ್ಬಳಕೆಗೆ ಅವಕಾಶ ಕಲ್ಪಿಸಬಾರದೆಂದು ಆಗ್ರಹಿಸಿದರು.
ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಖಾಸಗಿ ಬಸ್ ನಿಲ್ದಾಣಕ್ಕೆ ರೂ. 25 ಲಕ್ಷಗಳ ಅನುದಾನ, ಕುಡಿಯುವ ನೀರಿನ ಸರಬರಾಜಿಗೆ 30 ಲಕ್ಷ ರೂಗಳನ್ನು ಮೀಸಲಿಡುವದು, ಪಟ್ಟಣದಲ್ಲಿ ವ್ಯಾಪಾರೋದ್ಯಮಿ ಪರವಾನಗಿ ಪಡೆಯುವದು ಕಡ್ಡಾಯ. ಇಲ್ಲದಿದ್ದಲ್ಲಿ ಗಡುವು ನೀಡಿ ಮಳಿಗೆಗೆ ಬೀಗ ಜಡಿಯುವ ಬಗ್ಗೆ ಸಭೆ ನಿರ್ಣಯ ಕೈಗೊಂಡಿತು. ಈ ಸಂಬಂಧ ಪಟ್ಟಣದಲ್ಲಿ ಈ ತಿಂಗಳ 27 ರಂದು ಅಧ್ಯಕ್ಷರು, ಸದಸ್ಯರಾದಿಯಾಗಿ ಅಧಿಕಾರಿಗಳೊಂದಿಗೆ ಪ್ರತೀ ಅಂಗಡಿ ಮುಂಗಟ್ಟುಗಳಿಗೆ ಭೇಟಿ ನೀಡಿ ಪರವಾನಗಿ ಶುಲ್ಕ ಮಾಡುವದಾಗಿ ಅಧ್ಯಕ್ಷರು ಸಭೆಯಲ್ಲಿ ತಿಳಿಸಿದರು. ಕುಶಾಲನಗರ ಪಟ್ಟಣ ಪಂಚಾಯಿತಿಗೆ ನೂತನವಾಗಿ ರೂ.5 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಕಳುಹಿಸಲು ಸಭೆ ಅಂಗೀಕಾರ ನೀಡಿತು.
ಸಭೆಯಲ್ಲಿ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಸ್ಥಾಯಿ ಸಮಿತಿ ಅಧ್ಯಕ್ಷ ಮಧುಸೂದನ್, ಸುರಯ್ಯಭಾನು ಸದಸ್ಯರುಗಳಾದ ಡಿ.ಕೆ.ತಿಮ್ಮಪ್ಪ, ಹೆಚ್.ಜೆ. ಕರಿಯಪ್ಪ, ಪ್ರಮೋದ್ ಮುತ್ತಪ್ಪ, ರೇಣುಕಾ, ಹೆಚ್.ಕೆ. ಪಾರ್ವತಿ, ಹೆಚ್.ಡಿ. ಚಂದ್ರು, ನಂಜುಂಡಸ್ವಾಮಿ, ಶಿವಶಂಕರ್, ಫಜಲುಲ್ಲಾ, ರಶ್ಮಿ ಅಮೃತ್, ಕವಿತಾ ಮಂಜು, ಆರೋಗ್ಯಾಧಿಕಾರಿ ಲಿಂಗರಾಜು ಇದ್ದರು.