ಮಡಿಕೇರಿ, ಜೂ. 15: ಅಖಿಲ ಭಾರತ ಸನ್ಯಾಸಿ ಸಂಘ, ಅಣ್ಣೈ ಕಾವೇರಿ ರಿವರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಕಾವೇರಿ ನದಿ ಸ್ವಚ್ಛತೆ ಕುರಿತು ತಲಕಾವೇರಿಯಿಂದ ತಮಿಳುನಾಡಿನ ನಾಗಪಟ್ಟಣಂವರೆಗೆ ಹಮ್ಮಿಕೊಂಡಿರುವ ಜನಜಾಗೃತಿ ಅಭಿಯಾನದ ಪಾದಯಾತ್ರೆಗೆ ಚಾಲನೆ ದೊರೆಯಿತು.

ಕಾವೇರಿ ನದಿ ಉಗಮ ಸ್ಥಳ ತಲಕಾವೇರಿಯಲ್ಲಿ ಸಾಧು ಸಂತರು, ಗಣ್ಯರು, ಅತಿಥಿಗಳು ವಿಶೇಷ ಪೂಜೆ ಸಲ್ಲಿಸಿದ ಬಳಿಕ ‘ಕಾವೇರಿ ನದಿ ಉಳಿಸಿ, ಕಾವೇರಿ ನದಿ ಸಂರಕ್ಷಿಸಿ’ ಎಂಬ ಸ್ಟಿಕ್ಕರ್‍ನ್ನು ಬಿಡುಗಡೆ ಮಾಡಿ ಪಾದಯಾತ್ರೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭ ಮಾತನಾಡಿದ ಅಖಿಲ ಭಾರತ ಸನ್ಯಾಸಿ ಸಂಘದ ಜಂಟಿ ಕಾರ್ಯದರ್ಶಿ ರಮಾನಂದ ಪುರಿ ಸ್ವಾಮೀಜಿ ಅವರು ದಕ್ಷಿಣ ಭಾರತದ ಪವಿತ್ರ ನದಿಗಳಲ್ಲಿ ಒಂದಾದ ಕಾವೇರಿ ನದಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡು ಜನಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.

ಉತ್ತರ ಭಾರತದ ಪ್ರಮುಖ ನದಿಯಾದ ಗಂಗೆಯನ್ನು ಶುದ್ಧೀಕರಣಗೊಳಿಸಲು ಸರ್ಕಾರ ಮುಂದಾಗಿದೆ. ಅದೇ ರೀತಿ ಕಾವೇರಿ ನದಿ ಸ್ವಚ್ಛತೆಗೂ ಗಮನಹರಿಸಬೇಕಿದೆ. ಆ ನಿಟ್ಟಿನಲ್ಲಿ ಗಮನ ಸೆಳೆಯುವದರ ಜತೆಗೆ, ಜನರಲ್ಲಿ ಕಾವೇರಿ ನದಿಯ ಪಾವಿತ್ರ್ಯತೆ ಬಗ್ಗೆ ಅರಿವು ಮೂಡಿಸಲು ಪಾದಯಾತ್ರೆ ಮೂಲಕ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಮುಖರಾದ ಟಿ.ಪಿ. ರಮೇಶ್ ಮಾತನಾಡಿ, ನಾಡಿನ ಜೀವನದಿ ಯಾದ ಕಾವೇರಿಯು ತಲಕಾವೇರಿ ಯಲ್ಲಿ ಹುಟ್ಟಿ ಕರ್ನಾಟಕ, ತಮಿಳುನಾಡು ರಾಜ್ಯಗಳ ಮೂಲಕ ಸುಮಾರು 700 ಕಿ.ಮೀ.ವರೆಗೆ ಹರಿಯುತ್ತಿದೆ. ಕಾವೇರಿ ನದಿ ಪಾತ್ರದಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ಅಭಿಯಾನ ಹಮ್ಮಿಕೊಂಡಿರುವದು ಶ್ಲಾಘನೀಯ ಎಂದು ಹೇಳಿದರು.

ಎ.ಕೆ. ಮನು ಮುತ್ತಪ್ಪ ಮಾತನಾಡಿ, ಹಲವು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಕಾವೇರಿ ನದಿ ನೀರಿನ ಮಹತ್ವದ ಬಗ್ಗೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ. ಕಾವೇರಿ ನದಿ ಪಾವಿತ್ರ್ಯತೆ ಕಾಪಾಡಬೇಕು. ಆ ದಿಸೆಯಲ್ಲಿ ಪ್ರತಿಯೊಬ್ಬರೂ ಕೈಜೋಡಿಸುವಂತಾಗ ಬೇಕು ಎಂದು ಮನವಿ ಮಾಡಿದರು.

ಸಂಕೇತ್ ಪೂವಯ್ಯ ಮಾತನಾಡಿ, ಕಾವೇರಿ ನದಿಯಲ್ಲಿ ಯಾವದೇ ರೀತಿಯ ಅಶುದ್ಧತೆಗೆ ಅವಕಾಶ ನೀಡಬಾರದು. ಪ್ರತಿನಿತ್ಯ ಬಳಸುವ ನದಿಯ ನೀರು ಶುದ್ಧವಾಗಿರಲು ಸ್ವಚ್ಛತೆ ಕಡೆ ಆದ್ಯತೆ ನೀಡಬೇಕಿದೆ ಎಂದು ಕೋರಿದರು.

ಚಿ.ನಾ. ಸೋಮೇಶ್ ಮಾತನಾಡಿ, ಕಾವೇರಿ ನದಿ ಸ್ವಚ್ಛತೆ ಅಭಿಯಾನ ಸಂಬಂಧ ಗ್ರಾಮ ಗ್ರಾಮಗಳಿಗೆ ತೆರಳಿ ಜಾಗೃತಿ ಮೂಡಿಸಲಾಗುತ್ತದೆ. ಗ್ರಾಮ ಗ್ರಾಮಗಳಲ್ಲಿ ಸಂತರ ಸಂಕಲ್ಪ ಮತ್ತು ಸಾರ್ವಜನಿಕರ ಸದಾಶಯದಿಂದ ಜಾಗೃತಿ ಮೂಡಿಸಲಾಗುತ್ತದೆ ಎಂದು ಹೇಳಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಮಾತನಾಡಿ, 60 ದಿನಗಳ ಕಾಲ ಪಾದಯಾತ್ರೆ ಮೂಲಕ ಅಭಿಯಾನ ಹಮ್ಮಿಕೊಳ್ಳಲಾಗಿದೆ. 5 ವರ್ಷಗಳಿಂದ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಸಹಕಾರದಿಂದ ಕಾವೇರಿ ನದಿ ಸ್ವಚ್ಛತೆ ಬಗ್ಗೆ ಜನಜಾಗೃತಿ ಅಭಿಯಾನವನ್ನು ಆಯೋಜಿಸುತ್ತ ಬರಲಾಗಿದೆ ಎಂದರು.

ಜಿಲ್ಲೆಯಲ್ಲಿ ತಾ. 16 ರಂದು (ಇಂದು) ಬಲ್ಲಮಾವಟಿ, ನೆಲಜಿ, ನಾಪೋಕ್ಲು, ತಾ. 17 ರಂದು ಬಲಮುರಿ, ತಾ. 18 ರಂದು ಕೊಂಡಂಗೇರಿ, ನೆಲ್ಲಿಹುದಿಕೇರಿ, ತಾ. 19ರಂದು ನಂಜರಾಯಪಟ್ಟಣ, ದುಬಾರೆ, ತಾ. 20 ರಂದು ಗುಡ್ಡೆಹೊಸೂರು, ಕುಶಾಲನಗರ, ಕಣಿವೆ, ತಾ. 21 ರಂದು ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೊಣನೂರು, ರಾಮನಾಥಪುರದಲ್ಲಿ ಜನಜಾಗೃತಿ ಅಭಿಯಾನ ನಡೆಯಲಿದೆ ಎಂದು ತಿಳಿಸಿದರು.

ತಕ್ಕ ಮುಖ್ಯಸ್ಥರಾದ ಕೋಡಿ ಮೋಟಯ್ಯ ಅವರು ವಿಶೇಷ ಪೂಜಾ ಸಂದರ್ಭ ನಾಡಿನಲ್ಲಿ ಉತ್ತಮ ಮಳೆಯಾಗಿ, ಎಲ್ಲರಲ್ಲೂ ಸಮೃದ್ಧಿ ತರುವಂತಾಗಲಿ ಎಂದು ಅವರು ಪ್ರಾರ್ಥಿಸಿದರು. ಥೇನಿಯ ಓಂಕಾರನಂದ ಆಶ್ರಮದ ಅಭಯಾನಂದಪುರಿ ಸ್ವಾಮೀಜಿ, ದಿಂಡುಗಲ್ಲಿನ ಸಿರುಮಲೆ ಬಾಲಯೋಗಿ ಸ್ವಾಮೀಜಿ, ಕಾರ್ಯದರ್ಶಿ ಜಿ.ಜೆ. ಅರುಳ್ ವೀರಮಣಿ, ಬಿ.ಬಿ. ಭಾರತೀಶ್, ಭಾಸ್ಕರ್ ನಾಯಕ್, ಡಿ.ಆರ್. ಸೋಮಶೇಖರ, ಬಿ.ಎಂ. ಲತೀಶ್, ಕುಮಾರ ಸ್ವಾಮಿ, ಕೆ.ಜಿ. ಮನು, ನಿಡ್ಯಮಲೆ ದಿನೇಶ್ ಮತ್ತಿತರರು ಇದ್ದರು.