ಮಡಿಕೇರಿ, ಅ. 19: ಅಬ್ಬಬ್ಬಾ ಕೊಡಗಿನ ಮಳೆಗಾಲ ಎಂದರೆ ಊಹಿಸಲು ಅಸಾಧ್ಯವೆನಿಸುತ್ತಿದ್ದ ಕಾಲ ಈ ಹಿಂದೆ ಇತ್ತು. ಆದರೆ ಇದೀಗ ಎಲ್ಲವೂ ಬುಡಮೇಲಾಗುತ್ತಿದೆ. ವಾರ್ಷಿಕ 250ರಿಂದ 300 ಇಂಚು ಮಳೆ ಕಂಡ ಹಿರಿ ತಲೆಗಳು ಇದೀಗ 100 ಇಂಚಿಗೂ ಕಡಿಮೆಯಾಗಿರುವ ಮಳೆಗಾಲವನ್ನು ಕಂಡು ಮೂಗಿನ ಮೇಲೆ ಬೆರಳಿಡುವಂತಾಗಿದೆ. ಕೊಡಗು ಈ ಹಿಂದಿನ ಕೊಡಗಾಗಿ ಉಳಿದಿಲ್ಲ ಎನ್ನುವ ಹಿರಿಯರ, ಅನುಭವಿಗಳ ಮಾಹಿತಿ ಪೂರಕವೆಂಬಂತೆ ಕೊಡಗಿನ ಮಳೆಗಾಲ ವರ್ಷದಿಂದ ವರ್ಷಕ್ಕೆ ಕ್ಷೀಣಗೊಳ್ಳುತ್ತಿರುವದು ಭವಿಷ್ಯದ ದಿನಗಳನ್ನು ಊಹಿಸಿದರೆ ನಿಜಕ್ಕೂ ಆತಂಕಕಾರಿಯಾಗುತ್ತಿದೆ.

ಈ ಹಿಂದೆ ಒಂದು ಕಾಲವಿತ್ತು. ವೇಳಾಪಟ್ಟಿ ನಿಗಧಿಪಡಿಸಿದ ರೀತಿಯಲ್ಲಿ ಜೂನ್ 1 ಆಗಮಿಸಿತೆಂದರೆ ಮಳೆಗಾಲ ಶುರು. ಜೂನ್‍ನಲ್ಲಿ ಮುಂಗಾರು ಆರಂಭಗೊಂಡರೆ ಕೈಲು ಮುಹೂರ್ತ ಹಬ್ಬದ ತನಕವೂ ಮಳೆಗಾಲ ಮುಂದುವರಿಯುತ್ತಿತ್ತು. ಧೋ ಎಂದು ಸುರಿಯುವ ನಿರಂತರ ಮಳೆಯಿಂದಾಗಿ ಜಿಲ್ಲೆಯಲ್ಲಿ ಬಹುತೇಕ ಮೂರು ತಿಂಗಳು ಸೂರ್ಯನ ದರ್ಶನವೇ ಆಗುತ್ತಿರಲಿಲ್ಲ. ಈ ಅನುಭವ ಈಗಿನ ಪುಟ್ಟ ಮಕ್ಕಳನ್ನು (ಮೊದಲ ಪುಟದಿಂದ) ಹೊರತುಪಡಿಸಿದರೆ ಬಹುತೇಕ ಎಲ್ಲರಿಗೂ ಇದೆ. ಆದರೆ ಪ್ರಸ್ತುತದ ದಿನಗಳಲ್ಲಿ ಏನಾಗುತ್ತಿದೆ..., ಮಳೆಗಾಲವೋ ಅಥವಾ ಬೇಸಿಗೆಯೋ ಎಂಬಂತಹ ವಾತಾವರಣ ಸಾಧಾರಣವೆನಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಒಂದಲ್ಲಾ ಒಂದು ಬದಲಾವಣೆ ಗೋಚರಿಸುತ್ತಿದೆ. ರಾಜ್ಯಕ್ಕೆ, ಹೊರ ರಾಜ್ಯಕ್ಕೆ ನೀರುಣಿಸುವ ಕೊಡಗಿನಲ್ಲೇ ನೀರಿಗೆ ಬರ ಕಾಣುತ್ತಿದೆ. ದಕ್ಷಿಣ ಕೊಡಗಿನ ಕೆಲವು ಗ್ರಾಮಗಳಲ್ಲಿಯಂತೂ 20 ಇಂಚಿನಷ್ಟು ಮಾತ್ರ ಮಳೆ ಸುರಿದಿರುವದು ಅಲ್ಲಿನವರಿಗೆ ಆತಂಕ ಮೂಡಿಸುತ್ತಿದೆ.

2013ರಿಂದ ವಾಸ್ತವತೆ...

ಅಂಕಿ - ಅಂಶ ಇಲಾಖೆಯ ಮಾಹಿತಿಯಂತೆ ‘ಶಕ್ತಿ' ಕಳೆದ ನಾಲ್ಕು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬಿದ್ದಿರುವ ಮಳೆಯ ವಿವರವನ್ನು ಇಲ್ಲಿ ನೀಡುತ್ತಿದೆ. ನಾಲ್ಕು ವರ್ಷಗಳ ದಾಖಲೆಯನ್ನು ಅವಲೋಕಿಸಿದರೆ ವರ್ಷದಿಂದ ವರ್ಷಕ್ಕೆ ಮಳೆ ಕಡಿಮೆಯಾಗುತ್ತಿದೆ.

2013ರಲ್ಲಿ ಮಡಿಕೇರಿ ತಾಲೂಕಿನಲ್ಲಿ 166 ಇಂಚು, ಸೋಮವಾರಪೇಟೆಯಲ್ಲಿ 120.22 ಇಂಚು ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 92.59 ಇಂಚು ಮಳೆಯಾಗಿತ್ತು. 2014ರಲ್ಲಿ ಈ ಪ್ರಮಾಣ ಕಡಿಮೆಯಾಗಿದೆ. 2014ರಲ್ಲಿ ಮಡಿಕೇರಿ ತಾಲೂಕಿಗೆ 122.98 ಇಂಚು, ಸೋಮವಾರಪೇಟೆಗೆ 96.74 ಹಾಗೂ ವೀರಾಜಪೇಟೆ ತಾಲೂಕಿಗೆ 76.59 ಇಂಚು ಮಳೆಯಾಗಿದೆ. 2015 (ಕಳೆದ ವರ್ಷ)ರಲ್ಲಿ ಜಿಲ್ಲೆಯ ವಾರ್ಷಿಕ ಮಳೆ ಇನ್ನೂ ಕಡಿಮೆಯಾಗಿದೆ. ಕಳೆದ ವರ್ಷ ಮಡಿಕೇರಿ ತಾಲೂಕಿನಲ್ಲಿ 117.20 ಇಂಚು, ಸೋಮವಾರಪೇಟೆ ತಾಲೂಕಿನಲ್ಲಿ 76.59 ಇಂಚು ಹಾಗೂ ವೀರಾಜಪೇಟೆ ತಾಲೂಕಿನಲ್ಲಿ 94.94 ಇಂಚು ಮಾತ್ರ ಮಳೆಯಾಗಿರುವ ಕುರಿತು ಅಂಕಿ -ಅಂಶ ಇಲಾಖೆಯ ದಾಖಲೆಯಲ್ಲಿದೆ.

ಈ ವರ್ಷ 2016ರಲ್ಲಿ ಬಹುತೇಕ ಅಕ್ಟೋಬರ್ ತಿಂಗಳು ಮುಗಿಯುವ ಹಂತ ತಲಪಿದ್ದು, ವರ್ಷ ಕಳೆಯಲು ಇನ್ನೆರಡು ತಿಂಗಳು ಮಾತ್ರ ಬಾಕಿ ಉಳಿದಿವೆ. ಈ ತನಕ 10 ತಿಂಗಳಲ್ಲಿ ಸುರಿದಿರುವ ಮಳೆ ಈ ಹಿಂದಿನ ವರ್ಷಗಳಿಗಿಂತ ಮತ್ತಷ್ಟು ಕಡಿಮೆಯಾಗಿದೆ. ಈತನಕ ಮಡಿಕೇರಿ ತಾಲೂಕಿಗೆ (ಅ.15ರ ತನಕ) 89.72 ಇಂಚು, ಸೋಮವಾರಪೇಟೆಗೆ 54.79 ಇಂಚು ಮಳೆಯಾಗಿದ್ದರೆ, ವೀರಾಜಪೇಟೆ ತಾಲೂಕಿಗೆ ಕೇವಲ 51.20 ಇಂಚು ಮಾತ್ರ ಮಳೆಯಾಗಿದೆ. ಜಿಲ್ಲಾ ಸರಾಸರಿಯೂ ಸುಮಾರು 17 ಇಂಚು ಕಡಿಮೆ ಇದೆ.

ಈ ಬಾರಿ 2 ತಾಲೂಕು ಬರಪೀಡಿತ

ಜಿಲ್ಲೆಯಲ್ಲಿ ಅದರಲ್ಲೂ ವೀರಾಜಪೇಟೆ ತಾಲೂಕಿನಲ್ಲಿ ಮಳೆ ತೀರಾ ಕಡಿಮೆಯಾಗಿದೆ. ಕಳೆದ ವರ್ಷವೇ ರಾಜ್ಯ ಸರಕಾರ ವೀರಾಜಪೇಟೆಯನ್ನು ಬರಪೀಡಿತ ತಾಲೂಕು ಎಂದು ಘೋಷಿಸಿತ್ತು. ಇದೀಗ ಸತತ ಎರಡನೇ ವರ್ಷವೂ ವೀರಾಜಪೇಟೆ ತಾಲೂಕು ಬರಪೀಡಿತ ಎಂದು ಘೋಷಣೆ ಯಾಗಿದೆ. ಇದರೊಂದಿಗೆ ಮಡಿಕೇರಿ ತಾಲೂಕನ್ನೂ ಈ ಬಾರಿ ರಾಜ್ಯ ಸರಕಾರ ಬರಪೀಡಿತ ಎಂದು ಪರಿಗಣಿಸಿದೆ.

ಮಳೆ ಇಳಿಮುಖಗೊಳ್ಳುತ್ತಿರು ವದನ್ನು ಹಲವರು ಹಲವು ರೀತಿಯಲ್ಲಿ ವಿಶ್ಲೇಷಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಮರಹನನ, ರೆಸಾರ್ಟ್‍ಗಳ ಹೆಚ್ಚಾಗುವಿಕೆ, ಕೃಷಿಯ ಬದಲು ಇತರ ಚಟುವಟಿಕೆ ಅಧಿಕಗೊಳ್ಳುತ್ತಿರುವ ದರಿಂದ ಮಳೆ ಕ್ಷೀಣಿಸುತ್ತಿದೆ ಎಂಬದು ಕೆಲವರ ಅಭಿಪ್ರಾಯವಾಗಿದೆ. ಮಂಡ್ಯ, ಮೈಸೂರು, ಬೆಂಗಳೂರು, ತಮಿಳುನಾಡಿನ ಜನರು ಕೊಡಗಿನ ಕಾವೇರಿಯ ನೀರನ್ನು ಅವಲಂಭಿಸಿ ದ್ದಾರೆ. ಈ ವರ್ಷ ಕಾವೇರಿ ಜಲ ವಿವಾದವೂ ತಾರಕಕ್ಕೇರಿದೆ. ಈ ವಿಭಾಗದವರಿಗೆ ನೀರುಣಿಸುತ್ತಿದ್ದ ಕಾವೇರಿ ತಪ್ಪಲಿನಲ್ಲೇ ನೀರಿಗಾಗಿ ಹಪಹಪಿಸುವಂತಾಗುತ್ತಿರುವದು ಗಂಭೀರ ವಿಚಾರವಾಗಿದೆ. ಭತ್ತದ ಕೃಷಿ ಮಾಡಿರುವ ಹಲವರು ಗದ್ದೆಗೆ ನೀರಿಲ್ಲದೆ ನೀರು ಹಾಯಿಸುತ್ತಿರುವ ಸನ್ನಿವೇಶವೂ ಕಂಡುಬರುತ್ತಿದೆ.