ಕುಶಾಲನಗರ, ಆ. 10: ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಾಂಶುಪಾಲರ ರಾಜೀನಾಮೆಗೆ ಕಾಲೇಜು ಆಡಳಿತ ಮಂಡಳಿ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ಘಟನೆ ಕುಶಾಲನಗರ ಮಹಾತ್ಮಾ ಗಾಂಧಿ ಪದವಿ ಕಾಲೇಜಿನಲ್ಲಿ ಬುಧವಾರ ನಡೆಯಿತು.

ಕಾಲೇಜಿನಲ್ಲಿ ಹಲವಾರು ವರ್ಷಗಳಿಂದ ಪ್ರಾಂಶುಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದ ಟಿ.ವಿ. ಪಂಡರಿನಾಥ ನಾಯ್ಡು ಅವರು ಬುಧವಾರ ದಿಢೀರನೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅವರ ರಾಜೀನಾಮೆಗೆ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷರೇ ನೇರ ಹೊಣೆ ಎಂದು ಆರೋಪಿಸಿದ ಕಾಲೇಜು ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಮರಳಿ ಕರೆ ತರುವಂತೆ ಆಗ್ರಹಿಸಿ ತರಗತಿ ಗಳನ್ನು ಬಹಿಷ್ಕರಿಸಿ ಪ್ರತಿಭಟಿಸಿದರು.

ಈ ಸಂದರ್ಭ ಮಾತನಾಡಿದ ಕಾಲೇಜು ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ಆಶಿಕ್, ಆಡಳಿತ ಮಂಡಳಿ ಅಧ್ಯಕ್ಷರ ಒತ್ತಡದಿಂದಾಗಿ ಪ್ರಾಂಶುಪಾಲರು ರಾಜೀನಾಮೆ ನೀಡಿದ್ದಾರೆ. ದಿನಕ್ಕೊಂದು ಹೊಸ ಕಾನೂನು ಸೃಷ್ಟಿಸುತ್ತಿರುವ ಅಧ್ಯಕ್ಷರು ತಮ್ಮ ವೈಯಕ್ತಿಕ ಕಾರಣಗಳಿಗೆ ಪ್ರಾಂಶುಪಾಲರನ್ನು ಹೊಣೆ ಗಾರರಾಗಿಸಿ ಅಪಮಾನ ಮಾಡಿದ್ದಾರೆ. ಇದರಿಂದ ಬೇಸತ್ತ ಪ್ರಾಂಶುಪಾಲರು ರಾಜೀನಾಮೆ ನೀಡಿ ತೆರಳಿದ್ದಾರೆ ಎಂದು ಮಾಹಿತಿ ನೀಡಿದರು. ಕೂಡಲೆ ಪ್ರಾಂಶುಪಾಲರಲ್ಲಿ ಕ್ಷಮೆಯಾಚಿಸಿ ಮರಳಿ ಕರೆ ತರುವಂತೆ ಒತ್ತಾಯಿಸಿದ ವಿದ್ಯಾರ್ಥಿಗಳು ತಪ್ಪಿದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಉಗ್ರ ಪ್ರತಿಭಟನೆ ನಡೆಸಲಾಗುವದು ಎಂದು ಎಚ್ಚರಿಸಿದ್ದಾರೆ.

ಈ ಸಂದರ್ಭ ವಿದ್ಯಾರ್ಥಿ ಸಂಘದ ಪ್ರಮುಖರಾದ ಜಯಶ್ರೀ, ಸೌಕತ್, ಅಪೂರ್ವ, ರಂಜು, ದೀಕ್ಷಿತಾ, ಮಂಜುಳಾ ಮತ್ತು ಪದವಿ ತರಗತಿಯ ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.