ಸಿದ್ದಾಪುರ, ಅ. 31: ಕಾರ್ಯಕರ್ತರೆ ಪಕ್ಷದ ಜೀವನಾಡಿ ಎಂದು ರಾಜ್ಯ ಬಿ.ಜೆ.ಪಿ ಕಾರ್ಯದರ್ಶಿ ಹಾಗೂ ಮಾಜಿ ಸಂಸದೆ ತೇಜಸ್ವಿನಿ ರಮೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ನಡೆದ ವೀರಾಜಪೇಟೆ ತಾಲೂಕು ಬಿ.ಜೆ.ಪಿ ಪಕ್ಷದ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾರ್ಯಕರ್ತರೆ ಪಕ್ಷದ ಆಧಾರ ಸ್ಥಂಭವಾಗಿದ್ದು, ಕಾರ್ಯಕರ್ತರನ್ನು ಕಡೆಗಣಿಸಬಾರದೆಂದು ತಿಳಿಸಿದರು. ಮುಂಬರುವ ವಿಧಾನ ಸಭಾ ಚುನಾವಣೆಯಲ್ಲಿ ಬಿ.ಜೆ.ಪಿ ಆಡಳಿತದ ಚುಕ್ಕಾಣಿ ಹಿಡಿಯುವದಾಗಿ ಭವಿಷ್ಯ ನುಡಿದರು.

ಇತ್ತೀಚೆಗೆ ಭಾರತದ ಸೈನಿಕರು ಪಾಕಿಸ್ತಾನ ಆಕ್ರಮಿತ ಪ್ರದೇಶದಲ್ಲಿ ಧಾಳಿ ನಡೆಸಿ, ಉಗ್ರರನ್ನು ಹೊಡೆದುರುಳಿಸಿರು ವದು ಪ್ರಧಾನಿ ಮೋದಿಯವರ ದಿಟ್ಟತೆಗೆ ಹಿಡಿದ ಕೈಗನ್ನಡಿಯಾಗಿದೆ. ದೇಶದ ಸಂಸ್ಕøತಿ, ಅಖಂಡತೆ, ಐಕ್ಯತೆಯನ್ನು ಕಾಪಾಡಲು ಬಿ.ಜೆ.ಪಿ ಪಕ್ಷದಿಂದ ಮಾತ್ರ ಸಾಧ್ಯ ಎಂದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಕೇಂದ್ರ ಸರಕಾರದ ಯೋಜನೆಗಳನ್ನು ಸಮರ್ಪಕವಾಗಿ ಜನರ ಬಳಿ ತಲಪಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು. ಮೋದಿ ಸರಕಾರ ಆಡಳಿತಕ್ಕೆ ಬಂದ ಬಳಿಕ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು, ದೇಶವು ಅಭಿವೃದ್ಧಿ ಪಥದತ್ತ ಸಾಗುತ್ತಿದೆ ಎಂದರು. ಪಕ್ಷದ ಆಂತರಿಕ ವಿಚಾರವನ್ನು ಪಕ್ಷದ ಒಳಗೆ ಬಗೆಹರಿಸಿಕೊಳ್ಳಬೇಕೆಂದರು. ಜಿಲ್ಲೆಯಲ್ಲಿ ಟಿಪ್ಪೂ ಜಯಂತಿ ಆಚರಿಸುವದಕ್ಕೆ ತೀವ್ರ ವಿರೋಧವಿದ್ದು, ಸರಕಾರ ಜಿಲ್ಲೆಯಲ್ಲಿ ಟಿಪ್ಪು ಜಯಂತಿ ಆಚರಿಸಬಾರದು ಹಾಗೂ ಕಾರ್ಯಕರ್ತರು ಟಿಪ್ಪು ಜಯಂತಿ ಯನ್ನು ತಡೆಹಿಡಿಯಬೇಕೆಂದು ಕರೆ ನೀಡಿದರು.

ಪಕ್ಷದ ಜಿಲ್ಲಾಧ್ಯಕ್ಷ ಮನು ಮುತ್ತಪ್ಪ ಮಾತನಾಡಿ, ಜಿಲ್ಲೆಯು ಬಿ.ಜೆ.ಪಿ ಯ ಭದ್ರಕೋಟೆಯಾಗಿದ್ದು, ಈಗಾಗಲೇ ಪಕ್ಷವೂ ರಾಷ್ಟ್ರಾದ್ಯಂತ 11 ಕೋಟಿ ಸದಸ್ಯತ್ವವನ್ನು ಹೊಂದಿದ್ದು, ರಾಜ್ಯದಲ್ಲಿ 1 ಕೋಟಿ ಸದಸ್ಯರನ್ನು ಹೊಂದಿದೆ ಎಂದರು. ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಅಭಿವೃದ್ಧಿ ಕುಂಠಿತಗೊಂಡಿದ್ದು, ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ ಎಂದು ದೂರಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್ ಮಾತನಾಡಿ, ಟಿಪ್ಪು ಜಯಂತಿ ಆಚರಣೆಯ ವಿರುದ್ಧ ಮಹಿಳಾ ಸಂಘಟನೆಗಳನ್ನು ಒಗ್ಗೂಡಿಸಿ, ನವೆಂಬರ್ 2 ರಂದು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ತಾಲೂಕು ಅಧ್ಯಕ್ಷ ಕುಞಂಡ ಅರುಣ್ ಭೀಮಯ್ಯ ಸಭೆಯ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಚಿ.ನಾ. ಸೋಮೇಶ್ ದೀನದಯಾಳ್ ಉಪಾಧ್ಯಾಯ ಹಾಗೂ ಡಾ. ಬಿ.ಆರ್ ಅಂಬೆಡ್ಕರ್‍ರವರ ವಿಚಾರಧಾರೆಗಳ ಬಗ್ಗೆ ಮಾಹಿತಿ ನೀಡಿದರು.

ಈ ಸಂದರ್ಭ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ ಲೊಕೇಶ್, ಬಾಲಚಂದ್ರ ಕಳಗಿ, ಮುಖಂಡರುಗಳಾದ ರೀನಾ ಪ್ರಕಾಶ್, ನೆಲ್ಲಿರ ಚಲನ್, ಸುವಿನ್ ಗಣಪತಿ, ಬಾಂಡ್ ಗಣಪತಿ, ಶಶಾಂಕ್ ಭೀಮಯ್ಯ, ಗಿರೀಶ್ ಗಣಪತಿ, ಈ.ಸಿ ಜೀವನ್, ಸುಮಿ ಸುಬ್ಬಯ್ಯ, ಕೂತಂಡ ಸಚಿನ್, ಸ್ಮಿತ ಪ್ರಕಾಶ್, ಊರ್ಮಿಳ, ಸಿದ್ದಾಪುರ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಡಿ ನಾಣಯ್ಯ ಸೇರಿದಂತೆ ಇನ್ನಿತರ ನಾಯಕರು ಹಾಗೂ ಕಾರ್ಯಕರ್ತರು ಹಾಜರಿದ್ದರು. ಇದೇ ಸಂದರ್ಭ ತೀತಿರ ರಾಜ, ತೀತಿರ ದರ್ಶನ್ ಜಿ.ಜೆ.ಪಿ ಸೇರ್ಪಡೆಗೊಂಡರು. ಕಾರ್ಯಕ್ರಮ ವನ್ನು ಸುವಿನ್ ಗಣಪತಿ ಸ್ವಾಗತಿಸಿ, ಸುಮಿ ಸುಬ್ಬಯ್ಯ ಪ್ರಾರ್ಥಿಸಿ, ಪಕ್ಷದ ಉಪಾಧ್ಯಕ್ಷ ಗಣೇಶ್ ವಂದಿಸಿದರು.