ಮಡಿಕೇರಿ, ಡಿ. 28: ವೀರಾಜಪೇಟೆ ತಾಲೂಕಿನ ಹುದಿಕೇರಿ ವ್ಯಾಪ್ತಿಯ ಟೀ ಎಸ್ಟೇಟ್‍ವೊಂದರಲ್ಲಿ ವಿದ್ಯುತ್ ತಂತಿ ಬಿದ್ದ ಪರಿಣಾಮ ಅಸ್ವಸ್ಥಗೊಂಡಿರುವ ಇಬ್ಬರು ಕಾರ್ಮಿಕರಿಗೆ ತೋಟದ ಮಾಲೀಕರು ಹಾಗೂ ವಿದ್ಯುತ್ ಇಲಾಖೆ ಸೂಕ್ತ ಪರಿಹಾರ ನೀಡಬೇಕೆಂದು ಮಾನವ ಹಕ್ಕುಗಳ ಜಾಗೃತಿ ಸಮಿತಿ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾಧ್ಯಕ್ಷ ಸಂದೇಶ್ ಜೋಸೆಫ್ ಡಿಸೋಜ, ತೋಟದ ಮಾಲೀಕರುಗಳಿಗೆ ಆದಾಯ ಬೇಕೆÉೀ ಹೊರತು ಕಾರ್ಮಿಕರ ಯೋಗಕ್ಷೇಮದ ಅಗತ್ಯವಿಲ್ಲವೆಂದು ಆರೋಪಿಸಿದರು. ಕೇವಲ ದುಡಿಸಿಕೊಳ್ಳುವ ಮೂಲಕ ಕಾರ್ಮಿಕರ ಮೇಲೆ ಶೋಷಣೆ ಮಾಡದೆ, ಸಂಕಷ್ಟ ಎದುರಾದಾಗ ಸಹಾಯ ಹಸ್ತ ಚಾಚುವ ಕಾರ್ಯವನ್ನು ತೋಟದ ಮಾಲೀಕರು ಮಾಡಬೇಕು. ಕಾರ್ಮಿಕ ಇಲಾಖೆಯ ನಿಯಮಗಳನ್ನು ಪಾಲಿಸಬೇಕೆಂದು ಒತ್ತಾಯಿಸಿದ ಅವರು, ಕಾರ್ಮಿಕ ಇಲಾಖೆಯಿಂದ ನೀಡಲಾಗುವ ಸೌಲಭ್ಯಗಳನ್ನು ಪಡೆಯಲು ಕಾರ್ಮಿಕರು ಕೂಡ ಮುಂದೆ ಬರಬೇಕೆಂದು ಕರೆ ನೀಡಿದರು.

ಮಹಿಳಾ ಘಟಕದ ಅಧ್ಯಕ್ಷೆ ಪಡಿಕಲ್ ಕುಸುಮಾವತಿ ಚಂದ್ರಶೇಖರ್ ಮಾತನಾಡಿ, ವಿದ್ಯುತ್ ತಂತಿ ಬಿದ್ದು ಆಘಾತಕ್ಕೆ ಒಳಗಾಗಿರುವ ಕಾರ್ಮಿಕರಾದ ಸೆಲ್ವಿ ಹಾಗೂ ವಿ. ಪೊನ್ನಮ್ಮ ಅವರಿಗೆ ತೋಟದ ಮಾಲೀಕರು ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು. ತೋಟಗಳಲ್ಲಿ ಹಾದುಹೋಗಿರುವ ವಿದ್ಯುತ್ ತಂತಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದರೆ, ಸಂಬಂಧಿಸಿದ ಇಲಾಖೆಗೆ ದೂರು ನೀಡುವ ಮೂಲಕ ಕಾರ್ಮಿಕರಿಗೆ ಎದುರಾಗಬಹುದಾದ ಅಪಾಯವನ್ನು ತಪ್ಪಿಸಬೇಕೆಂದು ಒತ್ತಾಯಿಸಿದರು.

ಸೆಲ್ವಿ ಮತ್ತು ಪೊನ್ನಮ್ಮ ಪ್ರಕರಣಕ್ಕೆ ಸಂಬಂಧಿಸಿದಂತೆ ವಿದ್ಯುತ್ ಪ್ರಸರಣ ನಿಗಮ ಕೂಡ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ಮಾನವ ಹಕ್ಕುಗಳ ಸಂಘÀಟನೆಯ ಹೆಸರಿನಲ್ಲಿ ಕೆಲವರು ದಂಧೆ ನಡೆಸುತ್ತಿರುವ ಬಗ್ಗೆ ಆರೋಪಗಳಿದ್ದು, ಇಂತಹವರ ವಿರುದ್ಧ ಜಾಮೀನು ರಹಿತ ಶಿಕ್ಷೆ ಆಗಲಿದೆಯೆಂದು ಪ್ರಮುಖರು ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಮುಖರಾದ ಹೆಚ್.ಎಂ. ಚಂದ್ರ ಹಾಗೂ ಆರ್. ವಿಜಯ ಉಪಸ್ಥಿತರಿದ್ದರು.